ದಾವಣಗೆರೆ:
ಶೋಷಣೆ, ದೌರ್ಜನ್ಯ, ಜಾತಿಯತೆ, ಕಂದಾಚಾರಗಳನ್ನು ಕಿತ್ತೊಗೆದು, ಸಮ ಸಮಾಜ ನಿರ್ಮಾಣಕ್ಕಾಗಿ ಯುವಕರು ಸಾಮಾಜಿಕ ಹೋರಾಟದಲ್ಲಿ ಪಾಲ್ಗೊಳ್ಳಲು ಅಣಿಯಾಗಬೇಕೆಂದು ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಕರೆ ನೀಡಿದರು.
ಇಲ್ಲಿನ ಭಾಷಾ ನಗರದ ಉರ್ದು ಶಾಲೆಯಲ್ಲಿ ಸೋಮವಾರ ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಸಹಯೋಗದಲ್ಲಿ ಏರ್ಪಡಿಸಿದ್ದ ಯುವಜನರ ಸಂಘಟನೆ ಹಾಗೂ ಸಾಮಾಜಿಕ ಹೋರಾಟ ಕುರಿತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಜನತೆ ರಾಜಕೀಯ ಪಕ್ಷಗಳ ಕಾಲಾಳುಗಳಾಗದೇ, ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಮಾಜ ಪರಿವರ್ತನೆಗೆ ಮುಂದಾಗಬೇಕೆಂದು ಕಿವಿಮಾತು ಹೇಳಿದರು.
ಯುವಕರನ್ನು ವಿಶಾಲ ದೃಷ್ಠಿಕೋನದ ಮೂಲಕ ಹೋರಾಟಕ್ಕೆ ಸಜ್ಜುಗೊಳಿಸಬೇಕಾದ ಅವಶ್ಯಕತೆ ಇದೆ. ಭಾರತ ಪ್ರಸ್ತುತ ವಿವಿಧ ತಲ್ಲಣಗಳನ್ನು ಎದುರಿಸುತ್ತಿದ್ದು, ಯುವ ಜನರನ್ನು ಉನ್ಮಾದದಲ್ಲಿ ಇಡುವ ಪಿತೂರಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಜಾತಿವಾದ ಹಾಗೂ ಕೋಮುವಾದದಿಂದ ಭಾವೈಕ್ಯತೆಯಡೆಗೆ ಯುವ ಜನರನ್ನು ಕರೆ ತರುವ ಮೂಲಕ ಸೌಹಾರ್ದಯುತ ದೇಶ ನಿರ್ಮಿಸುವುದು ಇಂದಿನ ಜರೂರಾಗಿದೆ ಎಂದರು.
ದೇಶದ ಶೇ.75ರಷ್ಟು ಆಸ್ತಿಯು ಕೇವಲ 100 ಕುಟುಂಬದವರ ಕೈಯಲ್ಲಿ ಕ್ರೋಢೀಕರಣಗೊಂಡಿದೆ. ಸಾವಿರಾರು ಎಕರೆ ಭೂಮಿಯನ್ನು ಬಂಡವಾಳ ಶಾಹಿಗಳಿಗೆ ಕೊಡುವ ಸರ್ಕಾರಗಳು ಬಡವರಿಗೆ ಮನೆ ಕಟ್ಟಲು ಭೂಮಿ ಇಲ್ಲ ಎನ್ನುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದ್ದು, ಇದು ಇಂದಿನ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಆಗಿದೆ ಎಂದರು.
ವಿಧಾನಸಭೆ ಹಾಗೂ ಸಂಸತ್‍ಗಳಲ್ಲಿ ಸಾಮಾನ್ಯ ಜನರ ಸಮಸ್ಯೆಗಳ ಚರ್ಚೆ ನಡೆಯುತ್ತಿಲ್ಲ. ಆದರೆ, ಜನರು ತಿನ್ನುವ ಆಹಾರ, ಧರಿಸುವ ಬಟ್ಟೆ, ಆಡುವ ಭಾಷೆಗಳ ಆಧಾರದ ಮೇಲೆ ಚರ್ಚೆ ನಡೆಯುತ್ತಿವೆ ಎಂದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್.ಅರುಣ್‍ಕುಮಾರ್ ಮಾತನಾಡಿ, ದೇಶದ ಭವಿಷ್ಯ ಮತ್ತು ಭರವಸೆ ಯುವಜನರಾಗಿದ್ದಾರೆ. ಭಾರತದಲ್ಲಿ ಶೇ.40 ರಷ್ಟು ಜನ ಯುವ ಮತದಾರರೇ ಇದ್ದಾರೆ. ಆದರೆ, ಈ ದೇಶದ ಯುವಜನತೆಗೆ ವರ್ತಮಾನದ ಪ್ರಜಾತಂತ್ರವು ನಮ್ಮ ಸಂವಿಧಾನ ನೀಡಿದ ಭರವಸೆಯಷ್ಟು ನೆಮ್ಮದಿ ನೀಡುತ್ತಿಲ್ಲ ಎಂದರು.
ದೇಶದ ಬದುಕು ಮತ್ತಷ್ಟು ಸಹ್ಯ ಮತ್ತು ಮಾನವೀಯಗೊಳ್ಳಬೇಕಾದರೆ ಈ ದೇಶದ ಭವಿಷ್ಯ ಆಗಿರುವ ಯುವ ಜನರಲ್ಲಿ ಪ್ರಭುದ್ದ ಪ್ರಜಾತಂತ್ರ ಮತ್ತು ನೈಜ ಸಮಾಜವಾದದ ದರ್ಶನವನ್ನು ಗಂಭೀರವಾಗಿ ಮತ್ತು ವಿಮರ್ಶಾತ್ಮಕವಾಗಿ ತಿಳಿಸುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಧರ್ಮ, ಜಾತಿ, ಭಾಷೆ, ವರ್ಗಗಳ ಬೇಧಭಾವದಿಂದ ಯುವಕರು ವ್ಯವಸ್ಥೆ ಬಗ್ಗೆ ನಿರಾಸಕ್ತಿ ಹೊಂದಿದ್ದು, ಅವರನ್ನು ಇಂತಹ ವ್ಯವಸ್ಥೆಯಿಂದ ಹೊರತಂದು ಜವಾಬ್ದಾರಿಯುತ ಯುವಶಕ್ತಿಯನ್ನು ಕಟ್ಟಬೇಕಾಗಿದೆ. ಆ ಮೂಲಕ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಸಮಾಜವನ್ನು ನೆಲೆಗೊಳಿಸಬೇಕೆಂದು ಕರೆ ನೀಡಿದರು.
ಜಾತಿ, ಬಡತನ ಮತ್ತು ಭ್ರಷ್ಠಾಚಾರ ದೇಶದ ಅಭಿವೃದ್ದಿಗೆ ಮಾರಕವಾಗಿವೆ. ಬಡತನ ಎಂದರೆ ಕೇವಲ ಹಸಿದ ಹೊಟ್ಟೆ, ಹರಕು ಬಟ್ಟೆ, ಮುರುಕು ಗುಡಿಸಲು ಅಲ್ಲ. ಬಡತನ ಎಂದರೆ, ಅವಮಾನ, ಅಸಹಾಯಕತೆ, ಸಂಘರ್ಷ, ನೋವು ಎನ್ನುವುದನ್ನು ಇಂದಿನ ಯುವ ಜನತೆ ಅರ್ಥ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ದಲಿತ ಶೋಷಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಹೆಗ್ಗೆರೆ ರಂಗಪ್ಪ, ಹೆಗಡೆ ನಗರ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜೆ.ಅಮಾನುಲ್ಲಾ ಖಾನ್, ಸ್ಲಂ ಜನಾಂದೋಲನ ಜಿಲ್ಲಾಧ್ಯಕ್ಷ ಎಂ.ಶಬ್ಬೀರ್‍ಸಾಬ್, ಜಿಲ್ಲಾ ಸಂಚಾಲಕಿ ರೇಣುಕಾ ಯಲ್ಲಮ್ಮ, ಕಾರ್ಯದರ್ಶಿ ಮೊಹಮ್ಮದ್ ಮೌಸೀನ್, ಸಹ ಕಾರ್ಯದರ್ಶಿ ಮೊಹಮ್ಮದ್ ಹಯಾತ್, ಕಾಂಗ್ರೆಸ್ ಮುಖಂಡ ಶೇಕ್ ಅಹಮದ್ ಸಾಬ್ ಮತ್ತಿತರರು ಉಪಸ್ಥಿತರಿದ್ದರು.