ದಾವಣಗೆರೆ :
ಪ್ರಸ್ತುತ ನಡಯುತ್ತಿರುವ ಚುನಾವಣೆ ಯಾವುದೇ ಜಾತಿ-ಉಪಜಾತಿಗಳ ನಡುವಿನ ಚುನಾವಣೆಯಲ್ಲ. ಇದು ದೇಶಕ್ಕಾಗಿ ನಡೆಯುತ್ತಿರುವ ಚುನಾವಣೆಯಾಗಿದೆ. ಭಾರತದ ಸುರಕ್ಷತೆ, ಸಮಗ್ರತೆಗೆ ವಿರುದ್ಧವಾಗಿರುವವರರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಶಾಸಕ ಮುರುಗೇಶ್ ನಿರಾಣಿ ಕರೆ ನೀಡಿದರು.
ಹರಿಹರ ತಾಲೂಕಿನ ಕೆ.ಬೇವಿನಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಚುನಾವಣೆ ನಡೆಯುತ್ತಿದ್ದು, ಈ ಸಮರದಲ್ಲಿ ಭಾರತವನ್ನು ವಿರೋಧಿಸುತ್ತಿರುವರಿಗೆ ತಕ್ಕ ಪಾಠ ಕಲಿಸುವ ಸಲುವಾಗಿ ನರೇಂದ್ರ ಮೋದಿಯವರ ಕೈಬಲ ಪಡಿಸಬೇಕೆಂದು ಮನವಿ ಮಾಡಿದರು.
ದೇಶದ ಸಮಗ್ರತೆಯನ್ನು ಗಮನಲ್ಲಿಟ್ಟುಕೊಂಡು ಸದಾ ಜನಸಾಮಾನ್ಯರ ಒಡನಾಡಿಯಾಗಿರುವ ಜಿ.ಎಮ್. ಸಿದ್ದೇಶ್ವರ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಲೋಕಸಭೆಗೆ ಆರಿಸಿಕಳುಹಿಸಬೇಕಾಗಿದೆ ಎಂದ ಅವರು, ರಾಜ್ಯದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಮೇಲೆ ನಮಗೆಲ್ಲಾ ಸಾಕಷ್ಟು ಆದ್ಯತೆಯನ್ನು ಕಲ್ಪಿಸಿಕೊಟ್ಟಿದ್ದಾರೆ, ಈ ಲೋಕಸಭಾ ಚುನಾವಣೆಯಲ್ಲಿಯೂ ಸಹ ಮೂರ್ನಾಲ್ಕು ಜನರಿಗೆ ಟಿಕೆಟ್ ನೀಡಿದ್ದಾರೆ, ಇದಲ್ಲದೇ ನಮ್ಮ ಸಮಾಜಕ್ಕೆ ಆದ್ಯತೆ ನೀಡಿ ಸರ್ವತೋಮುಖ ಅಭಿವೃದ್ದಿಗೆ ಮುನ್ನುಡಿ ಬರೆದಿದ್ದಾರೆ, ಸದಾ ಸಮಾಜದ ಹಿತಾಕಾಯುತ್ತಿರುವ ಬಿ.ಜೆ.ಪಿ. ಪಕ್ಷದ ಬೆನ್ನಿಗೆ ನಾವು ನೀವೆಲ್ಲರೂ ನಿಲ್ಲಬೇಕು ಎಂದರು.
ಈಗ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗಾಗಿ ಶೇಕಡ 10 ರಷ್ಟು ಮೀಸಲಾತಿಯನ್ನು ನೀಡಿದೆ, ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕೂಡ ಈ ಬಾರಿ ಹತ್ತು ಸಲ ಯೋಚನೆ ಮಾಡಿ ಮತ ಚಲಾಯಿಸಬೇಕು. ಈ ಕ್ಷೇತ್ರದಲ್ಲಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಕನಸು ಕಂಡಿದ್ದಾರೆ, ಅವರ ಕನಸುಗಳನ್ನು ನನಸಾಗಿಸಲು 23 ರಂದು ನಡೆಯುವ ಚುನಾವಣೆಯಲ್ಲಿ ನಿಮ್ಮ ಪ್ರತಿಯೊಂದು ಮತಗಳು ಜಿ.ಎಂ.ಸಿದ್ದೇಶ್ವರರವರಿಗೆ ಮೀಸಲಾಗಿರಲಿ ಎಂದರು.
ಉಳಿದಿರುವ ಮೂರು ದಿನಗಳ ಕಾಲ ನಾವು ನೀವೆಲ್ಲರೂ ಸೈನಿಕರ ರೀತಿಯಲ್ಲಿ ಕೆಲಸ ಮಾಡಿ ಅತಿ ಹೆಚ್ಚಿನ ಮತಗಳಿಂದ ಸಿದೇಶ್ವರರವರನ್ನು ಗೆಲ್ಲಿಸೋಣ ಎಂದು ಕರತೆ ನೀಡಿದರು.ಹರಿಹರ ವಿಧಾನಸಭಾ ಕ್ಷೇತ್ರದ ಮಿಟ್ಲಕಟ್ಟೆ, ಸಾಲಕಟ್ಟೆ, ಬನ್ನಿಕೋಡು, ಕೆ.ಬೇವಿನಹಳ್ಳಿ, ಕಡ್ಲೆಗೊಂದಿ, ದೇವರಬೆಳಕೆರೆ, ಕುಣೇಬೆಳಕೆರೆ, ನಂದಿತಾವರೆ, ಭಾನುವಳ್ಳಿ, ಕಮಲಾಪುರ, ಹೊಳೆಸಿರಿಗೆರೆ, ಎಳೆಹೊಳೆ, ಹುಲಗಿನಹೊಳೆ, ಧುಳೆಹೊಳೆ, ಗ್ರಾಮಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದರು.
ಮುರುಗೇಶ್ ನಿರಾಣಿಯವರ ಜೊತೆ ಪಂಚಮಸಾಲಿ ಸಮಾಜದ ಮುಖಂಡರಾದ ಹೊಳೆಸಿರಿಗೆರೆ ಗ್ರಾಮದ ಎನ್.ಜಿ.ನಾಗನಗೌಡ್ರು, ಚಂದ್ರಶೇಖರ್ ಪೂಜಾರ್, ಆರ್.ಸಿ. ಪಟೇಲ್, ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ಕೊಟ್ರೇಶ್, ಹಾಗೂ ಡಿ.ಸಿ.ಸಿಬ್ಯಾಂಕ್ ನಿರ್ದೇಶಕರಾದ ಹೊಳೆಸಿರಿಗೆರೆ ಹಾಲೇಶಪ್ಪ, ಗುತ್ತೂರು ಕರಿಬಸಪ್ಪ, ಭಾನುವಳ್ಳಿ ಕರಿಸಬಪ್ಪ ಸೇರಿದಂತೆ ಅನೇಕ ಮುಖಂಡರು ಪ್ರವಾಸದಲ್ಲಿದ್ದರು.