ಜವಾಬ್ದಾರಿಯುತ ಸಮಾಜ ಕಟ್ಟುವಲ್ಲಿ ಸಾಹಿತಿ ಕಲಾವಿದರ ಪಾತ್ರ ಪ್ರಮುಖ:ಕೆ.ಲೀಲಾವತಿ

ಹಾವೇರಿ

      ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಜಾಗೃತಿಯ ಅರ್ಥಪೂರ್ಣವಾದ ಮತಗೋಷ್ಠಿ(ಕವಿಗೋಷ್ಠಿ) ವಾರ್ತಾ ಭವನದಲ್ಲಿ ಶುಕ್ರವಾರ ಜರುಗಿತು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ಭಾಗದ 23 ಕವಿಗಳು ಭಾಗವಹಿಸಿ ಮತದಾನದ ಮಹತ್ವ ಸಾರುತ್ತ ಪ್ರಜಾಪ್ರಭುತ್ವ ವ್ಯವಸ್ಥೆ ಗೆಲ್ಲಿಸಲು ಆಮಿಷಕ್ಕೊಳಗಾಗದೆ ತಮ್ಮ ಮತದಾನ ಹಕ್ಕನ್ನು ಚಲಾಯಿಸುವಂತೆ ಕಾವ್ಯದ ಮೂಲಕ ಕರೆ ನೀಡಿದರು.

      ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ಮಾತನಾಡಿ, ಸಂವೇಧನಾಶೀಲ ಮತ್ತು ಜವಾಬ್ದಾರಿಯುತ ಸಮಾಜ ಕಟ್ಟುವಲ್ಲಿ ಸಾಹಿತಿ, ಕಲಾವಿದರ ಪಾತ್ರ ಬಹು ಪ್ರಮುಖವಾಗಿರುತ್ತದೆ. ಜಿಲ್ಲೆಯ ಕವಿಗಳು ತಮ್ಮ ಕಾವ್ಯದ ಮೂಲಕ ಮತದಾನದ ಮಹತ್ವ ಸಾರುವ ಕವನವಾಚನ ಅರ್ಥಪೂರ್ಣ ಎಂದು ಹೇಳಿದರು.

      ಮತಗೋಷ್ಠಿ ಉದ್ದೇಶಿಸಿ ವಿಕಲಚೇತನ ಮತದಾರರ ಜಿಲ್ಲಾ ರಾಯಭಾರಿ ಹಸೀನಾ ಹೆಡಿಯಾಲ ಅವರು ಮಾತನಾಡಿ, ವಿಕಲಚೇತನರಿಗೆ ಅನುಕಂಪಬೇಡ ಅವಕಾಶಬೇಕು. ವಿಕಲಚೇತನರು ಸರಾಗವಾಗಿ ಮತ ಚಲಾಯಿಸಲು ರ್ಯಾಂಪ್, ವ್ಹೀಲ್ ಚೇರ್, ಬ್ರೈಲ್ ಲಿಪಿ ಒಳಗೊಂಡಂತೆ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ಎಲ್ಲ ವ್ಯವಸ್ಥೆಮಾಡಿದೆ. ಅಂಗವಿಕಲರು, ಅಂಧರು, ಕಿವುಡರು ಸೇರಿದಂತೆ 18 ಬಗೆಯ ವಿಕಲಚೇತನರ ನಿರ್ಭಯವಾಗಿ ಮತದಾನ ಮಾಡಲು ಮುಕ್ತವಾಗಿ ಅವಕಾಶ ಕಲ್ಪಿಸಿದೆ. ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.

       ಅಧ್ಯಕ್ಷತೆ ವಹಿಸಿದ್ದ ಗಂಗಾಧರ ನಂದಿ ಅವರು ಮಾತನಾಡಿ, ನಗರದ ಸುಶಿಕ್ಷಿತರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸಬೇಕು. ಅಂದಾಗ ಮಾತ್ರ ಮತದಾನದ ಶೇಕಡವಾರು ಪ್ರಮಾಣ ಹೆಚ್ಚಳವಾಗುತ್ತದೆ. ಹೆಚ್ಚು ಮತದಾನವಾದರೆ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಲು ಸಾಧ್ಯ ಎಂದು ಹೇಳಿದರು.

       ವಾರ್ತಾಧಿಕಾರಿ ಬಿ.ಆರ್.ರಂಗನಾಥ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಾಹಿತ್ಯ ಸದಾ ಸಮತೋಲನ ಸಮತಾ ಸಮಾಜವನ್ನು ಕಟ್ಟುವಲ್ಲಿ ದಿಟ್ಟ ಪಾತ್ರವಹಿಸುತ್ತದೆ. ಸಾಹಿತಿಗಳು ಕಲಾವಿದರು, ಹೊಸ ಕಾಲದಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಒಂದು ಪ್ರಯತ್ನ ಮತದಾನ ಜಾಗೃತಿ ಕವಿಗೋಷ್ಠಿ ಎಂದು ಹೇಳಿದರು. ವೇದಿಕೆಯಲ್ಲಿ ಹಿರಿಯ ಆರ್.ಎಫ್.ಕಾಳೆ ಉಪಸ್ಥಿತರಿದ್ದರು. ಸಾಹಿತಿ ಸತೀಶ ಕುಲಕರ್ಣಿ ಕವಿಗೋಷ್ಠಿ ನಡೆಸಿಕೊಟ್ಟರು ಹಾಗೂ ವಂದಿಸಿದರು.

      ಗೋಷ್ಠಿಯಲ್ಲಿ ಪ್ರಕಾಶ ಕೆ.ಇಚ್ಚಂಗಿ, ವಿಠ್ಠಲವಾರ್ ಮಾಳೋದಕರ, ಸೀತಾರಾಂ ಕಣೇಕಲ್, ಸಂತೋಷ್ ಪಿಶೆ, ಎಸ್.ಜೆ.ಚಿತ್ರಗಾರ, ಜಿ.ಓಂಕಾರಣ್ಣನವರ, ರವಿಂದ್ರ ಕೊಳ್ಳಿ, ಶ್ರೀಮತಿ ಗೀತಾ ಸಾಲಿಮಠ, ಶ್ರೀಮತಿ ಶಕುಂತಲಾ ದಾಳೆರ, ಶ್ರೀಮತಿ ಸುರೇಖಾ ನೇಲಕರ, ಶ್ರೀಮತಿ ಶಶಿಕಲಾ ಅಕ್ಕಿ, ಕುಮಾರದಾಸ್ ಹೂಗಾರ, ರಾಜಾಭಕ್ಷು ಸಿ.ಎಂ., ಹಸೀನಾ ಹೆಡಿಯಾಲ, ಕಾಂತೇಶ ಸೂರ್ಯಪ್ಪ ಗೊಲ್ಲರ, ಶ್ರೀಮತಿ ಭಾಗ್ಯವತಿ ಕೋಡಬಾಳ, ಮಂಜುನಾಥ ಹರಿಜನ, ಪ್ರೊ.ಎಂ.ಬಿ.ನಾಗಲಾಪೂರ, ರಾಜೇಶ್ವರಿ, ಶ್ವೇತಾ, ಸಿದ್ದುಮತಿ ನೆಲವಿಗಿ, ಶ್ರೀಮತಿ ರೇಣುಕಾ ಗುಡಿಮನಿ ಮತದಾನ ಜಾಗೃತಿಯ ಸ್ವರಚಿತ ಕವನಗಳನ್ನು ವಾಚಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link