ತುಮಕೂರು
ದೇಶದಲ್ಲಿ ಸಮಾಜಘಾತುಕ ಶಕ್ತಿಗಳು ಹೆಚ್ಚಾಗುತ್ತಿದೆ. ಅತ್ಯಾಚಾರಗಳು, ಕೊಲೆಗಳು ಹೆಚ್ಚಾಗುತ್ತಿವೆ. ಈ ಶಕ್ತಿಗಳಿಗೆ ಕಡಿವಾಣ ಹಾಕಬೇಕು ಎಂದು ಮುಖಂಡ ಬಿ.ಉಮೇಶ್ ಆಗ್ರಹ ವ್ಯಕ್ತಪಡಿಸಿದರು.
ನಗರದ ಬಾಲಗಂಗಾಧರನಾಥಸ್ವಾಮಿ ವೃತ್ತದಲ್ಲಿ ಸಿಪಿಐಎಂ ಹಾಗೂ ಸಿಐಟಿಯು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಪ್ರಪಂಚದಾದ್ಯಂತ ಸಮಾಜಘಾತುಕ ಶಕ್ತಿಗಳು ಹೆಚ್ಚಾಗುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ ಶ್ರೀಲಂಕಾದ ಕೊಲಂಬೋದಾ ಚರ್ಚ್‍ನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದಿಂದ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅದೇ ರೀತಿ ರಾಯಚೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧುಪತ್ತಾರ್ ಕೊಲೆ ಮಾಡಲಾಗಿದೆ. ಈ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಅಂದು ರಾಜ್ಯ ವಿಸ್ತರಣೆ, ಧರ್ಮ ವಿಸ್ತರಣೆಯಲ್ಲಿ ಸಾವನ್ನಪ್ಪಿದ್ದರೆ ವೀರಮರಣ ಎನ್ನುತ್ತಿದ್ದರು ಆದರೆ ಈಗ ಸರ್ವಾಧಿಕಾರಿ ಧೋರಣೆಯಿಂದ ಅಮಾಯಕ ಜನರು ಸಾವನ್ನಪ್ಪುತ್ತಿದ್ದಾರೆ. ಈ ಸಂಬಂಧ ಶ್ರೀಲಂಕಾ ಪ್ರಧಾನಿ ಯಾರನ್ನೂ ಗುರಿಯಾಗಿಸುವುದು ಬೇಡ. ಚರ್ಚ್‍ನಲ್ಲಿ ನಡೆದ ಬಾಂಬ್ ಸ್ಪೋಟಕ್ಕೆ ಕಾರಣವಾದ ಉಗ್ರರನ್ನು ಸದೆಬಡೆಯುವ ಕೆಲಸ ನಾವೇ ಮಾಡುತ್ತೇವೆ ಎಂದಂತೆ ಉಗ್ರರನ್ನು ನಾಶಮಾಡಲಾಗಿದೆ ಎಂದರು.
ನಮ್ಮ ಸರ್ಕಾರಗಳು ಜಾಗೃತಗೊಂಡು ಸಾವನ್ನಪ್ಪಿದವರಿಗೆ ನ್ಯಾಯ ಒದಗಿಸಬೇಕು. ಶ್ರೀಲಂಕಾದ ಬಾಂಬ್ ಸ್ಪೋಟದಲ್ಲಿ ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ದೊರೆಯಲಿ ಅವರ ಕುಟುಂಬದವರಿಗೆ ದುಖಃ ಭರಿಸುವ ಶಕ್ತಿ ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಸಿಐಟಿಯುನ ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಇತ್ತೀಚಿನ ಲೆಕ್ಕಾಚಾರದ ಪ್ರಕಾರ ನಮ್ಮ ರಾಜ್ಯದಲ್ಲಿ ವಿವಿಧ ಘಟನೆಗಳಲ್ಲಿ 70ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಶ್ರೀಲಂಕಾದ ಬಾಂಬ್ ಸ್ಪೋಟದಲ್ಲಿ ಕರ್ನಾಟಕದ 10ಜನರೊಂದಿಗೆ ಮುನ್ನೂರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ಕೃತ್ಯ ಖಂಡನೀಯವಾದುದು ಎಂದರಲ್ಲದೆ, ರಾಯಚೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಎಂಬುವವರನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗೆ ರಕ್ಷಣೆ ಇಲ್ಲಂದಾತಾಗಿದೆ. ಇದು ಖಂಡನೀಯ ವಿಷಯವಾಗಿದ್ದು ತಪ್ಪಿತಸ್ಥರ ಮೇಲೆ ಸೂಕ್ತ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಬಂಡಾಯ ಸಾಹಿತ್ಯದ ಮುಖಂಡ ಓ.ನಾಗರಾಜು ಮಾತನಾಡಿ, ಸಮಾಜದಲ್ಲಿಂದು ನಾವು ಆತಂಕದ ಜೀವನವನ್ನು ನಡೆಸುವ ಸ್ಥಿತಿ ಬಂದೊದಗಿದೆ. ರಾಷ್ಟ್ರದೆಲ್ಲೆ ಮೀರಿ, ಧರ್ಮದೆಲ್ಲೆ ಮೀರಿ ಚರ್ಚಿಸುವುದಾದರೆ ಇಂದು ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಇವುಗಳಿಂದ ನಾವು ತಲ್ಲಣಗೊಳ್ಳುತ್ತಿದ್ದೇವೆ. ಇದರ ಬಗ್ಗೆ ಜಾಗೃತಗೊಂಡು ಖಂಡನೆ ಮಾಡಬೇಕಿದೆ. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ಹೆಚ್ಚಾಗುತ್ತಿವೆ. ಈ ಹಿಂದೆ ನಿರ್ಭಯ ಪ್ರಕರಣವಾದಾಗ ದೇಶದೆಲ್ಲೆಡೆ ಪ್ರತಿಭಟನೆಗಳನ್ನು ಮಾಡಲಾಯಿತು. ಆದರೆ ಈಗ ಮಧು ಪತ್ತಾರ್ ಪ್ರಕರಣದಲ್ಲಿ ಯಾರು ಹೆಚ್ಚಿನದಾಗಿ ಗಮನ ಹರಿಸುತ್ತಿಲ್ಲ. ಇಡೀ ಕರ್ನಾಟಕದಾದ್ಯಂತ ವಿವಿಧ ಸಂಘಟನೆಗಳಿಂದ ಪ್ರತಿಭಟನೆಗಳನ್ನು ಹಮ್ಮಿಕೊಂಡು ಮಧು ಪತ್ತಾರ್ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಾವನ್ನಪ್ಪಿದವರ ಆತ್ಮಶಾಂತಿಗಾಗಿ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು. ಪ್ರತಿಭಟನೆಯಲ್ಲಿ ಷಣ್ಮುಕಪ್ಪ, ಶಿವಣ್ಣ, ಸುಬ್ರಹ್ಮಣ್ಯ, ರಾಘವೇಂದ್ರ, ಕೆ.ಇ.ಸಿದ್ದಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.