ಚಿತ್ರದುರ್ಗ:
ವಾರಕ್ಕೊಂದು ರಜೆ, ಸಾಮಾಜಿಕ ಭದ್ರತೆ ಸೇರಿದಂತೆ ಹಲವಾರು ಬೇಡಿಕೆಗಳನ್ನಿಟ್ಟುಕೊಂಡು ಮನೆ ಕೆಲಸ ಮಾಡುವ ನೂರಾರು ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಅಖಿಲ ಕರ್ನಾಟಕ ಗೃಹ ಕಾರ್ಮಿಕರ ವೃತ್ತಿ ಸಂಘಟನೆ ಹಾಗೂ ಕೊನ್ ಫೆಡರೇಶನ್ ಆಫ್ ಫ್ರೀ ಟ್ರೇಡ್ ಯೂನಿಯನ್ಸ್ ಆಫ್ ಇಂಡಿಯಾ ನೇತೃತ್ವದಲ್ಲಿ ದಾವಣಗೆರೆ ರಸ್ತೆಯಲ್ಲಿರುವ ಯೂನಿಯನ್ ಪಾರ್ಕಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ಆಗಮಿಸಿದ ಮನೆ ಕೆಲಸ ಮಾಡುವ ಮಹಿಳೆಯರಲ್ಲಿ ಕೆಲವರು ಡೊಳ್ಳು ಬಾರಿಸಿದರೆ ಇನ್ನು ಕೆಲವರು ಭಜನೆ ಮಾಡುವ ಮೂಲಕ ತಮ್ಮ ಸಮಸ್ಯೆಗಳನ್ನು ಜಿಲ್ಲಾಡಳಿತಕ್ಕೆ ತೋಡಿಕೊಂಡರು.
ಹತ್ತಾರು ವರ್ಷಗಳಿಂದಲೂ ಮನೆ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಇಂದಿಗೂ ಜೀವನ ಭದ್ರತೆಯಿಲ್ಲದಂತಾಗಿದೆ. ಇ.ಎಫ್, ಪಿ.ಎಫ್, ಕನಿಷ್ಟ ವೇತನ ಹಾಗೂ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕೆಂದು ಆಗ್ರಹಿಸಿದ ಪ್ರತಿಭಟನಾನಿರತ ಮಹಿಳೆಯರು ಈಗಾಗಲೆ ಅನೇಕ ಮನವಿಯನ್ನು ನೀಡಿದ್ದರೂ ಇದುವರೆವಿಗೂ ಯಾವುದೇ ಪ್ರತಿಫಲವಿಲ್ಲದ ಕಾರಣ ಈಗ ಹೋರಾಟಕ್ಕೆ ಮುಂದಾಗಿದ್ದೇವೆ. ಈಗಲೂ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಚುರುಕುಗೊಳಿಸುವುದಾಗಿ ಎಚ್ಚರಿಸಿದರು.
ಮನೆ ಕೆಲಸ ಮಾಡುವ ಮಹಿಳೆಯರು ಸಾಮಾನ್ಯವಾಗಿ ತುಳಿತಕ್ಕೊಳಗಾಗುತ್ತಾರೆ. ಪಿ.ಎಫ್, ಇ.ಎಸ್.ಐ., ಪಿಂಚಣಿ, ವೈದ್ಯಕೀಯ ವಿಮೆ, ಮಾತೃತ್ವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹಾಗಾಗಿ ಸಾಮಾಜಿಕ ರಕ್ಷಣೆ ನೀಡಿ ಬದುಕನ್ನು ಉತ್ತಮಗೊಳಿಸಬೇಕು. ಗೃಹ ಕಾರ್ಮಿಕರಿಗೆ ನೀಡುವ ಸ್ಮಾರ್ಟ್ ಕಾರ್ಡ್ ಕೇವಲ ಗುರುತಿನ ಚೀಟಿಯಾಗಿ ಉಳಿಯದೆ ಸೌಲಭ್ಯಗಳು ದೊರಕಬೇಕೆಂದು ಆಗ್ರಹಿಸಿದರು.
ಮನೆ ಕೆಲಸ ಮಾಡುವ ಮಹಿಳಾ ಕಾರ್ಮಿಕರು ಸಾಮಾನ್ಯವಾಗಿ ಹೊಟ್ಟೆಪಾಡಿಗಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುವುದುಂಟು.
ಅತ್ಯಂತ ಕಡುಬಡವರಾಗಿದ್ದು, ವಾಸಿಸಲು ಸ್ವಂತ ಮನೆಯಿರುವುದಿಲ್ಲ. ಯೋಗ್ಯ ಕೆಲಸಕ್ಕೆ ತಕ್ಕಂತೆ ವೇತನ ಕೊಡಬೇಕು. ಯೋಗ್ಯ ಉದ್ಯೋಗಕ್ಕಾಗಿ ಐ.ಎಲ್.ಓ.ಸಿ. 189 ಇದನ್ನು ಅನುಮೋದಿಸಬೇಕು. ಸ್ಮಾರ್ಟ್ ಕಾರ್ಡ್ ನೀಡುವುದರ ಜೊತೆಗೆ ಅರವತ್ತು ವರ್ಷ ಮೇಲ್ಪಟ್ಟ ಮನೆಕೆಲಸದ ಮಹಿಳೆಯರಿಗೂ ಇದರ ಸೌಲಭ್ಯ ದೊರಕಬೇಕು. ಪ್ರತಿಯೊಂದು ಜಿಲ್ಲಾ ಮತ್ತು ತಾಲೂಕುಗಳಲ್ಲಿ ಕಾರ್ಮಿಕ ಮಿತ್ರ ಕೇಂದ್ರಗಳನ್ನು ತೆರೆಯಬೇಕು, ಗೃಹ ಕಾರ್ಮಿಕರಿಗೆ ರಾಷ್ಟ್ರೀಯ ಶಾಸನವನ್ನು ರೂಪಿಸಬೇಕು. ಪ್ರಸ್ತುತ ಸಾಲಿನ ಕನಿಷ್ಟ ವೇತನವನ್ನು ಪರಿಷ್ಕರಿಸಬೇಕು.
ಸರ್ಕಾರ ಸೌಲಭ್ಯ ಪಡೆಯಲು ಕಡ್ಡಾಯಗೊಳಿಸಿರುವ ಆಹಾರ ಪಡಿತರ ಚೀಟಿಯನ್ನು ಅಸಂಘಟಿತ ಕಾರ್ಮಿಕರಿಗೆ ಅನ್ವಯಿಸಬಾರದು. ಎಲ್ಲಾ ಮನೆಕೆಲಸದ ಮಹಿಳೆಯರಿಗೆ ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ನಿಶಾ, ಗಂಗಮ್ಮ, ಶಾರದ, ಅರ್ಚನ, ಮಂಜುಳ, ಸರಿತ, ಲಕ್ಷ್ಮಿ, ಯಶೋಧ, ವಿನೋಧ, ಶೋಭ, ರೇಖ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.