ಸಮಸ್ಯೆಗಳ ಬಗ್ಗೆ ಕೇಂದ್ರದಲ್ಲಿ ಧ್ವನಿ ಎತ್ತದ ಸಂಸದರಿಂದ ಕ್ಷೇತ್ರದ ಅಭಿವೃದ್ಧಿ ಅಸಾಧ್ಯ

ಕುಣಿಗಲ್

       ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿರುವ ಮೂಲ ಸಮಸ್ಯೆಗಳನ್ನು ಅರಿತು ಕೇಂದ್ರ ಸರ್ಕಾರದ ಗಮನವನ್ನ ಸಂಸತ್ತಿನಲ್ಲಿ ಒಮ್ಮೆಯೂ ಧ್ವನಿ ಎತ್ತಿ ಸೆಳೆಯುವಲ್ಲಿ ಇಲ್ಲಿನ ಸಂಸದ ಡಿ.ಕೆ. ಸುರೇಶ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಶ್ವತ್ಥನಾರಾಯಣಗೌಡ ಟೀಕಿಸಿದರು.

      ತಾಲ್ಲೂಕಿನ ಗಿರಿಗೌಡನಪಾಳ್ಯದಲ್ಲಿ ಹೋಬಳಿ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಸಂಸತ್ ಸದಸ್ಯರಾದವರು ಕೇಂದ್ರ ಸರ್ಕಾರದಲ್ಲಿರುವ ಯೋಜನೆಗಳನ್ನ ಸಮರ್ಪಕವಾಗಿ ಬಳಸಿಕೊಳ್ಳಬೇಕೆ ಹೊರತು ಬರೀ ಟೀಕೆ ಟಿಪ್ಪಣಿಯಿಂದ ಪ್ರಯೋಜನವಾಗುವುದಿಲ್ಲ.

       ಕ್ಷೇತ್ರದ ನೀರಾವರಿ, ಶಿಕ್ಷಣ, ರೈಲು, ಆರೋಗ್ಯ, ನಿರುದ್ಯೋಗ, ರೇಷ್ಮೆ ಬೆಳೆಗಾರರ ನೋವು ಕಷ್ಟ, ರೈತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದೆ ಕ್ಷೇತ್ರದ ಅಭಿವೃದ್ಧಿಗಳನ್ನ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ಸಿನ ಸಂಸತ್ ಸದಸ್ಯ ಡಿ.ಕೆ.ಸುರೇಶ್ ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನ ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದು ಬರೀ ವೈಯಕ್ತಿಕವಾಗಿ ಅಭಿವೃದ್ಧಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

        ಈ ಭಾಗದ ಜನರಿಗೆ ಯಾವುದೆ ಅಭಿವೃದ್ಧಿ ಕಾರ್ಯಗಳನ್ನ ಕೈಗೊಂಡಿರುವುದಿಲ್ಲ, ಕೇಂದ್ರ ಸರ್ಕಾರವೂ ತೊಗರಿ, ಭತ್ತ, ಕೊಬ್ಬರಿ ಸೇರಿದಂತೆ ಅನೇಕ ಬೆಳೆಗಳಿಗೆ ಬೆಂಬಲ ಬೆಲೆ ನೀಡಿದೆ. ಈ ಕ್ಷೇತ್ರದಲ್ಲಿ ರೇಷ್ಮೆ ಬಿತ್ತನೆ ವಲಯಕ್ಕೆ ಆಗಬೇಕಾದಂತಹ ಅಭಿವೃದ್ಧಿ ಕಾರ್ಯವನ್ನ ಕೈಗೊಂಡಿರುವುದಿಲ್ಲ. ರೇಷ್ಮೆಗೂಡಿಗೆ ಕೇವಲ 250 ರೂಪಾಯಿ ಮಾರಾಟವಾಗುತ್ತಿದೆ. ಸಂಸತ್ ಸದಸ್ಯರ ಅವಧಿಯಲ್ಲಿ ತಾಲ್ಲೂಕಿನ ನೀರಾವರಿ, ಶಿಕ್ಷಣ, ಆರೋಗ್ಯ, ಉದ್ಯೋಗಾವಕಾಶ ನೀಡದೆ ವಂಚಿಸಿರುತ್ತಾರೆ.

         ಕೇಂದ್ರ ಸರ್ಕಾರದಿಂದ ಕೇಂದ್ರೀಯ ವಿದ್ಯಾಲಯ, ಕೈಗಾರಿಕಾ ಕೇಂದ್ರಗಳು ಮಾಡುವಲ್ಲಿ ಸಂಸತ್ ಸದಸ್ಯರು ವಿಫಲರಾಗಿದ್ದಾರೆ. ಮಾಗಡಿ, ಕುಣಿಗಲ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಕೊಡಿಸುವಲ್ಲಿ ವಿಫಲರಾಗಿರುತ್ತಾರೆ. ಶಿರಾ ಕ್ಷೇತ್ರದ ಜಯಚಂದ್ರ ಹಾಗೂ ಸುರೇಶ್‍ಗೌಡ ಹೇಮಾವತಿ ನೀರನ್ನು ತಮ್ಮ ಕ್ಷೇತ್ರಗಳಿಗೆ ಸಮರ್ಪಕವಾಗಿ ಹರಿಸಿಕೊಂಡಿರು. ಆದರೆ,ಈ ಭಾಗದ ಸಂಸತ್ ಸದಸ್ಯರು ಹೇಮಾವತಿ ನೀರನ್ನ ಕುಣಿಗಲ್ ಸೇರಿದಂತೆ ಕೆರೆ ಕಟ್ಟೆಗಳಿಗೆ ತುಂಬಿಸುವಲ್ಲಿ ವಿಫಲರಾಗಿದ್ದು ನಾಲೆ ದೊಡ್ಡದು ಮಾಡುವ ಮಾತು ಹೇಳುತ್ತಲೆ ಬಂದರೆ ಹೊರತು ನೀರು ತರಲು ಇವರ ಕೈಲಿ ಆಗಲೇ ಇಲ್ಲ ಎಂದು ಟೀಕಿಸಿದರು.

          ಇವರಿಗೆ ಕ್ಷೇತ್ರದಲ್ಲಿ ಯಾವುದೆ ಬೆಟ್ಟ-ಗುಡ್ಡ ಕಣ್ಣಿಗೆ ಕಾಣಿಸುತ್ತದೆ, ಅಂತಹ ಪ್ರದೇಶದಲ್ಲಿ ಕ್ರಶರ್‍ಗಳನ್ನ ನಡೆಸುತ್ತಾ, ಬೆಟ್ಟ ಕರಗಿಸುವಲ್ಲಿ ನಿಪುಣರಾಗಿರುತ್ತಾರೆ ಎಂದು ದೂರಿದರು. ಕೇಂದ್ರದ ಸಿ.ಆರ್.ಪಿ ರಸ್ತೆ ಯೋಜನೆಯಲ್ಲಿ ಸಮರ್ಪಕವಾದ ರಸ್ತೆಗಳಿರುವುದಿಲ್ಲ. ಸಂಸತ್ ಸದಸ್ಯರು ಬದ್ಧತೆಯಿಂದ ಕ್ಷೇತ್ರದ ಅಭಿವೃದ್ಧಿ, ಪ್ರಗತಿಗೆ ದುಡಿಯುವಂತಾಗಬೇಕು, ಅಂತಹ ಸಂಸತ್ ಸದಸ್ಯರನ್ನ ಆಯ್ಕೆ ಮಾಡಿಕೊಳ್ಳುವಂತೆ ಮತದಾರರಲ್ಲಿ ಕೋರಿದರು.

          ದೇಶಾದ್ಯಂತ ನರೇಂದ್ರಮೋದಿಯವರ ಅಲೆಇದ್ದು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ವಿರೋಧಿ ಅಲೆ ಎದ್ದು ಕಾಣುತ್ತಿದೆ. ಈ ಕ್ಷೇತ್ರದ ಜನರೆ ನನಗೆ ಹಲವು ರೀತಿಯಲ್ಲಿ ನೆರವಾಗುವ ಮೂಲಕ ನನಗೆ ಸಾಥ್ ನೀಡುತ್ತಿರುವುದು ನನ್ನ ಗೆಲುವು ಖಚಿತ ಎಂದ ಅವರು, ರಾಜ್ಯದಲ್ಲಿ 20 ರಿಂದ 21 ಬಿಜೆಪಿ ಸ್ಥಾನದಲ್ಲಿ ಗೆಲ್ಲುವುದು ಗ್ಯಾರಂಟಿ ಆಗಿದ್ದು ಇದರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿಯೂ ಬಿಜೆಪಿಯ ಗೆಲುವು ಇದೆ ಎಂಬ ವರದಿ ಲಭ್ಯವಾಗಿದೆ ಎಂದರು.

           ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಕೆ.ಎಂ.ತಿಮ್ಮಪ್ಪ ಮಾತನಾಡಿ, ಇಂದು ನಡೆಯುತ್ತಿರುವ ಚುನಾವಣೆ ವ್ಯಕ್ತಿ ಮತ್ತು ದೇಶದ ಮಧ್ಯೆ ನಡೆಯುತ್ತಿದೆ. ಮೋದಿ ಇಲ್ಲಿ ಒಂದು ಶಕ್ತಿಯಾಗಿ ಹೊರ ಹೊಮ್ಮಿದ್ದು, ಅವರ ಭ್ರಷ್ಟಾಚಾರ ಮುಕ್ತ, ಸುಭದ್ರ ಬಲಿಷ್ಠ ಆಡಳಿತ ಹಾಗೂ ಪ್ರಾಮಾಣಿಕ ವ್ಯಕ್ತಿತ್ವವನ್ನ ಮೆಚ್ಚಿರುವ ಜನ ಸಾಮಾನ್ಯರು ಇಂದು ಮೋದಿ ಮೋದಿ ಎಂದು ಜೈಕಾರ ಹಾಕುತ್ತಿರುವುದಕ್ಕೆ ವಿರೋಧಿ ಪಕ್ಷದವರು ತಲ್ಲಣಗೊಂಡು ಇಲ್ಲ ಸಲ್ಲದ ಆರೋಪ ಮಾಡುತ್ತ ಮೋದಿ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಲು ಯತ್ನಿಸುತ್ತಿದ್ದಾರೆ. ಆದರೂ ಜನ ಬುದ್ದಿವಂತರಾಗಿದ್ದು ವಿರೋಧಿಗಳ ಎಂತಹ ಹೇಳಿಕೆಯನ್ನು ಕೇಳದೆ ದೇಶದ ಹಿತಕ್ಕಾಗಿ ಮೋದಿಯನ್ನ ಬೆಂಬಲಿಸುತ್ತೇವೆ ಎಂದು ಅವಿದ್ಯಾವಂತ ವಯೋವೃದ್ಧರಿಂದ ಇಂದಿನ ಯುವ ಪೀಳಿಗೆ ಮುಂದಾಗಿದೆ ಎಂದರು.ಮುಖಂಡರಾದ ನಾರಾಯಣಗೌಡ, ಕೆ.ಎಸ್.ಬಲರಾಮ್, ಭರತೇಶ್, ಎ.ಸಂತೋಷ್, ನಡೆಮಾವಿನಪುರ ರಂಗಸ್ವಾಮಿ, ವೈ.ಹೆಚ್.ರವಿಚಂದ್ರ ಆನಂದಸ್ವಾಮಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link