ಸಮಯಕ್ಕೆ ಬಾರದ ಬಸ್ಸುಗಳು : ಪ್ರಯಾಣಿಕರಿಂದ ಸಂಸ್ಥೆಗೆ ಹಿಡಿಶಾಪ

ಹಾವೇರಿ :

       ಸಮಯಕ್ಕೆ ಸರಿಯಾಗಿ ಬಸ್ ಬಿಡದ ಹಿನ್ನಲೆಯಲ್ಲಿ ಸಾರ್ವಜನಿಕರು ಕೇಂದ್ರ ಬಸ್ ನಿಲ್ದಾಣದಲ್ಲಿ ಕೆಲ ಕಾಲ ಪ್ರಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

       ಹಾವೇರಿ ಕೇಂದ್ರ ಬಸ್ ನಿಲ್ದಾಣದಿಂದ ಪ್ರತಿ ನಿತ್ಯ ಸಂಜೆ 5.30ಕ್ಕೆ ಹೊರಡುವ ಹಾವೇರಿ-ಶಿರಹಟ್ಟಿ ಬಸ್ ಕಳೆದ ನಾಲ್ಕೈದು ತಿಂಗಳಿಂದ ವಾರದಲ್ಲಿ ಮೂರನಾಲ್ಕು ದಿನಗಳು ಮಾತ್ರ ಸಂಚರಿಸುತ್ತಿದೆ. ಸಂಚರಿಸುವ ದಿನಗಳಲ್ಲಿಯೂ ಸಮಯಕ್ಕೆ ಸರಿಯಾಗಿ ಚಲಿಸುತ್ತಿಲ್ಲ ಇದರಿಂದ ಪ್ರಯಾಣಿಕರಿಗೆ ಬಹಳ ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರು ಸಾರಿಗೆ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

       ಈ ಬಸ್ ಕಳೆದ 45 ವರ್ಷಗಳಿಗೂ ಅಧಿಕ ಕಾಲದಿಂದ ಈ ಮಾರ್ಗದಲ್ಲಿ ಸಂಚರಿಸುತ್ತಿದೆ. ಕಳೆದ ನಾಲ್ಕಾರು ಬರ್ಷಗಳಿಂದ ಯಾವುದೇ ತೊಂದರೆ ಇಲ್ಲದೆ ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿತ್ತು. ಆದರೆ ಕಳೆದ ಮೂರನಾಲ್ಕು ತಿಂಗಳುಗಳಿಂದ ಸಮಯಕ್ಕೆ ಸರಿಯಾಗಿ ಮತ್ತು ವಾರದಲ್ಲಿ ಕೆಲವೇ ದಿನಗಳು ಮಾತ್ರ ಸಂಚರಿಸುತ್ತಿದೆ.

      ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಅನೇಕ ಗ್ರಾಮಗಳ ಜನತೆ ದೂರ ದೂರದ ಊರುಗಳಿಂದ ಹಾವೇರಿಗೆ ಈ ಬಸ್‍ನ್ನು ನಂಬಿಕೊಂಡು ಬಂದರೆ ಬಸ್ ಕ್ಯಾನ್ಸಲ್ ಎನ್ನುತ್ತಾರೆ ಅಧಿಕಾರಿಗಳು. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಲೇಹೊಸೂರ, ಅಂಕಲಿ, ಕೋಗನೂರ, ತಂಗೋಡ, ಬೆಳ್ಳಟ್ಟಿ, ಛಬ್ಬಿ, ದೇವಿಹಾಳ ಸೇರಿದಂತೆ ಹಾವೇರಿ ತಾಲೂಕಿನ ಮರೋಳ, ಹಾಲಗಿ, ಸೇರಿದಂತೆ ಅನೇಕ ಗ್ರಾಮಗಳ ಜನತೆ ಈ ಬಸ್ ನಂಬಿಕೊಂಡು ಬರುತ್ತಾರೆ. ಬಸ್ ಇಲ್ಲವೆಂದರೆ ಊರು ಸೇರುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಾರೆ ಈ ಗ್ರಾಮಗಳ ಜನತೆ.

      ಈ ಹಿಂದೆ ಅನೇಕರು ಹಾವೇರಿ ಬಸ್ ನಿಲ್ದಾಣದಲ್ಲಿ ಇಲ್ಲವೆ ಬೇರೆ ಊರುಗಳಿಗೆ ತೆರಳಿ ಆಯಾ ಬಸ್ ನಿಲ್ದಾಣಗಳಲ್ಲಿ ರಾತ್ರಿಯನ್ನು ಕಳೆದು ಬೆಳಿಗ್ಗೆ ಬೇರೆ ಬೇರೆ ಬಸ್‍ಗಳನ್ನು ಹಿಡಿದುಕೊಂಡು ಊರನ್ನು ಸೇರಿದ ಉದಾಹರಣೆಗಳಿವೆ. ಇಂತಹ ತೊಂದರೆಗಳನ್ನು ಮಹಿಳೆಯರು ಮತ್ತು ಮಕ್ಕಳು ಎದುರಿಸಿದ ಉದಾಹರಣೆಗಳಿವೆ ಎನ್ನುತ್ತಾರೆ ಶಿರಹಟ್ಟಿ ತಾಲೂಕಿನ ಛಬ್ಬಿಯ ನಾಗರಾಜ ಪೋತರಾಜ ಅವರು.

      ಹಾವೇರಿ-ಶಿರಹಟ್ಟಿ ಮಾರ್ಗವಾಗಿ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಮಾತ್ರ ಬಸ್‍ಗಳಿವೆ. ಈ ಬಸ್‍ಗಳನ್ನು ಸರಿಯಾಗಿ ಬಿಡುತ್ತಿಲ್ಲ. ಈ ಮಾರ್ಗದಲ್ಲಿ ಸಂಚರಿಸುವ ಬಸ್‍ಗಳು ಸಹ ಕಂಡೀಶನ್ ಇರುವುದಿಲ್ಲ ಎಲ್ಲ ಯಾವಾಗ ಕೆಟ್ಟು ನಿಲ್ಲುತ್ತವೆ ಎನ್ನುವುದನ್ನು ಹೇಳಲಾಗದು. ಅನೇಕ ಬಾರಿ ನಸ್‍ಗಳು ಕೆಟ್ಟು ನಿಂತ ಸಂದರ್ಭದಲ್ಲಿ ಬಸ್‍ನಲ್ಲೇ ರಾತ್ರಿಯನ್ನು ಕಳೆದಿರುವ ಅನುಭವವೂ ಇದೆ ಎನ್ನುತ್ತಾರೆ ತಂಗೋಡ ಗ್ರಾಮದ ವೃದ್ಧೆ ಈರಮ್ಮ ಭಜಂತ್ರಿ ಅವರು.

      ಶಿರಹಟ್ಟಿ ತಾಲೂಕಿನ ಕೋಗನೂರ ಗ್ರಾಮಕ್ಕೆ ತೆರಳುವುದಕ್ಕೆ ಬೆಂಗಳೂರಿನಿಂದ ರೈಲ್ವೆ ಮೂಲಕ ಬಂದು ಈ ಬಸ್‍ಗಾಗಿ ಕಾಯುತ್ತಿದ್ದ ಪ್ರಿಯಾ ಮತ್ತು ಯಶೋಧಾ ಎಂಬ ಯುವತಿಯರು ಬಸ್ ಇಲ್ಲ ಎಂದು ಕೇಳಿ ಕಂಗಾಲಾದಂತೆ ಕಂಡು ಬಂದರು. ಕೋಗನೂರ ಗ್ರಾಮಕ್ಕೆ ತೆರಳುವುದಕ್ಕೆ ನಾಳೆ ಬೆಳಿಗ್ಗೆ ಎಂದು ತಿಳಿದಾಗಲಂತೂ ಯುವರಿಯರಿಗೆ ಏನು ಮಾಡಬೇಕೆಂದು ತಿಳಿಯದೇ ಭಯಗೊಂಡಂತೆ ಕಂಡುಬಂದಿತು.

       ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಬೆಳಗಾವಿ ಅವರನ್ನು ಈ ಕುರಿತು ಕೇಳಿದಾಗ ನಾನು ಹೊರಗಡೆ ಇದ್ದೇನೆ ಡಿ.ಟಿ.ಒ ಅವರನ್ನು ವಿಚಾರಿಸಿ ಎಂಬ ಉತ್ತರ ಬಂದಿತು. ಈ ಕುರಿತು ಡಿ.ಟಿ.ಒ ಅವರಿಗೆ ಫೋನ್ ಮಾಡಿದರೆ ನಾನು ಹೊರಗಡೆ ಇದ್ದೇನೆ ಡಿಪೋ ಮ್ಯಾನೇಜರ್ ಅವರನ್ನು ವಿಚಾರಿಸಿ ಎಂಬ ಪ್ರತಿಕ್ರೀಯೆ ಬಂದಿತು. ಡಿಪೋ ಮ್ಯಾನೇಜರ್ ಈ ಕುರಿತು ಯಾರೇ ಫೋನ್ ಮಾಡಿದರೂ ಸಮರ್ಪಕವಾಗಿ ಸ್ಪಂದನೆ ನೀಡದೇ ಹಾರಿಕೆ ಉತ್ತರವನ್ನು ನೀಡಿದರು. ಕೊನೆಯಲ್ಲಿ ಡಿ.ಟಿ.ಒ ಅವರಿಗೆ ಮಾಧ್ಯಮ ಪತ್ರತಿನಿಧಿಗಳು ಮತ್ತು ಸಾರ್ವಜನಿಕರು ಫೋನ್ ಮಾಡಿದ ನಂತರ ಸ್ಪಂದಿಸಿ ಕೊನೆಗೂ ಬೇರೆ ಮಾರ್ಗದ ಬಸ್‍ನ್ನು ಶಿರಹಟ್ಟಿಗೆ ತೆರಳುವಂತೆ ಮಾಡಿದ್ದು ಕಂಡು ಬಂದಿತು.

       ಪ್ರತಿಭಟನೆಯಲ್ಲಿ ಗಣೇಶ ಹೊಸಮನಿ, ಆನಂದ ಅಂಗಡಿ, ಹನುಮಂತಪ್ಪ ದೊಡ್ಡಮನಿ, ಪವನ.ಹೆಚ್. ಪ್ರಿಯಾ, ಯಶೋಧಾ ಸೇರಿದಂತೆ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap