ಹೊನ್ನಾಳಿ:
ತಾಲೂಕಿನ ವಿವಿಧೆಡೆ ಶುಕ್ರವಾರ-ಶನಿವಾರ ಸಡಗರ-ಸಂಭ್ರಮಗಳಿಂದ ಯುಗಾದಿ ಹಬ್ಬವನ್ನು ಆಚರಿಸಲಾಯಿತು. ಮನೆಗಳ ಮುಂದೆ ವಿವಿಧ ಬಣ್ಣಗಳನ್ನು ಬಳಸಿ ಹಾಕಿದ ರಂಗೋಲಿ ಚಿತ್ತಾಕರ್ಷಕವಾಗಿತ್ತು. ಮಾವಿನ ತಳಿರು-ತೋರಣಗಳಿಂದ ಮನೆಗಳನ್ನು ಅಲಂಕರಿಸಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಶುಕ್ರವಾರ ಶಾವಿಗೆ, ಬೇವು ಒಳಗೊಂಡ ಭೋಜನ ತಯಾರಿಸಿ ಸ್ವೀಕರಿಸಿದರು. ಶನಿವಾರ ಹೋಳಿಗೆ, ಕರಬೂಜ ಹಣ್ಣಿನ ಸೀಕರಣೆ ಒಳಗೊಂಡ ವಿಶಿಷ್ಟ ಭೋಜನ ತಯಾರಿಸಿ ಸ್ವೀಕರಿಸಿದರು. ಶನಿವಾರ ಸಂಜೆ ಕೆಲವರಿಗೆ ಮಾತ್ರ ಚಂದ್ರದರ್ಶನ ಆಯಿತು. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಮೋಡ ಮುಸುಕಿದ ವಾತಾವರಣ, ಮಳೆ ಸುರಿದ ಕಾರಣ ಶನಿವಾರ ಹಲವರಿಗೆ ಚಂದ್ರದರ್ಶನ ಆಗಲಿಲ್ಲ. ಇದರಿಂದಾಗಿ ಜನತೆ ನಿರಾಸೆಗೊಂಡರು.
ಪ್ರಥಮ ಬೇಸಾಯ:
ಯುಗಾದಿ ಹಬ್ಬ ಆಚರಿಸಿ ಹೊಸ ಬೇಸಾಯ ಪ್ರಾರಂಭಿಸುವುದು ನಮ್ಮಲ್ಲಿ ಮೊದಲಿನಿಂದಲೂ ಆಚರಣೆಯಲ್ಲಿರುವ ಸಂಪ್ರದಾಯ. ಅದರಂತೆ, ಶನಿವಾರ ಯುಗಾದಿ ಹಬ್ಬ ಆಚರಿಸಿ ರೈತರು ತಮ್ಮ ಹೊಲಗಳಲ್ಲಿ ಹೊಸ ಬೇಸಾಯ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಎತ್ತುಗಳ ಕೊಂಬುಗಳಿಗೆ ಬಣ್ಣ ಹಚ್ಚಿ, ವಿವಿಧ ಬಣ್ಣಗಳ ಬಲೂನ್‍ಗಳಿಂದ ಅಲಂಕರಿಸಲಾಗಿತ್ತು. ಕುಟುಂಬದ ಸದಸ್ಯರೆಲ್ಲರೂ ಹೊಸ ಬಟ್ಟೆ ಧರಿಸಿ ಸಂಭ್ರಮಿಸಿದರು. ಮಹಿಳೆಯರು, ಮಕ್ಕಳು ಸೇರಿದಂತೆ ಕುಟುಂಬದ ಎಲ್ಲರೂ ಹೊಲಕ್ಕೆ ತೆರಳಿದ್ದರು.