ಚಿತ್ರದುರ್ಗ:
ಹಿಂದಿಯನ್ನು ಕಡ್ಡಾಯವಾಗಿ ರಾಜ್ಯದಲ್ಲಿ ಹೇರುವ ಮೂಲಕ ಪ್ರಾಚೀನ ಭಾಷೆಯ ಅಸ್ಮಿತೆಯನ್ನು ಅಲುಗಾಡಿಸಲು ಹೊರಟವರ ವಿರುದ್ದ ಪ್ರತಿಯೊಬ್ಬರು ಹೋರಾಟ ಮಾಡಬೇಕಿದೆ ಎಂದು ಖ್ಯಾತ ಸಾಹಿತಿ ಚಿಂತಕ ಕುಂ.ವೀರಭದ್ರಪ್ಪ ಕಿಡಿ ಕಾರಿದರು.
ಮುರುಘಾಮಠದಲ್ಲಿ ಬುಧವಾರ ನಡೆಯುವ ಸಾಮೂಹಿಕ ವಿವಾಹದಲ್ಲಿ ತಮ್ಮ ಮೂರನೆ ಮಗನ ಅಂರ್ತಜಾತಿ ವಿವಾಹ ಹಾಗೂ ಜೈಭಜರಂಗಬಲಿ ಕಾದಂಬರಿ ಬಿಡುಗಡೆ ಕುರಿತು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಂವಿಧಾನದ ವಿರುದ್ದ ಮಾತನಾಡುವವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವುದರಿಂದ ಸಂವಿಧಾನ ಅಪಾಯಕಾರಿಯಲ್ಲಿದೆ. ಜಾತಿ, ಕುಲ ವ್ಯವಸ್ಥೆಯನ್ನು ಖಂಡಿಸಬೇಕಿದೆ.
ಶ್ರೀಮಂತರ ಆಡಂಭರ ಮದುವೆ ಕೌಟುಂಬಿಕ ವ್ಯವಸ್ಥೆ ದುರ್ಬಲಗೊಳಿಸುವುದರ ವಿರುದ್ದ ಪ್ರತಿ ತಿಂಗಳ ಐದನೇ ತಾರೀಖಿನಂದು ಮುರುಘಾಮಠದಲ್ಲಿ ನಡೆಯುವ ಸಾಮೂಹಿಕ ವಿವಾಹದ ಬಗ್ಗೆ ನನಗೆ ಅತೀವವಾದ ಗೌರವವಿದೆ. ಹಾಗಾಗಿ ನನ್ನ ಮಗ ಕೂಡ ಸಾಮೂಹಿಕ ವಿವಾಹವಾಗುತ್ತಿದ್ದಾನೆ. ನಾನು ರಾಹುಕಾಲದಲ್ಲಿ ಮದುವೆಯಾಗಿದ್ದೇನೆ. ನಮ್ಮದು ಮೂಢನಂಬಿಕೆ ವಿರುದ್ದ ಹೋರಾಡುವ ಕುಟುಂಬ ಎಂದು ಬೀಗಿದರು.
ಬ್ಯಾಂಕ್‍ಗಳಲ್ಲಿ ಕನ್ನಡ ಬಾರದವರು ನೇಮಕವಾಗುತ್ತಿರುವುದನ್ನು ತಡೆಯಬೇಕು. ಅಡುಗೆಮನೆ ಭಾಷೆಯ ಮೇಲೆ ಪಡಸಾಲೆ ಭಾಷೆ ಅತಿಕ್ರಮಣ ಮಾಡಬಾರದು. ಹಿಂದಿ ವಿರೋಧಿಸಿ ಕನ್ನಡವನ್ನು ರಕ್ಷಿಸಬೇಕಿದೆ. ನಾನು ಹಿಂದಿ ವಿರೋಧಿಯಲ್ಲ. ಹಿಂದಿ ಹಾಗೂ ಇತರೆ ಭಾಷೆಗಳ ಬಗ್ಗೆ ಗೌರವವಿದೆ. ಕನ್ನಡ ನಾಶವಾದರೆ ನಮ್ಮ ಜೀವನವೇ ನಾಶವಾದಂತೆ. ಕೋಮುವಾದಿ ಬಿಜೆಪಿ. ವಿರೋಧಿ ನಾನಲ್ಲ. ಆದರೆ ಬಿಜೆಪಿ.ಯ ನಿಲುವನ್ನು ವಿರೋಧಿಸುತ್ತೇನೆ.
ಅವರ ಏಕ ಭಾಷೆ, ಏಕಧರ್ಮ ಸರಿಯಲ್ಲ. ಸಂವಿಧಾನಕ್ಕೆ ಧಕ್ಕೆ ಬರಬಾರದು. ಕಮಲ ದೇಶಕ್ಕೆ ಅಪಾಯಕಾರಿಯಾಗಿರುವುದರಿಂದ ದೀನದಲಿತರು, ಬಡವರು, ಅಲ್ಪಸಂಖ್ಯಾತರನ್ನು ರಕ್ಷಿಸಬೇಕಿದೆ. ಜನರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ಲೇಖಕನೇ ಹೊರತು ನಾನು ಎಂದಿಗೂ ಹೆದ್ದಾರಿ ಲೇಖಕನಾಗುವುದಿಲ್ಲ ಎಂದರು.
ಕಹಿ ಸತ್ಯಗಳನ್ನು ಸಮಾಜಕ್ಕೆ ತಿಳಿಸುವ ನನ್ನ ಜೈಭಜರಂಗಬಲಿ ಕಾದಂಬರಿಯನ್ನು ಡಾ.ಶಿವಮೂರ್ತಿ ಶರಣರು ಬಿಡುಗಡೆಗೊಳಿಸುವರು. ನಿರಂಕುಶ ಶಕ್ತಿಗಳ, ವಿಜಯನಗರ ಸಾಮ್ರಾಜ್ಯದ ವಿರುದ್ದ ಹೋರಾಡಿದ ನೆಲ ಚಿತ್ರದುರ್ಗ. ಹಾಗಾಗಿ ಆಡಂಭರ ಮದುವೆ ಮತ್ತು ಕೋಮುವಾದಿಗಳನ್ನು ವಿರೋಧಿಸಬೇಕು ಎಂದು ಸಂವಿಧಾನ ವಿರೋಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್, ಆರ್.ಶೇಷಣ್ಣಕುಮಾರ್, ಸರ್ಕಾರಿ ವಕೀಲರು ಹಾಗೂ ಲೇಖಕ ಓ.ಮ.ಪಂಡಿತಾರಾಧ್ಯ, ಯುವ ಕವಿ ಲೇಖಕ ಪ್ರಮೋದ್ ತುರ್ವಿಹಾಳ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.