ಚಿತ್ರದುರ್ಗ :
ಪ್ರತಿಯೊಬ್ಬ ವ್ಯಕ್ತಿಯ ಒಳಗಡೆ ವ್ಯಕ್ತಿತ್ವವಿದೆ. ಆ ವ್ಯಕ್ತಿತ್ವದ ಒಳಗಡೆ ವಿಚಾರಗಳಿರಬೇಕು. ಆ ವಿಚಾರಗಳು ಹಾರ್ದಿಕವಾಗಿರಬೇಕು. ಆ ವಿಚಾರಗಳು ಗಟ್ಟಿ ನಿರ್ಧಾರಗಳಾಗಬೇಕು. ಆ ನಿರ್ಧಾರಗಳೇ ನಿಲುವುಗಳು. ಈ ನಿಲುವುಗಳು ಸಮುದಾಯದ ಮೇಲೆ ಪ್ರಭಾವ ಬೀರುವಂತಹವು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ಬಸವಕೇಂದ್ರ ಶ್ರೀಮುರುಘಾಮಠ, ಎಸ್.ಜೆ.ಎಂ. ಪಾಲಿಟೆಕ್ನಿಕ್, ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಿನ್ನೆ ಸಂಜೆ ನಡೆದ ವ್ಯಕ್ತಿಯ ನಿಲುವು, ಸಮುದಾಯದ ಗೆಲುವು ಚಿಂತನ ವಿಷಯಾಧಾರಿತ ಶರಣಸಂಗಮ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು
ಇಂದು ನಿಲುವುಗಳೇ ಇಲ್ಲದ ವ್ಯಕ್ತಿತ್ವಗಳು ಬಹಳಷ್ಟಿವೆ. ಇಡೀ ಜನಸಮುದಾಯವನ್ನು ಮಾರ್ಗದರ್ಶಿಸುವ ಶಕ್ತಿ ಒಬ್ಬ ವ್ಯಕ್ತಿಯ ನಿಲುವುಗಳಲ್ಲಿ ಸಾಧ್ಯ. ನಿಲುವುಗಳು ವೈಯಕ್ತಿಕ; ಪರಿಣಾಮ ಸಾರ್ವತ್ರಿಕ. ಬಸವಣ್ಣನ ನಿಲುವು – ಸಮ ಸಮಾಜ. ಎಲ್ಲರ ಬದುಕಲ್ಲು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸೋಲು ಇರುತ್ತವೆ. ಆದರೆ ನಿಲುವುಗಳು ಸಾರ್ವತ್ರಿಕ ಕ್ಷೇತ್ರಗಳಲ್ಲಿ ಗೆಲುವು ತಂದುಕೊಡುತ್ತವೆ. ಗಟ್ಟಿತನದ ಮೇಲೆ ನಿಲುವುಗಳು ನಿಲ್ಲುತ್ತವೆ. ಗಾಂಧೀಜಿಯವರ ನಿಲುವುಗಳನ್ನು ಇಲ್ಲಿ ಉದಾಹರಿಸಬಹುದು.
ಯಾವ ವ್ಯಕ್ತಿ ವೈಯಕ್ತಿಕ ಸ್ತರದಲ್ಲಿ ನಿಲುವುಗಳನ್ನು ತೆಗೆದುಕೊಳ್ಳುತ್ತಾನೆ, ಅವನು ಸಮುದಾಯವನ್ನು ಕಟ್ಟಿಕೊಳ್ಳುತ್ತಾನೆ. ಒಬ್ಬ ವ್ಯಕ್ತಿ ಹಣ ಗಳಿಸಲು ತೆಗೆದುಕೊಂಡ ನಿರ್ಧಾರ ನಿಲುವು ಅಲ್ಲ. ನಿಲುವುಗಳು ಸಾರ್ವತ್ರಿಕವಾಗಿರುತ್ತವೆ, ಆರೋಗ್ಯಪೂರ್ಣವಾಗಿ ಇಡೀ ಸಮುದಾಯಕ್ಕೆ ಮಾರ್ಗದರ್ಶನ ಮಾಡುವಂತಹವಾಗಿರುತ್ತವೆ. ಸಾರ್ವತ್ರಿಕ ಕ್ಷೇತ್ರದಲ್ಲಿ ಗೆಲುವು ತಂದುಕೊಡುತ್ತವೆ ಎಂದರು
ಒಬ್ಬ ವ್ಯಕ್ತಿಯ ಗೆಲುವು ಸುಲಭ;
ಆದರೆ ಸಮುದಾಯದ ಗೆಲುವು ಕಷ್ಟ. ಸಂಪ್ರದಾಯಗಳ ಜೊತೆ ಸಾಗಬಹುದು ಆದರೆ ಅದು ಗಟ್ಟಿ ನಿಲುವು ಅಲ್ಲ. ಅದರ ವಿರುದ್ಧ ನಿಂತು ಸಮಸಮಾಜವನ್ನು ಕಟ್ಟುವುದು ಇದೆಯಲ್ಲ ಅದು ಗಟ್ಟಿ ನಿಲುವು. ಈ ಹಿನ್ನೆಲೆಯಲ್ಲಿ ಶ್ರೀಮಠಕ್ಕೆ ತನ್ನದೇ ಆದ ಜವಾಬ್ದಾರಿಯಿದೆ. ಆ ಮೂಲಕವೇ ಕರ್ತವ್ಯ ನಿರ್ವಹಿಸುತ್ತಿದೆ ಎಂದರು
ಹರಿಹರದ ಎಸ್‍ಜೆವಿಪಿ ಪ್ರಥಮದರ್ಜೆ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಯಾವ ವ್ಯಕ್ತಿ ತನ್ನ ಜಾತಿ ಮತ ಪಂಥ ಧರ್ಮವನ್ನು ಮೀರಿ ಕಾಲಿಟ್ಟಾಗ ಮಾತ್ರ ವಿಶ್ವಾಸಾತ್ಮಕ ನಿಲುವನ್ನು ತಾಳಲಿಕ್ಕೆ ಸಾಧ್ಯ. ಬಾಲ್ಯದ ಸಂಕಟಗಳನ್ನು ರೂಢಿಸಿಕೊಂಡ ನಮಗೆ ಅವುಗಳಿಂದ ಹೊರಬರುವುದೇ ಕಷ್ಟ. ನಮ್ಮ ಕುಟುಂಬ, ಸಮಾಜದ ಪ್ರಭಾವದಿಂದ ಆ ಸಂಪ್ರದಾಯದ ಮೂಲಭೂತವಾದದ ವಿಚಾರಗಳಿಂದ ಹೊರಬರಲಾಗದೆ ಇರುತ್ತೇವೆ. ತನ್ನ ಧರ್ಮ, ಜಾತಿ, ಸಮುದಾಯ, ಪ್ರಾದೇಶಿಕ ಎಲ್ಲೆಯನ್ನು ಮೀರಿದ ಮನೋಭಾವದಿಂದಾಗಿಯೇ ಮಾತ್ರ ಈ ಸಮುದಾಯಕ್ಕೆ ನಾವು ಏನನ್ನಾದರೂ ಕೊಡುಗೆ ನೀಡಬಹುದು ಎಂದರು
ಸಾಕ್ರೆಟಿಸ್ ಇರಬಹುದು, ಗೆಲಿಲಿಯೋ ಇರಬಹುದು, ಅಂಬೇಡ್ಕರ್, ರಾಮಮನೋಹರ ಲೋಹಿಯಾ, ಗಾಂಧಿ ಇರಬಹುದು ಇವರು ಕಟ್ಟಬಯಸಿದ ಸಮಾಜಕ್ಕಾಗಿ ತೆಗೆದುಕೊಂಡ ನಿಲುವಿಗಾಗಿ ಹಲವು ಸಂಘರ್ಷಗಳನ್ನು ಎದುರಿಸಬೇಕಾಯಿತು. ಈ ಸಂಘರ್ಷ ಇಂದಿಗೂ ಮುಂದುವರೆದಿದೆ ಎಂದು ಹೇಳಿದರು
ಸನಾತನ ಪರಂಪರೆ ಕಾಪಾಡಿಕೊಂಡು ಬರುವವರಿಗೆ ಸಂಘರ್ಷಗಳಿಲ್ಲ. ಧರ್ಮಾಧಿಕಾರಿಗಳು, ಸಮಾಜದ ಒಳಗಿನ ಕಲುಷಿತ ಭಾಗವನ್ನು ತೊಡೆದು ಹಾಕುವಾಗ ಮೌಢ್ಯ ಆಚರಣೆ, ಕಂದಾಚಾರ ದೂರ ಮಾಡುವುದು, ಇಂದಿನ ಅಗತ್ಯದ ಕಟ್ಟಬಯಸುವಾಗ ಸಂಘರ್ಷಗಳು ಎದುರು ನಿಲ್ಲುತ್ತವೆ. ಇದಕ್ಕೆ ಉದಾಹರಣೆ ಶ್ರೀಮುರುಘಾಮಠ ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯೂರಿನ ವಾಣಿ ಸಕ್ಕರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಡಿ. ಧರಣೇಂದ್ರಯ್ಯ ಅವರು ಕಷ್ಟದ ಮೂಲಕ ಹೊಸಚಿಂತನೆಗಳು ಬರುತ್ತವೆ, ಕಷ್ಟದಿಂದ ಹೊಸಜೀವನ ಕಟ್ಟಿಕೊಳ್ಳುವಲ್ಲಿ ಸಹಾಯಕವಾಗುತ್ತದೆ ಎಂಬುದಕ್ಕೆ ಸನ್ಮಾನಿತ ಕು| ಹೇಮಲತ ಸಾಕ್ಷಿ. ಅಂದು ಬಸವಣ್ಣನವರು ಹೇಳಿದ ತತ್ತ್ವವನ್ನು ಇಂದು ಶ್ರೀಮಠದ ಶರಣರು ಪಾಲಿಸುತ್ತಿದ್ದಾರೆ. ಅಂದಿನ ಅನುಭವ ಮಂಟಪ ಇಂದು ಶ್ರೀ ಮುರುಘಾಮಠದಲ್ಲಿದೆ. ಸಾಮಾಜಿಕ ನ್ಯಾಯವನ್ನು ನೀಡುತ್ತ, ಹೊಸ ಚಿಂತನೆಗಳನ್ನು ಈ ಸಮಾಜಕ್ಕೆ ನೀಡುತ್ತಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿದ ದಾವಣಗೆರೆ ವಿಶ್ವವಿದ್ಯಾಲಯದ ಬಿಎ ಪದವಿಯಲ್ಲಿ 5ನೇ ರ್ಯಾಂಕ್ ವಿಜೇತೆ ಕು| ಹೇಮಲತ ಮಾತನಾಡುತ್ತ, ನಮ್ಮ ಮನೆಯಲ್ಲಿ ಹಲವಾರು ಕಷ್ಟ-ಕಾರ್ಪಣ್ಯಗಳ ನಡುವೆ ಮನೆಯಲ್ಲಿದ್ದ ಅತ್ಯಲ್ಪ ಅವಕಾಶಗಳಲ್ಲೇ ಓದಿ ಬಂದೆ. ಇಂಥದ್ದನ್ನು ಕೊಡಿಸಿ ಎಂದು ನಾನು ಕೇಳಿದವಳಲ್ಲ. ಆದರೆ ಕಷ್ಟಪಟ್ಟ ಓದಿದ್ದೇನೆ. ನನ್ನ ಆರೋಗ್ಯ ಸರಿ ಇರದಿದ್ದಾಗ ನಮ್ಮ ಕಾಲೇಜಿನ ಉಪನ್ಯಾಸಕರು, ಸ್ನೇಹಿತರು ಆರ್ಥಿಕ ಸಹಾಯ ಮಾಡಿ ನನ್ನ ಈ ಸಾಧನೆಗೆ ಸಹಕಾರಿಯಾಗಿದ್ದಾರೆ ಎಂದರು
ಇದೇ ಸಂದರ್ಭದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಎಸ್.ಜೆ.ಎಂ. ಪಾಲಿಟೆಕ್ನಿಕ್ ಸಿಬ್ಬಂದಿಯವರು ಹಾಗೂ ಶ್ರೀಮಠದ 350ಕ್ಕು ಹೆಚ್ಚು ವಿದ್ಯಾರ್ಥಿಗಳಿದ್ದರು.
ಸಭಾ ಕಾರ್ಯಕ್ರಮದ ಬಳಿಕ ನಾಟ್ಯ ಯೋಗ ರಂಗಸಂಸ್ಥೆ ಸಾಲಾಪೂರ ರಾಮದುರ್ಗ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರು ಫೂ. ಹಚ್ಕೊಂಡ್ರ ಹಂತೆಕ, ಬಿಟ್ರ ದೂರ ಎಂಬ ಹಾಸ್ಯಪ್ರಧಾನ ನಾಟಕ ಅಭಿನಯಿಸಿ ಎಲ್ಲರನ್ನೂ ರಂಜಿಸಿದರು.ಜಮುರಾ ಕಲಾವಿದರು ಪ್ರಾರ್ಥಿಸಿದರು. ಎಸ್.ಜೆ.ಎಂ. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರಾದ ಟಿ.ವಿ. ವಿರೂಪಾಕ್ಷಪ್ಪ ಸ್ವಾಗತಿಸಿದರು. ಡಿ.ವಿ.ಮುರುಗೇಶ್ ವಂದಿಸಿದರು. ಉಮೇಶ್ ನಿರೂಪಿಸಿದರು.