ಸಂವಿಧಾನ ಅನುಷ್ಠಾನ ಮಾಡುವವರಲ್ಲೇ ದೋಷ..!!

ದಾವಣಗೆರೆ:

     ನಮ್ಮ ಮುಂದೆ ಇನ್ನೂ ಹಲವು ಸಮಸ್ಯೆ-ಸವಾಲುಗಳಿದ್ದು, ಇದರಿಂದಾಗಿ ಹಲವರು ಸಂವಿಧಾನವನ್ನು ದೂಷಿಸುತ್ತಿದ್ದಾರೆ. ಆದರೆ, ದೋಷ ಇರುವುದು ಸಂವಿಧಾನದಲಲ್ಲ, ಬದಲಿಗೆ ಅದನ್ನು ಅನುಷ್ಠಾನ ಮಾಡುವವರಲ್ಲಿ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ಪ್ರತಿಪಾದಿಸಿದರು.

    ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ದಾವಣಗೆರೆ, ಸಹಯಾನ ಮತ್ತು ಸಮುದಾಯ ಕರ್ನಾಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ‘ಸಂವಿಧಾನ ಓದು ಕಾರ್ಯಾಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ಸಮಾನತೆ, ಧರ್ಮ, ಅಹಿಂಸೆ, ಸಾಮಾಜಿಕ ನ್ಯಾಯ ನಮ್ಮ ಸಂವಿಧಾನದ ಮೂಲ ಆಶಯವಾಗಿದೆ. ಸಂವಿಧಾನ ಬಂದ ನಂತರ ಅನೇಕ ಉತ್ತಮ ಬದಲಾವಣೆಗಳು ಆಗಿವೆ. ಆದರೂ ಸಹ ನಮ್ಮ ಮುಂದೆ ಇಂದಿಗೂ ಅನೇಕ ಸವಾಲುಗಳು ಮತ್ತು ಸಮಸ್ಯೆಗಳಿವೆ. ಇದಕ್ಕೆ ಅನೇಕರು ಸಂವಿಧಾನವನ್ನೇ ದೂಷಿಸುವುದು ಸರಿಯಲ್ಲ. ಏಕೆಂದರೆ, ದೋಷ ಇರುವುದು ಸಂವಿಧಾನದಲ್ಲಲ್ಲ. ಬದಲಾಗಿ ಇದನ್ನು ಅನುಷ್ಟಾನಗೊಳಿಸುವವರಲ್ಲಿ ಎಂದು ಹೇಳಿದರು.

      ಎಲ್ಲರೂ ಸಂವಿಧಾನ ಅರ್ಥೈಸಿಕೊಂಡು ಅದರಂತೆ ನಡೆಯುವಲ್ಲಿ ಹೆಜ್ಜೆ ಇಡಬೇಕಿದೆ. ಈ ಸಂವಿಧಾನವನ್ನು ಉಳಿಸಿಕೊಂಡರೆ ಮಾತ್ರ ಎಲ್ಲಾ ಸವಾಲು ಮತ್ತು ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ. ದೇಶದ ಬಹುತ್ವವನ್ನು ರಕ್ಷಿಸಿಕೊಂಡು ಬರುತ್ತಿರುವ ನಮ್ಮ ಸಂವಿಧಾನವನ್ನು ಪ್ರತಿಯೊಬ್ಬರೂ ಓದಿ, ಅರ್ಥೈಸಿಕೊಂಡು ಅದರಂತೆ ನಡೆಯಬೇಕು ಎಂದು ಕರೆ ನೀಡಿದರು.

      ರಾಜಕೀಯ ಅಧಿಕಾರ ಎಂದರೇನು ಎಂಬುದನ್ನು ತಿಳಿಯಬೇಕು. ಕಾನೂನು ಮಾಡುವುದು ಶಾಸಕಾಂಗ, ಇದನ್ನು ಜಾರಿಗೆ ತರುವುದು ಕಾರ್ಯಾಂಗ ಮತ್ತು ಈ ಕಾನೂನುಗಳನ್ನು ಉಲ್ಲಂಘನೆ ಮಾಡಿದರೆ ಶಿಕ್ಷಿಸುವುದು ನ್ಯಾಯಾಂಗ. ಈ ಅಂಗಗಳ ಕಾರ್ಯವೈಖರಿ ನಿಯಂತ್ರಿ ಸುವುದು ಸಂವಿಧಾನ. ಹಿಂದೆ ರಾಜರುಗಳ ಕೈಯಲ್ಲಿ ಈ ಎಲ್ಲ ಅಧಿಕಾರಿಗಳಿದ್ದವು. ಕ್ರಮೇಣ ಪ್ರಜಾಪ್ರಭುತ್ವ ವ್ಯವಸ್ಥೆ ಬಂತು. ಇಂದು 199 ರಾಷ್ಟ್ರಗಳ ಪೈಕಿ 190 ರಾಷ್ಟ್ರಗಳು ತಮ್ಮದೇ ಆದ ಸಂವಿಧಾನವನ್ನು ಹೊಂದಿವೆ.

     ನಾವು ನಮ್ಮ ಸಂವಿಧಾನವನ್ನು ಓದಿ ಅರ್ಥೈಸಿಕೊಂಡು ಅದರಂತೆ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಕಳೆದ 10 ವರ್ಷಗಳಲ್ಲಿ ಪಠ್ಯದಲ್ಲಿ ಅಳವಡಿಸಿರುವ ಸಂವಿಧಾನವನ್ನು ವಿದ್ಯಾರ್ಥಿಗಳು ಕೇವಲ 35 ಅಂಕ ಪಡೆಯುವ ಉದ್ದೇಶದಿಂದ ಓದುತ್ತಿದ್ದಾರೆ. ಹೀಗಾದರೆ ಇದನ್ನು ಅರ್ಥೈಸಿಕೊಂಡು ಇದರ ಆಶಯಗಳನ್ನು ಮೈಗೂಡಿಸಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಸಂವಿಧಾನವನ್ನು ಎಲ್ಲರೂ ತಿಳಿಯಬೇಕೆಂಬ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂವಿಧಾನ ಓದು ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

     ಭಾರತ 1947 ರಲ್ಲಿ ಸ್ವಾತಂತ್ರ್ಯ ಪಡೆದ ದೇಶ. 1950 ರಲ್ಲಿ ವಿಶ್ವದಲ್ಲೇ ಅತಿದೊಡ್ಡ ಮತ್ತು ಮಹತ್ತರವಾದ ಸಂವಿಧಾನವನ್ನು ರಚಿಸಿತು. ಸಂವಿಧಾನ ಜಾರಿಯಾದ ಈ 70 ವರ್ಷಗಳಲ್ಲಿ ನಾವು ಸಾಧಿಸಿದ್ದೇನು ಎಂಬ ಪ್ರಶ್ನೆಗೆ ಉತ್ತರ ಹಿಂದೆ ಸುಮಾರು 600 ರಾಜರು ನಮ್ಮನ್ನು ಆಳುತ್ತಿದ್ದರು. ಅದು ಬದಲಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದು, ದೇಶಕ್ಕೆ ಗಡಿ ನಿಗದಿಯಾಗಿ, ಸಂವಿಧಾನ ಬಂದ ನಂತರ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಕಟ್ಟಲಾಯಿತು.

     ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ ಹೀಗೆ ಅನೇಕ ವಲಯಗಳಲ್ಲಿ ಉತ್ತಮ ಬದಲಾವಣೆಗಳನ್ನು ಕಂಡಿದ್ದೇವೆ. ಬಡತನ ಕಡಿಮೆಯಾಗಿದೆ, ಶಿಕ್ಷಣ ಮಟ್ಟ ಹೆಚ್ಚಿದೆ, ಮಹಿಳೆ, ದಲಿತರು, ಬುಡಕಟ್ಟು ಜನಾಂಗ, ಅಲ್ಪಸಂಖ್ಯಾತರು ಅಭಿವೃದ್ದಿ ಹೊಂದುತ್ತಿದ್ದಾರೆ. ಇಂದು ಎಲ್ಲ ಕ್ಷೇತ್ರದಲ್ಲಿ ಮಹಿಳೆ ಇದ್ದಾಳೆ. ಹಿಂದುಳಿದ, ಕೆಳಜಾತಿಯವರು ಉನ್ನತ ಸ್ಥಾನಲ್ಲಿದ್ದಾರೆ ಎಂದರೆ ಇದಕ್ಕೆ ಸಂವಿಧಾನ ಕೊಟ್ಟ ಅವಕಾಶಗಳೇ ಕಾರಣ. ಆದರೆ ಇಂತಹ ಸಂವಿಧಾನದ ಮಹತ್ವ ಅರಿಯಬೇಕಿದೆ. ಇದನ್ನು ಓದಿ ಅದರಂತೆ ನಡೆಯುವ ತುರ್ತು ಇದೆ ಎಂದರು.

      ಸುಮಾರು 4635 ಜನಾಂಗಗಳು, 325 ಭಾಷೆಗಳು, 25 ಲಿಪಿಗಳೊಂದಿಗೆ ಸಹಜೀವನ ನಡೆಸುತ್ತಿರುವ ಬಹುತ್ವದ ದೇಶ ನಮ್ಮದು. ಈ ಬಹುತ್ವ ಅರ್ಥವಾಗಬೇಕಾದರೆ ನಮ್ಮ ಮೂಲ ನಮಗೆ ತಿಳಿಯಬೇಕು. ನಮ್ಮ ಸಾಮಾಜಿಕ, ಆರ್ಥಿಕ ಸಂಬಂಧಗಳು ಅರ್ಥವಾಗದೇ ಹೋದರೆ ಕಲ್ಯಾಣ ರಾಜ್ಯದ ಅರ್ಥ ಆಗುವುದಿಲ್ಲ. ನಮ್ಮದು ಹಳ್ಳಿಗಳ ದೇಶ. ಸುಮಾರು 6.50 ಲಕ್ಷ ಹಳ್ಳಿಗಳಿವೆ. ದೇಶದಲ್ಲಿ ಮಿಶ್ರ ಆರ್ಥಿಕತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಮಲ್ಟಿ ನ್ಯಾಷನಲ್, ಟ್ರಾನ್ಸ್‍ನ್ಯಾಷನಲ್ ಕಂಪೆನಿಗಳು ಕೇವಲ ಮಾರುಕಟ್ಟೆಯನ್ನಲ್ಲ ಬದಲಾಗಿ ಮನಸ್ಸುಗಳನ್ನು ನಿಯಂತ್ರಿಸುತ್ತಿರುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

       ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕುಲಕರ್ಣಿ ಅಂಬಾದಾಸ್ ಜಿ, ದೇಶದಲ್ಲಿ ಪ್ರತಿ ಧರ್ಮಗಳಿಗೆ ಇರುವ ಒಂದೊಂದು ಪವಿತ್ರ ಗ್ರಂಥಗಳಂತೆ ಇಡೀ ಭಾರತ ದೇಶಕ್ಕೆ ಸಂವಿಧಾನ ಒಂದು ಪವಿತ್ರ ಗ್ರಂಥವಾಗಿದೆ. ಸಂವಿಧಾನವನ್ನು ಪ್ರತಿಯೊಬ್ಬರು ಓದಿ, ಅರ್ಥೈಸಿಕೊಂಡು ಮತ್ತೊಬ್ಬರಿಗೆ ಓದುವ ಹಾಗೆ ಉತ್ತೇಜಿಸಬೇಕು. ಸಂವಿಧಾನವನ್ನು ಓದಿ ತಿಳಿದುಕೊಂಡಲ್ಲಿ ಅಪರಾಧಗಳು ನಡೆಯುವುದು ಕಡಿಮೆಯಾಗುತ್ತವೆ ಎಂದರು.

          ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಮಾತನಾಡಿ, ಇಂದು ಸಂವಿಧಾನ ಓದು ಅಭಿಯಾನ ಕೈಗೊಳ್ಳುವ ಮೂಲಕ ಸಾಮಾನ್ಯರ ಕೈಗೆ ಸಂವಿಧಾನ ಓದು ಪುಸ್ತಕ ದೊರಕುವಂತೆ ಮಾಡಿರುವ ನ್ಯಾಯಾಮೂರ್ತಿ ನಾಗಮೋಹನ್ ದಾಸ್‍ರವರ ಕಾರ್ಯ ಶ್ಲಾಘನೀಯ. ಇವರು ನಮ್ಮ ಸಂವಿಧಾನದ ಕುರಿತು ಅತ್ಯಂತ ಸರಳವಾಗಿ ಬರೆದು ಎಲ್ಲರಿಗೂ ದೊರಕುವಂತೆ ಮಾಡಿದ್ದಾರೆ. ಈ ಪುಸ್ತಕ ಭಾರತದ ಇತಿಹಾಸದೊಂದಿಗೆ ತುಲನಾತ್ಮಕವಾಗಿ ರಚಿತವಾಗಿದ್ದು ಕಥಾ ಪುಸ್ತಕದಂತೆ ಓದಿಸಿಕೊಂಡು ಹೋಗುತ್ತದೆ.

         ಇಂತಹ ಪುಸ್ತಕಗಳು ಎಲ್ಲಾ ಶಾಲಾ ಮಕ್ಕಳ ಕೈಯಲ್ಲಿದ್ದರೆ ಮಕ್ಕಳಿಗೆ ಪ್ರಾರಂಭದಿಂದಲೇ ಸಂವಿಧಾನದ ಕುರಿತು ಪ್ರಜ್ಞೆ ಬೆಳೆಯುತ್ತದೆ. ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಒಬ್ಬರು ಇಂದು ಸಾಮಾನ್ಯರ ನಡುವೆ ಬಂದು ಸಂವಿಧಾನ ಓದು ಎನ್ನುವ ಅಭಿಯಾನಕ್ಕೆ ಕೈಜೋಡಿಸುತ್ತಿರುವುದಕ್ಕೆ ಅಭಿನಂದನೀಯವಾಗಿದ್ದು, ಅವರ ಈ ಸಾಮಾಜಿಕ ಕಾಳಜಿಗೆ ಯಶಸ್ಸು ಸಿಗಲೆಂದು ಆಶಿಸಿದರು.

        ಪ್ರಾಸ್ತಾವಿಕ ಮಾತನಾಡಿದ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣಕುಮಾರ್, ಎಲ್ಲ ಕಾನೂನುಗಳ ತಾಯಿಯಾಗಿರುವ ನಮ್ಮ ಸಂವಿಧಾನವನ್ನು ಅತ್ಯಂತ ಸರಳವಾಗಿ, ಅರ್ಥವಾಗುವ ರೀತಿಯಲ್ಲಿ ಪುಸ್ತಕ ಬರೆದು, ಅದರ ಕುರಿತು ರಾಜ್ಯಾದ್ಯಂತ ಅಭಿಯಾನದ ಮೂಲಕ ತಿಳಿಸುತ್ತಿರುವ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾ.ಹೆಚ್.ಎನ್.ನಾಗಮೋಹನ ದಾಸ್‍ರವರು ಉತ್ತಮ ವಾಗ್ಮಿ ಮತ್ತು ಸಾಹಿತಿ ಆಗಿದ್ದಾರೆ ಎಂದರು.

       ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಹೆಚ್.ಬಸವರಾಜೇಂದ್ರ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು.ಎನ್.ಬಡೀಗೇರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ್, ಹಿರಿಯ ಸಿವಿಲ್ ನ್ಯಾಯಾಧೀಶ ಕೆಂಗಬಾಲಯ್ಯ, ಸರ್ಕಾರಿ ಅಭಿಯೋಜಕ ವಿ.ಎಸ್.ಪಾಟೀಲ್, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಡಿಎಚ್‍ಓ ಡಾ.ರಾಘವೇಂದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿಜಯ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap