ದಾವಣಗೆರೆ:
ಸಂವಿಧಾನ ಬದಲಿಸುವ ಗುಪ್ತ ಅಜೆಂಡಾ ಹೊಂದಿರುವ ಸಂವಿಧಾನ ವಿರೋಧಿ ಬಿಜೆಪಿಯನ್ನು ಈ ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ, ಪ್ರಗತಿಪರ ಚಿಂತಕ ಎಸ್.ಜಿ.ಸಿದ್ದರಾಮಯ್ಯ ಕರೆ ನೀಡಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವರೊಬ್ಬರು ಸಂವಿಧಾನ ಬದಲಿಸಲಿಕ್ಕಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದರೂ ಸಹ ಆ ಪಕ್ಷದ ಯಾರೂ ಸಹ ಆ ಹೇಳಿಕೆಯನ್ನು ಖಂಡಿಸಿ, ವಿರೋಧಿಸಿ ಹೇಳಿಕೆ ನೀಡಲಿಲ್ಲ. ಇದನ್ನು ನೋಡಿದರೆ, ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ಬಿಜೆಪಿಯ ಎಲ್ಲರಿಗೂ ಸಂವಿಧಾನ ಬದಲಿಸುವ ಮನಸ್ಸಿದೆ. ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ, ಪರ್ಯಾಯ ರಾಜಕೀಯ ಶಕ್ತಿಯನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.
ಹಿಂದೆಂದು ನಡೆಯದ ಘಟನೆಗಳು ಈ ಐದು ವರ್ಷಗಳ ಮೋದಿ ಆಡಳಿತದಲ್ಲಿ ನಡೆದಿದ್ದು, ತುರ್ತುಪರಿಸ್ಥಿತಿಯ ಸಂದರ್ಭಗಳಲ್ಲೂ ಸಹ ಅಂತಹ ಕರಾಳ ಘಟನೆಗಳು ನಡೆದಿರಲಿಲ್ಲ. ಆದರೆ, ಈಗ ಭೀಕರ ಘಟನೆಗಳು ನಡೆಯುತ್ತಿದ್ದು, ಒಂದು ರೀತಿಯಲ್ಲಿ ಪರೋಕ್ಷವಾಗಿ ತುರ್ತು ಪರಿಸ್ಥಿತಿ ಹೇರಿರುವ ವಾತಾವರಣವಿದೆ ಎಂದು ಆರೋಪಿಸಿದರು.
ಬಹುತ್ವದ ಭಾರತದಲ್ಲಿ ವೈವಿದ್ಯಮಯ ಜೀವನ ವಿಧಾನವಿದೆ. ಹಿಂದಿನ ಎಲ್ಲಾ ಸರ್ಕಾರಗಳು ಬಹುತ್ವವನ್ನು ಮಾನ್ಯ ಮಾಡುವ ರೀತಿಯಲ್ಲಿ ಆಡಳಿತ ನೀಡಿದ್ದವು. ಆದರೆ, ಮೋದಿ ಸರ್ಕಾರ ಬಹುತ್ವಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಏಕ ಭಾಷೆ, ಏಕ ಧರ್ಮ, ಏಕ ಸಂಸ್ಕತಿಯ ಮೂಲಕ ದೇಶವನ್ನು ಏಕತ್ವದೆಡೆಗೆ ಕೊಂಡ್ಡೊಯ್ಯುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಸೈನ್ಯವನ್ನು ರಾಜಕಾರಣಕ್ಕೆ ಬಳಸುವ ಕೆಟ್ಟ ಸಂಸ್ಕತಿಯನ್ನು ದೇಶದಲ್ಲಿ ಆರಂಭಿಸಿದೆ. ಅಭ್ಯರ್ಥಿಗಳ ಹೆಸರಿನಲ್ಲಿ ಮತ ಕೇಳುವುದು ಒಂದು ಆರೋಗ್ಯಕರ ಚುನಾವಣೆಯ ಲಕ್ಷಣವಾಗಿದೆ. ಆದರೆ, ಈಗ ದೇಶಾದ್ಯಂತ ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಮೋದಿ ಹೆಸರು ಹೇಳಿ ಮತ ಕೇಳುತ್ತಿದ್ದಾರೆ. ಏಕೆ ಇವರ್ಯಾರಿಗೂ ಮುಖ, ವ್ಯಕ್ತಿತ್ವ ಇಲ್ಲವೇ? ಎಂದು ಪ್ರಶ್ನಿಸಿದರು.