ಸಂಚಲನ ಮೂಡಿಸಿರುವ ಆಯುಕ್ತರ ಕ್ರಮ

ತುಮಕೂರು

       ಕುಡಿಯುವ ನೀರಿನ ಪೂರೈಕೆ ವಿಭಾಗದಲ್ಲಿ ಸಾಮಗ್ರಿಗಳ ಬಳಕೆ ಹಾಗೂ ನೀರು ವಿತರಣೆಯಲ್ಲಿ ಕಂಡುಬಂದ ಲೋಪದೋಷಗಳ ಹಿನ್ನೆಲೆಯಲ್ಲಿ ಓರ್ವನಿಗೆ ಹಿಂಬಡ್ತಿ ನೀಡಿ ಹಾಗೂ ಮೂವರನ್ನು ವಜಾ ಮಾಡಿ ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಪಾಲನ್  ಅವರು ಕೈಗೊಂಡಿರುವ ಆಡಳಿತಾತ್ಮಕ ಕ್ರಮವು ಬುಧವಾರ ಪಾಲಿಕೆ ಆಡಳಿತದಲ್ಲಿ ತೀವ್ರ ಸಂಚಲನ ಮೂಡಿಸಿದೆ.

        ಪಾಲಿಕೆಯಲ್ಲಿ -ವಿಶೇಷವಾಗಿ- ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದಲ್ಲಿ ಈಗಿನ ಈ ಕ್ರಮವು ಎಚ್ಚರಿಕೆ ಮೂಡಿಸಿದೆಯೆಂದು ಹೇಳಲಾಗುತ್ತಿದೆ.

      ನೀರು ಪೂರೈಕೆ ವಿಭಾಗವಷ್ಟೇ ಅಲ್ಲದೆ ನಗರದ ಸ್ವಚ್ಛತಾ ವಿಭಾಗದಲ್ಲೂ ಹೊರಗುತ್ತಿಗೆ ಕಾರ್ಮಿಕರು ಇದ್ದಾರೆ. ಅಲ್ಲದೆ ಪಾಲಿಕೆ ಕಚೇರಿಯಲ್ಲೂ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವವರು ಇದ್ದಾರೆ. ಆಯುಕ್ತರ ಕ್ರಮವು ಇವರೆಲ್ಲರ ಮೇಲೂ ಪರಿಣಾಮ ಬೀರಿದೆ. ಈ ವಿಭಾಗಗಳಲ್ಲೂ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವ ಸಿಬ್ಬಂದಿಗಳ ವಿರುದ್ಧ ಆಯಕ್ತರು ಕ್ರಮ ಕೈಗೊಳ್ಳುವ ಸಂಭವ ಇದೆ. ಅದರಲ್ಲೂ ರಾಜಕೀಯ ಪ್ರಭಾವ ಬಳಸಿಕೊಂಡು ಉಡಾಫೇಯಿಂದ ಇದ್ದವರಿಗಂತೂ ಈ ಬೆಳವಣಿಗೆಯು ಬೆವರಿಳಿಯುವಂತೆ ಮಾಡಿದೆಯೆನ್ನಲಾಗಿದೆ.

14 ನೌಕರರ ವರ್ಗಾವಣೆ

     ಈ ಮಧ್ಯ ಪಾಲಿಕೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 6 ಜನ ಪ್ರಥಮದರ್ಜೆ ಸಹಾಯಕರು (ಆರ್.ರೇವಣ್ಣ, ಡಿ.ಎಸ್.ಅಮೃತಕುಮಾರಿ, ಎಸ್.ಎನ್.ಶಿವಕುಮಾರ್, ಎಸ್.ಎನ್.ರಾಹುಲ್, ಸಿ.ಪಿ.ನಾಗೇಶ್,ಕೃದ್ದೀನ್ ಪಾಷ), 6 ಜನ ದ್ವಿತೀಯ ದರ್ಜೆ ಸಹಾಯಕರು (ಆರ್.ಶಾಂತಕುಮಾರ್, ಸಿ.ಎಚ್.ಶ್ರೀನಿವಾಸ್, ಡಿ.ಮಂಜು, ನಲ್ಲಪ್ಪ, ಬಸವರಾಜು, ಈ. ಮಹದೇವಸ್ವಾಮಿ) ಮತ್ತು ಇಬ್ಬರು ಕರವಸೂಲಿಗಾರರು (ಗೋಪಾಲಕೃಷ್ಣ, ರಾಮಕೃಷ್ಣ) -ಹೀಗೆ ಒಟ್ಟು 14 ಜನ ನೌಕರರನ್ನು ಪಾಲಿಕೆಯ ಆಯುಕ್ತರು ಏಪ್ರಿಲ್ 22 ರಂದು ಪಾಲಿಕೆಯ ಮತ್ತೊಂದು ವಿಭಾಗಕ್ಕೆ ವರ್ಗಾವಣೆ ಮಾಡಿರುವ ಇನ್ನೊಂದು ವಿಶೇಷ ಬೆಳವಣಿಗೆಯೂ ನಡೆದಿದೆ. ಇದು ಸಹ ಪಾಲಿಕೆ ಆಡಳಿತದಲ್ಲಿ ಸಂಚಲನ ಮೂಡಿಸಿದೆ.

ದಿಕ್ಕು ತಪ್ಪಿಸುವ ಕೃತ್ಯ

        ಪಾಲಿಕೆಯ ಆಡಳಿತದಲ್ಲಿ ಆಯುಕ್ತ ಟಿ.ಭೂಪಾಲನ್ ಅವರು ಕೈಗೊಳ್ಳುತ್ತಿರುವ ಸುಧಾರಣಾ ಕ್ರಮಗಳು ಕೆಲವು ಪಟ್ಟಭದ್ರಹಿತಾಸಕ್ತಿ ಗಳಿಗೆ ಹಾಗೂ ಕಿಡಿಗೇಡಿಗಳಿಗೆ ಕಣ್ಣು ಕೆಂಪಾಗುವಂತೆ ಮಾಡಿದೆ. ಇಂತಹ ಕೆಲ ಪಟ್ಟಭದ್ರರು/ಕಿಡಿಗೇಡಿಗಳು ಇದೀಗ ಚುರುಕಾಗಿದ್ದು, ಪಾಲಿಕೆಯ ಸಿಬ್ಬಂದಿಯನ್ನು ಕರೆದು “ಬಿಟ್ಟಿ ಉಪದೇಶ” ನೀಡುವ ಮೂಲಕ ದಿಕ್ಕುತಪ್ಪಿಸುವ ಕೃತ್ಯ ಎಸಗುತ್ತಿದ್ದಾರೆಂಬ ವದಂತಿ ಪಾಲಿಕೆಯ ತುಂಬ ಹರಡುತ್ತಿದೆಯೆನ್ನಲಾಗಿದೆ. “ಒಂದು ವೇಳೆ ಪಾಲಿಕೆ ಸಿಬ್ಬಂದಿ ಇಂಥ ಕಿಡಿಗೇಡಿಗಳ `ಬಿಟ್ಟಿ ಉಪದೇಶ’ವನ್ನು ಕೇಳಿದರೆ ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ” ಎಂದು ಕೆಲವು ಅನುಭವಿ ಸಿಬ್ಬಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಸಾಮಗ್ರಿಗಳ ಮಿತ ಬಳಕೆ

            “ಕಳೆದ ವರ್ಷ ಇದೇ ಬೇಸಿಗೆ ಸಮಯದಲ್ಲಿ ಪಾಲಿಕೆಯ ನೀರು ಪೂರೈಕೆ ವಿಭಾಗಕ್ಕೆ ತರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಪೈಪ್ ಇತ್ಯಾದಿ ಸಾಮಗ್ರಿಗಳು ಕೇವಲ ಒಂದು ವಾರದೊಳಗೆ ದಾಸ್ತಾನು ಶಾಖೆಯಿಂದ ಖಾಲಿ ಆಗಿಬಿಟ್ಟಿದ್ದವು! ಆದರೆ ಈ ವರ್ಷ ತರಿಸಿರುವ ಸಾಮಗ್ರಿಗಳಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಅಗತ್ಯವಿರುವಷ್ಟು ಸಾಮಗ್ರಿಗಳು ಮಾತ್ರ ಬಳಕೆಯಾಗಿದ್ದು, ಮಿಕ್ಕ ಸಾಮಗ್ರಿಗಳು ಹಾಗೆಯೇ ಉಳಿದಿವೆ. ಇದಕ್ಕೆ ಆಯುಕ್ತ ಭೂಪಾಲನ್ ಅವರು ಕೈಗೊಂಡಿರುವ ಪಾರದರ್ಶಕವಾದ ಕಠಿಣ ಕ್ರಮಗಳೇ ಕಾರಣ” ಎಂಬ ಮಾತುಗಳು ಪಾಲಿಕೆಯಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap