ಸಂಚಾರಿ ಮೇವು ಬ್ಯಾಂಕ್‍ಗೆ ಚಾಲನೆ : ಮೊದಲನೆ ದಿನವೇ ರೈತರಿಂದ ಉತ್ತಮ ಸ್ಪಂದನೆ

ಚಿತ್ರದುರ್ಗ:

     ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಾನುವಾರುಗಳ ರಕ್ಷಣೆ ನಿಟ್ಟಿನಲ್ಲಿ ಜಿಲ್ಲಾಡಳಿತ ಸಂಚಾರಿ ಮೇವು ಬ್ಯಾಂಕ್ ಪ್ರಾರಂಭಿಸಲು ನಿರ್ಧಾರ ಕೈಗೊಂಡ ಬೆನ್ನಲ್ಲೇ ಮಂಗಳವಾರದಂದು ಚಳ್ಳಕೆರೆ ತಾಲ್ಲೂಕಿನಲ್ಲಿ ಸಂಚಾರಿ ಮೇವು ಬ್ಯಾಂಕ್‍ಗೆ ಚಾಲನೆ ನೀಡಲಾಗಿದೆ. ಮೊದಲ ದಿನವೇ ರೈತರಿಂದ ಭರ್ಜರಿ ರೆಸ್ಪಾನ್ಸ್ ದೊರೆತಿದ್ದು, ಸುಮಾರು 2 ಟನ್ ಮೇವು ವಿತರಣೆ ಮಾಡಲಾಗಿದೆ.

     ಸಂಚಾರಿ ಮೇವು ಬ್ಯಾಂಕ್ ಪ್ರಾರಂಭಿಸಿದ ಕುರಿತು ಮಾಹಿತಿ ನೀಡಿದ ಚಳ್ಳಕೆರೆ ತಹಸಿಲ್ದಾರ್ ತುಷಾರ್ ಬಿ. ಹೊಸೂರು ಅವರು, ಜಿಲ್ಲಾಧಿಕಾರಿಗಳ ಸೂಚನೆಯಂತೆ ಗ್ರಾಮಗಳಿಗೆ ತೆರಳಿ ರೈತರ ಮನೆಬಾಗಿಲಿಗೆ ರಿಯಾಯಿತಿ ದರದಲ್ಲಿ ಮೇವು ನೀಡುವಂತಹ ಸಂಚಾರಿ ಮೇವಿ ಬ್ಯಾಂಕ್ ಅನ್ನು ಚಳ್ಳಕೆರೆ ತಾಲ್ಲೂಕಿನಲ್ಲಿ ಮಂಗಳವಾರದಂದು ಚಾಲನೆ ನೀಡಲಾಗಿದೆ ಎಂದು ಹೇಳಿದರು

      ತೀವ್ರ ಬರ ಹಿನ್ನೆಲೆಯಲ್ಲಿ ಜಾನುವಾರುಗಳನ್ನು ರಕ್ಷಿಸುವ ಸಲುವಾಗಿ ಕೇವಲ 2 ರೂ. ಗೆ ಒಂದು ಕೆ.ಜಿ. ರಿಯಾಯಿತಿ ದರದಲ್ಲಿ ಪ್ರತಿ ಜಾನುವಾರಿಗೆ ದಿನಕ್ಕೆ 8 ಕೆ.ಜಿ. ಯಂತೆ ಮೇವು ನೀಡಲು ಹಾಗೂ ಮೇವನ್ನು ತಾಲ್ಲೂಕು ಆಡಳಿತದಿಂದಲೇ ರೈತರ ಮನೆ ಬಾಗಿಲಿಗೆ ತಲುಪಿಸಲು ಇತ್ತೀಚೆಗಷ್ಟೇ ಜಿಲ್ಲಾಡಳಿತ ನಿರ್ಧರಿಸಿತ್ತು. ಜಿಲ್ಲಾಧಿಕಾರಿಗಳು ಅಗತ್ಯಕ್ಕೆ ಅನುಗುಣವಾಗಿ, ಕೂಡಲೆ ಸಂಚಾರಿ ಮೇವು ಬ್ಯಾಂಕ್ ಅನ್ನು ಪ್ರಾರಂಭಿಸಲು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚಳ್ಳಕೆರೆ ತಾಲ್ಲೂಕಿನಲ್ಲಿ ಸಂಚಾರಿ ಮೇವು ಬ್ಯಾಂಕ್ ಪ್ರಾರಂಭಿಸಲಾಗಿದೆ.

      ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕರು, ಎಲ್ಲೆಲ್ಲಿ ಮೇವಿನ ಅಗತ್ಯವಿದೆ ಎಂಬುದಾಗಿ ಕೈಗೊಂಡ ಸಮೀಕ್ಷೆ ಆಧಾರದಲ್ಲಿ ಮೇವು ಪೂರೈಸಲು ನಿರ್ಧರಿಸಲಾಗಿದೆ. ಅಲ್ಲದೆ 5-6 ರೈತರು ಸೇರಿ ಮೇವಿಗೆ ಬೇಡಿಕೆ ಸಲ್ಲಿಸಿದಲ್ಲಿ ಗ್ರಾಮಕ್ಕೆ ತೆರಳಿ ಮೇವು ಪೂರೈಸಲಾಗುವುದು. ಸದ್ಯ ಚಳ್ಳಕೆರೆ ತಾಲ್ಲೂಕಿನ ಬೆಳೆಗೆರೆ, ಟಿ.ಎನ್. ಕೋಟೆ, ದೊಡ್ಡ ಚೇಲೂರು ಸೇರಿದಂತೆ ವಿವಿಧ ಗ್ರಾಮಗಳ ರೈತರಿಂದ ಮೇವಿಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ವಾಹನದಲ್ಲಿ ಮೇವು ತುಂಬಿಸಿಕೊಂಡು, ಗ್ರಾಮಗಳಿಗೆ ತೆರಳಿ ಮೇವುನ್ನು ರೈತರ ಸಮ್ಮುಖದಲ್ಲಿಯೇ ತೂಕ ಹಾಕಿ, ವಿತರಿಸಲಾಗಿದೆ.

     ಮೊದಲ ದಿನವೇ ರೈತರಿಂದ ಉತ್ತಮ ಸ್ಪಂದನೆ ದೊರೆತಿದೆ. ರೈತರು ಕೂಡ ರಿಯಾಯಿತಿ ದರದಲ್ಲಿ ಗ್ರಾಮದಲ್ಲಿಯೇ ಮೇವು ದೊರೆತಿದ್ದು, ಉತ್ತಮ ಬೆಳವಣಿಗೆಯಾಗಿದೆ. ಬೇಸಿಗೆಯಲ್ಲಿ ಮೇವಿಲ್ಲದೆ ಜಾನುವಾರುಗಳನ್ನು ರಕ್ಷಿಸಲು ತೊಂದರೆ ಎದುರಿಸುತ್ತಿದ್ದೆವು. ಆದರೆ ಇದೀಗ ಜಿಲ್ಲಾಡಳಿತ ನಮ್ಮ ಗ್ರಾಮಕ್ಕೇ ಬಂದು ಕೇವಲ 2 ರೂ.ಗೆ ಒಂದು ಕೆ.ಜಿ. ಯಂತೆ ರಿಯಾಯಿತಿ ದರದಲ್ಲಿ ಮೇವು ವಿತರಿಸಲು ಕ್ರಮ ಕೈಗೊಂಡಿರುವುದು ಸಂತಸ ತಂದಿದೆ ಎಂದು ತೃಪ್ತಿ ವ್ಯಕ್ತಪಡಿಸಿದ್ದಾರೆ.

      ಮೇವು ಪೂರೈಕೆ ಸಂದರ್ಭದಲ್ಲಿ ಪಶುಸಂಗೋಪನೆ ಇಲಾಖೆಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮ ಲೆಕ್ಕಿಗರ ಮೇಲ್ವಿಚಾರಣೆಯಲ್ಲಿ ಮೇವು ವಿತರಿಸಲಾಗುತ್ತಿದೆ. ಮೊದಲ ದಿನವೇ 2 ಟನ್ ಗಿಂತಲೂ ಹೆಚ್ಚಿನ ಮೇವನ್ನು ಸುಮಾರು 50 ಕ್ಕೂ ಹೆಚ್ಚು ರೈತರು ರಿಯಾಯಿತಿ ದರದಲ್ಲಿ ಖರೀದಿಸಿದ್ದಾರೆ. ಚಳ್ಳಕೆರೆ ತಾಲ್ಲೂಕಿನ ತಳಕು, ಪರಶುರಾಂಪುರ, ಕಸಬಾ ಹಾಗೂ ನಾಯಕನಹಟ್ಟಿ ಹೋಬಳಿಯಲ್ಲಿ ಪ್ರತಿ ಹೋಬಳಿಗೆ ಒಂದು ವಾಹನದಂತೆ, ಸಂಚಾರಿ ಮೇವು ಬ್ಯಾಂಕ್ ಕಾರ್ಯಾಚರಣೆ ಮೇ. 11 ರಿಂದಲೇ ಆರಂಭವಾಗಲಿದೆ ಎಂದು ವಿವರ ನೀಡಿದರು.

     ರೈತರು ಜಾನುವಾರುಗಳ ರಕ್ಷಣೆಗಾಗಿ ಜಿಲ್ಲಾಡಳಿತ ಪ್ರಾರಂಭಿಸಿರುವ ಸಂಚಾರಿ ಮೇವು ಬ್ಯಾಂಕ್‍ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಚಳ್ಳಕೆರೆ ತಹಸಿಲ್ದಾರ್ ತುಷಾರ್ ಬಿ ಹೊಸೂರ್ ಅವರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap