ಹಿರಿಯೂರು :
ತಾಲ್ಲೂಕಿನ ಬಿದರಕೆರೆ ಮರಳುಬ್ಲಾಕ್ ಒಂದರಲ್ಲಿ ಜಿಲ್ಲಾಧಿಕಾರಿಗಳ ನಿಯಮ ಉಲ್ಲಂಘಿಸಿ ಟೆಂಡರ್‍ದಾರರು ಮರಳು ಬಗೆದಿದ್ದು, ತಾಲ್ಲೂಕು ಆಡಳಿತ ಈ ಕೂಡಲೇ ಈ ಟೆಂಡರ್ ರದ್ದುಪಡಿಸಿ ಮರಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ತಾಲ್ಲೂಕು ರೈತಸಂಘದ ಅಧ್ಯಕ್ಷ ಕೆ.ಸಿ.ಹೊರಕೇರಪ್ಪನವರು ತಹಶೀಲ್ದಾರರಿಗೆ ಆಗ್ರಹಿಸಿದರು.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ತಹಶೀಲ್ದಾರ್‍ರವರಿಗೆ ರೈತಸಂಘದ ನೇತೃತ್ವದಲ್ಲಿ ಈ ಬಗ್ಗೆ ಮನವಿಪತ್ರ ಅರ್ಪಿಸಿ ಅವರು ಮಾತನಾಡಿದರು.
ಮರಳು ಗುತ್ತಿಗೆದಾರರು ಜಿಲ್ಲಾಧಿಕಾರಿಗಳ ನಿಯಮವನ್ನು ಗಾಳಿಗೆ ತೂರಿ ಒಂದುಮೀಟರ್ ಆಳದ ಬದಲಾಗಿ ಸುಮಾರು 4 ರಿಂದ 5ಮೀಟರ್ ಆಳಕ್ಕೆ ಮರಳು ಬಗೆದು ಸಾವಿರಾರು ಲೋಡ್ ಮರಳನ್ನು ಸ್ಟಾಕ್‍ಹ್ಯಾರ್ಡ್‍ಗೆ ಹಾಕಿದ್ದು, ಈ ಹಿಂದೆಯೂ ಸಹ ಸ್ಟಾಕ್‍ಹ್ಯಾಡ್‍ಗೆ ತುಂಬಿದ್ದ ಮರಳನ್ನು ಬೆಂಗಳೂರು ಹಾಗೂ ಇತರೆ ಕಡೆ ಸಾಗಿಸಿ ಮಾರಾಟ ಮಾಡಿ ಸರ್ಕಾರಕ್ಕೆ ಲಕ್ಷಾಂತರ ರೂ.ನಷ್ಟ ಉಂಟು ಮಾಡಿರುತ್ತಾರೆ ಎಂಬುದಾಗಿ ಅವರು ಆಪಾದಿಸಿದರು.
ಜಿಲ್ಲಾಧಿಕಾರಿಗಳ ಆದೇಶದಂತೆ ಸ್ಥಳದಲ್ಲಿ ವೇಬ್ರಿಡ್ಜ್ ಅಳವಡಿಸದೆ ಮಾರಾಟ ಮಾಡಿರುತ್ತಾರೆ. ಹಾಗೂ ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಮರಳು ಸಾಗಾಣೆಮಾಡಿ ಅಕ್ರಮವೆಸಗುತ್ತಿದ್ದಾರೆ. ರೈತರು ಎಷ್ಟೋಬಾರಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳಿನ ಲಾರಿಗಳನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿರುತ್ತಾರೆ. ಆದರೂ ಅವರಮೇಲೆ ಯಾವುದೇ ಕ್ರಮ ಜರುಗಿಸಿಲ್ಲ ಆದ್ದರಿಂದ ತಾಲ್ಲೂಕು ದಂಡಾಧಿಕಾರಿಗಳು ಮರಳು ಟೆಂಡರ್‍ದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಬಿದರಕೆರೆ ಬ್ಲಾಕ್ ಒಂದನ್ನು ರದ್ದುಪಡಿಸಿ ಸ್ಟಾಕ್‍ಹ್ಯಾಡ್‍ನಲ್ಲಿ ಶೇಖರಿಸಿರುವ ಮರಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂಬುದಾಗಿ ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ರಾಮದಾಸ್, ಎ.ಚಿಕ್ಕಣ್ಣ, ನರಸಿಂಗಪ್ಪ, ಟಿ.ಮಲ್ಲಿಕಾರ್ಜುನ ಮುಂತಾದವರು ಉಪಸ್ಥಿತರಿದ್ದರು.