ಸಂಕಷ್ಟ ಕಾಲದಲ್ಲಿ ಜನಸಾಮಾನ್ಯರ ಕೈ ಹಿಡಿಯುವಲ್ಲಿ ಸರ್ಕಾರ ವಿಫಲ

ಹುಳಿಯಾರು

        ಕೊರೊನಾ ಸಂಕಷ್ಟ ಕಾಲದಲ್ಲಿ ಜನಸಾಮಾನ್ಯರ ಕೈ ಹಿಡಿಯುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿಫಲವಾಗಿವೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಆರೋಪಿಸಿದ್ದಾರೆ.ಹುಳಿಯಾರಿನ ರಾಮಗೋಪಾಲ್ ಸರ್ಕಲ್‍ನಲ್ಲಿನ ರೈತ ಸಂಘದ ಕಚೇರಿಯಲ್ಲಿನ ಪತ್ರಿಕಾ ಗೋಷ್ಠಿಯಲ್ಲಿ ಅವರು, ಕೇಂದ್ರ ಸರ್ಕಾರವು 20 ಲಕ್ಷ ಕೋಟಿ ರೂ.ಗಳ ಬೃಹತ್ ಪ್ಯಾಕೇಜ್ ಘೋಷಿಸಿತ್ತಾದರೂ ಇದುವರೆವಿಗೂ ಒಬ್ಬರಿಗೂ ಒಂದು ರೂಪಾಯಿ ಸಹಾಯವಾಗಿಲ್ಲ.

      ರಾಜ್ಯ ಸರ್ಕಾರಗಳು ಚಾಲಕರಿಗೆ, ಅಗಸರಿಗೆ, ಕಾರ್ಮಿಕರಿಗೆ ಕೊರೊನಾ ಪ್ಯಾಕೇಜ್ ಘೋಷಿಸಿದವಾದರೂ ಸಿಕ್ಕವರಿಗೆ ಸೀರುಂಡೆ ಎನ್ನುವಂತಾಗಿದೆ. ಪರಿಣಾಮ ಜನಸಾಮಾನ್ಯರು ಜೀವನ ನಡೆಸಲಾಗದಂತಹ ಹೀನಾಯ ಸ್ಥಿತಿಗೆ ಬಂದು ತಲುಪಿದ್ದಾರೆ ಎಂದು ಅವರು ದೂರಿದ್ದಾರೆ.

       ವಿಧವಾ ವೇತನ, ಅಂಗವಿಕಲ ವೇತನ, ವೃದ್ಧಾಪ್ಯ ವೇತನಗಳನ್ನು ಆರೇಳು ತಿಂಗಳಿಂದ ಸಹ ಬಿಡುಗಡೆ ಮಾಡಿಲ್ಲ. ಪರಿಣಾಮ ಕಚೇರಿಗಳಿಗೆ ಫಲಾನುಭವಿಗಳು ಅಲೆಯುವ, ಸಾಲಸೋಲ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಆಶಾ ಕಾರ್ಯಕರ್ತೆಯರು, ಅತಿಥಿ ಉಪನ್ಯಾಸಕರು, ಅಂಗನವಾಡಿ ಕಾರ್ಯಕರ್ತೆಯರು, ಗುತ್ತಿಗೆ ಆಧಾರದ ಆರೋಗ್ಯ ಸಿಬ್ಬಂದಿಗೂ ಸಹ ಸಂಬಳ ಪಾವತಿಸಿಲ್ಲ. ಪರಿಣಾಮ ದೇಶಾದ್ಯಂತ ಪ್ರತಿಭಟನೆ ಆರಂಭವಾಗಿದೆ. ಕೆಲವೆಡೆ ಆತ್ಮಹತ್ಯೆ ಘಟನೆಗಳು ನಡೆದಿವೆ. ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

      ಮನೆ ಮತ್ತು ಅಂಗಡಿ ಬಾಡಿಗೆ ಹಾಗೂ ಸಾಲ ವಸೂಲಿ ಮಾಡದಂತೆಯೂ ಸರ್ಕಾರ ನಿರ್ದೇಶಿಸಿತ್ತು. ಆದರೆ ಬಲವಂತದಿಂದ ಬಾಡಿಗೆಗಳನ್ನು ವಸೂಲಿ ಮಾಡುತ್ತಿದ್ದಾರೆ. ಇನ್ನು ಮೈಕ್ರೋ ಫೈನಾನ್ಸ್‍ಗಳು ಮನೆ ಬಾಗಿಲಿಗೆ ಹೋಗಿ ಸಾಲ ಕಟ್ಟುವಂತೆ ಪೀಡಿಸುತ್ತಿದ್ದಾರೆ. ಕೂಲಿ ಸಿಗದೆ ಸಂಕಷ್ಟದಲ್ಲಿರುವ ಜನರು ಸಾಲ ತೀರಿಸಲು ಮತ್ತೆ ಸಾಲ ಮಾಡುತ್ತಿದ್ದಾರೆ. ಮನೆಯಲ್ಲಿರುವ ಒಡವೆ, ಪಾತ್ರೆಗಳನ್ನು ಮಾರುತ್ತಿದ್ದಾರೆ. ಹಾಗಾಗಿ ಸರ್ಕಾರ ಸಂಕಷ್ಟ ಕಾಲದಲ್ಲಿ ಜನಸಾಮಾನ್ಯರ ನೆರವಿಗೆ ಧಾವಿಸದೆ ಕಡೆಗಣಿಸಿದರೆ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

     ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಗೌರವ ಅಧ್ಯಕ್ಷ ಕರಿಯಪ್ಪ, ನೀರಾ ಈರಣ್ಣ, ಕೆಂಕೆರೆ ಪೆದ್ದಾಬೋವಿ, ರಮೇಶ್, ನಾಗರಾಜು, ರಜನೀಶ್, ಪ್ರಕಾಶ್, ಟೈಲರ್ ಮೆಹಬೂಬ್, ಗಂಗಪ್ಪ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link