ಚಿತ್ರದುರ್ಗ:
ಸಾಹಿತ್ಯ, ಕಲೆ, ಸಂಸ್ಕೃತಿಗೆ ಅವಿನಾಭಾವ ಸಂಬಂಧವಿರುವುದರಿಂದ ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ಸಾಹಿತಿ ಬಸವರಾಜ್ ಟಿ. ಬೆಳಗಟ್ಟ ಹೇಳಿದರು.
ಶ್ರೀಸಾಹಿತ್ಯ ಸಾಮ್ರಾಜ್ಯ ನಾಟ್ಯ ಸಂಘ ಹಾಗೂ ಹಂಸಗಾನ ಕಲಾ ಸಂಘ ಇವರುಗಳ ಸಹಯೋಗದೊಂದಿಗೆ ಸ್ಟೇಡಿಯಂ ರಸ್ತೆಯಲ್ಲಿರುವ ಮಾತೃಶ್ರೀ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಭಾನುವಾರ ನಡೆದ ಸಾಹಿತ್ಯ ಮತ್ತು ಕಲಾ ಸಂಗಮ ಜಿಲ್ಲಾ ಮಟ್ಟದ ಕವಿಗೋಷ್ಟಿ ಉದ್ಘಾಟಿಸಿ ಮಾತನಾಡಿದರು.
ಪ್ರಾಚೀನ ಕಾಲದಿಂದ ಇಂದಿನವರೆಗೂ ಸಾಹಿತ್ಯ ತನ್ನದೆ ಆದ ಮಹತ್ವ ಪಡೆದುಕೊಂಡಿದೆ. ಕಲಾವಿದರು ಸಾಹಿತಿಗಳ ಬದುಕು ಕಷ್ಟದಲ್ಲಿದೆ. ಭೋಜರಾಜನ ಕಾಲದಲ್ಲಿ ಕಾಳಿದಾಸನಿಗೆ ಪ್ರಾಮುಖ್ಯತೆ ಕೊಟ್ಟು ಸಾಹಿತ್ಯವನ್ನು ಬೆಳೆಸಲಾಗುತ್ತಿತ್ತು. ಈಗ ಸಾಹಿತ್ಯ ಕಲೆಗೆ ಒತ್ತು ಕೊಡುವವರು ಇಲ್ಲದಂತಾಗಿದ್ದಾರೆ. ಸಾಕಷ್ಟು ವೇದಿಕೆಗಳನ್ನು ನಿರ್ಮಿಸಿಕೊಂಡು ಕೃತಿಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ.
ವಿಪರ್ಯಾಸವೆಂದರೆ ಕೃತಿಗಳನ್ನು ಓದುವವರೆ ಇಲ್ಲದಂತಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಮನಸ್ಸಿಗೆ ಆನಂದ, ಜ್ಞಾನ, ತಿಳುವಳಿಕೆ ಸಾಹಿತ್ಯದ ಓದಿನಿಂದ ದೊರಕುತ್ತದೆ. ಸಾಹಿತ್ಯ, ಕಲೆ, ಸಂಸ್ಕೃತಿ ಸಮಾಗಮವಾಗಬೇಕು. ಆಕ್ರೋಶ, ಉದ್ವೇಗ ಬೇಡವಾಗಿದೆ. ಸಾಹಿತ್ಯ, ಕಲೆ, ಸಂಸ್ಕೃತಿಗೆ ಆದ್ಯತೆ ನೀಡಬೇಕು. ಮುಂದಿನ ದಿನಗಳಲ್ಲಿ ಸಾಹಿತ್ಯ ಕಲೆಯಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸುವ ಚಿಂತನೆಯಿದೆ. ಸಾಹಿತ್ಯ, ಭಾಷೆಗಾಗಿ ಜೀವನ ತ್ಯಾಗ ಮಾಡಿದವರನ್ನು ಗುರುತಿಸಬೇಕಿದೆ. ಭ್ರಷ್ಟಾಚಾರ, ಅಧರ್ಮವನ್ನು ನೇರವಾಗಿ ಬರೆಯುವ ಸಾಹಿತಿಗಳು ಇಂದಿನ ಸಮಾಜಕ್ಕೆ ಬೇಕಿದೆ ಎಂದು ತಿಳಿಸಿದರು.
ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ಲೇಖಕ ಆನಂದಕುಮಾರ್ ಮಾತನಾಡುತ್ತ ಸಾಹಿತ್ಯ ಪ್ರಕಾರಗಳಲ್ಲಿ ಕವಿತ್ವಕ್ಕೆ ಸಾರ್ವಭೌಮತ್ವವಿದೆ. ಕವಿಯು ವರ್ತಮಾನ, ಭವಿಷ್ಯ ಪ್ರಾಚೀನವನ್ನು ತಿದ್ದುವ ಕಲೆಗಾರ. ಕವಿತ್ವಕ್ಕೆ ರಾಗ, ಗಾಯನ, ನಟನೆಯ ಅಭಿವ್ಯಕ್ತಿತ್ವ ಸಿಕ್ಕರೆ ಅದೊಂದು ಹಿಮಾಲಯದೆತ್ತರ ಹೂರಣ ಎಂದರು.
ಜಗತ್ತಿಗೆ ಧ್ವನಿಯಾಗಬೇಕಾದ ಕವಿ ಕೇವಲ ತಣ್ಣನೆ ಬರಹಗಳಲ್ಲಿ ಕುಳಿತುಕೊಳ್ಳದೆ ರಾಗ, ಆಲಾಪನೆಗಳಲ್ಲಿ ಸಮ್ಮಿಳಿತಗೊಳ್ಳದೆ ಸಮಾಜವನ್ನು ವಿಮರ್ಶಿತ ವ್ಯಾಖ್ಯಾನ ಮಾಡಬೇಕಿದೆ ಎಂದು ಹೇಳಿದರು.
ಉಪನ್ಯಾಸಕ ಶಿವಮೊಗ್ಗದ ರವಿಮಾಳೇನಹಳ್ಳಿ, ಪಂಡರಹಳ್ಳಿ ಶಿವರುದ್ರಪ್ಪ ಮಾತನಾಡಿದರು.ವೇದಾ ಪಿ.ಯು.ಕಾಲೇಜು ಪ್ರಾಂಶುಪಾಲರಾದ ಗೀತ ಹರಿಯಬ್ಬೆ, ಸಾಹಿತಿ ನಿರ್ಮಲ ಮಂಜುನಾಥ, ಹಿರಿಯ ಕವಿ ತಿಪ್ಪೀರನಾಯಕ, ಸಾಹಿತ್ಯ ಸಾಮ್ರಾಜ್ಯ ನಾಟ್ಯ ಸಂಘದ ಅಧ್ಯಕ್ಷೆ ನಳಿನಾ, ಪಿಲ್ಲಳ್ಳಿ ಚಿತ್ರಲಿಂಗಪ್ಪ ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
