ದಾವಣಗೆರೆ :
ಓರ್ವ ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಬಾಲಕ ಸೇರಿ ನಾಲ್ವರು ಸರಗಳ್ಳರನ್ನು ಬಂಧಿಸಿರುವ ವಿದ್ಯಾ ನಗರ ಠಾಣೆ ಪೊಲೀಸರು, ನಾಲ್ಕು ಸರಗಳ್ಳ ಹಾಗೂ 2 ಬೈಕ್ ಕಳವು ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತರನ್ನು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಸಿದ್ದಪುರ ಗ್ರಾಮದ ವೀರಯ್ಯ ಯಲ್ಬುರ್ಗಿ ಮಠ, ಈಚಲಯಲ್ಲಾಪುರ ಗ್ರಾಮದ ಗಣೇಶ್ ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲೂಕಿನ ಹುಲ್ಲೂರು ಗ್ರಾಮದ ನಿವಾಸಿ ಸೈಯದ್ ಅಲಿ ಹಾಗೂ ಓರ್ವ ಕಾನೂನು ಸಂಘರ್ಷಕ್ಕೆ ಒಳಗಾಗಿರುವ ವ್ಯಕ್ತಿ ಬಂಧಿತರಾಗಿದ್ದು, ಬಂಧಿತರಿಂದ 1,75,800 ರೂ. ಮೌಲ್ಯದ 58.6 ಗ್ರಾಂ ಬಂಗಾರದ ಸರ, ಒಂದು ಉಮಾಗೋಲ್ಡ್ ಸರ, 45 ಸಾವಿರ ರೂ. ಮೌಲ್ಯದ ಹೋಂಡಾ ಡಿಯೋ ಸ್ಕೂಟರ್, 2 ಲಕ್ಷ ರೂ. ಮೌಲ್ಯದ 2 ಪಲ್ಸರ್ ಬೈಕ್ ಸೇರಿದಂತೆ ಒಟ್ಟು 4.20 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಒಂಟಿ ಮಹಿಳೆಯರ ಸರಗಳ್ಳತನ ಪ್ರಕರಣಗಳು ಹೆಚ್ಚಾಗಿದ್ದರ ಹಿನ್ನೆಲೆಯಲ್ಲಿ ಆರೋಪಿಗಳ ಮತ್ತು ಸ್ವತ್ತು ಪತ್ತೆಗಾಗಿ ಸಿಪಿಐ ಆನಂದ್ ಇ ಹಾಗೂ ವಿದ್ಯಾನಗರ ಠಾಣೆ ಪಿಎಸ್‍ಐ ಪ್ರಸಾದ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿ, ವಿದ್ಯಾನಗರ ಠಾಣೆ ವ್ಯಾಪ್ತಿಯ 2 ಸರಗಳ್ಳತನ ಹಾಗೂ ಒಂದು ಬೈಕ್ ಕಳ್ಳತನ ಪ್ರಕರಣ ಹಾವೇರಿ ಜಿಲ್ಲೆ ರಾಣೆಬೆನ್ನೂರು ಗ್ರಾಮಾಂತರ ಠಾಣೆಯಲ್ಲಿ 1 ಸರಗಳ್ಳತನ ಪ್ರಕರಣ ಹಾಗೂ ಲಕ್ಷ್ಮೀಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಒಂದು ಸರಗಳ್ಳತನ ಪ್ರಕರಣ ಹಾಗೂ ಒಂದು ಬೈಕ್ ಕಳ್ಳತನ ಪ್ರಕರಣ ಭೇದಿಸಿದ್ದಾರೆ.
ಆರೋಪಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳಾದ ಚನ್ನಬಸವ ಹಾಗೂ ರಘುನಾಥ್ ಅವರಿಗೆ ವೈಯಕ್ತಿಕ ಬಹುಮಾನ ಹಾಗೂ ತಂಡಕ್ಕೂ ಬಹುಮಾನ ನೀಡಲಾಗುವುದು ಎಂದು ಹೇಳಿದರು.ಈ ತಿಂಗಳಲ್ಲಿ ಜಿಲ್ಲೆಯಲ್ಲಿ ಒಟ್ಟು ಐದು ಸರಗಳ್ಳತನ ಪ್ರಕರಣಗಳು ನಡೆದಿದ್ದು, ಈಗಾಗಲೇ 2 ಪ್ರಕರಣಗಳ ಆರೋಪಿಗಳನ್ನು ಬಂಧಿಸಿದ್ದು, ಇನ್ನೂ ಮೂರು ಪ್ರಕರಣಗಳ ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದರು.ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಆನಂದ್.ಇ ಮತ್ತಿತರರು ಹಾಜರಿದ್ದರು.