ಸರ್ಕಾರ ಅಸ್ಥಿರಕ್ಕೆ ಬಿಜೆಪಿ ಯತ್ನ: ಕಾಂಗ್ರೆಸ್ ಪ್ರತಿಭಟನೆ..!

ದಾವಣಗೆರೆ:

    ಕಾಂಗ್ರೆಸ್-ಜೆಡಿಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿ, ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ನಾಯಕರು ಮೈತ್ರಿ ಪಕ್ಷದ ಶಾಸಕರ ಕುದುರೆ ವ್ಯಾಪಾರ ನಡೆಸುತ್ತಿದ್ದಾರೆಂದು ಆರೋಪಿಸಿ, ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

     ಇಲ್ಲಿನ ಜಯದೇವ ವೃತ್ತದಲ್ಲಿ ಸೂಟಕೇಸ್ ಹಿಡಿದು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಯಡಿಯೂರಪ್ಪರ ಭಾವಚಿತ್ರಗಳಿದ್ದ ಪೋಸ್ಟರ್ ಹರಿದು, ಮೈತ್ರಿ ಸರ್ಕಾರದ ಪತನಕ್ಕೆ ಹವಣಿಸುತ್ತಿರುವ ಬಿಜೆಪಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನಗಳಿಂದಲೂ, ಬಿಜೆಪಿಗರು ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ವರೆಗೂ ಐದು ಬಾರಿ ಶಾಸಕರಿಗೆ ಹಣದ ಆಮೀಷ ತೋರಿಸಿ ಆಪರೇಷನ್ ಕಮಲ ನಡೆಸಲು ಹೋಗಿ ವಿಫಲರಾಗಿರುವ ಬಿಜೆಪಿ ನಾಯಕರು, ಈಗ ಆರನೇ ಬಾರಿಗೂ ಎರಡೂ ಪಕ್ಷಗಳ ಶಾಸಕರ ಕುದುರೆ ವ್ಯಾಪಾರ ನಡೆಸಲು ಮುಂದಾಗಿರುವುದು, ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ರಾಜ್ಯದಲ್ಲಿ ಕೋಮುವಾದಿ ಬಿಜೆಪಿ ಪಕ್ಷಕ್ಕೆ ಅಧಿಕಾರ ನೀಡಬಾರದೆಂಬ ಕಾರಣಕ್ಕೆ ರಾಜ್ಯದ ಜನತೆ ಸಮ್ಮಿಶ್ರ ಸರ್ಕಾರಕ್ಕೆ ಆಶೀರ್ವಾದ ಮಾಡಿದ್ದಾರೆ. ಆದರೆ, ಕೇಂದ್ರ ಸರ್ಕಾರದಲ್ಲಿ ಅಧಿಕಾರ ಹೊಂದಿರುವ ಬಿಜೆಪಿಯು ಇಡಿ, ಐಟಿ, ಸಿಬಿಐ ಸೇರಿದಂತೆ ಇತರೆ ಸ್ವಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಶಾಸಕರಿಗೆ ದಾಳಿಯ ಗುಮ್ಮ ತೋರಿಸಿ ಬೆದರಿಸಿ ಹಾಗೂ ತಲಾ ಒಬ್ಬೊಬ್ಬ ಶಾಸಕರಿಗೆ 25ರಿಂದ 30 ಕೋಟಿ ರೂ. ಆಮೀಷ ತೋರಿಸಿ ಕುದುರೆ ವ್ಯಾಪಾರ ನಡೆಸುತ್ತಿದ್ದಾರೆಂದು ಆರೋಪಿಸಿದರು.

       ಹಿಂದೆ ನಾಡಿನ ಜನತೆ ಐದು ವರ್ಷಗಳ ಕಾಲ ಸಂಪೂರ್ಣವಾಗಿ ಬಿಜೆಪಿಗೆ ಅಧಿಕಾರ ನೀಡಿದ ಸಂದರ್ಭದಲ್ಲಿ ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಮಾತಿನಂತೆ ಬಿಜೆಪಿಯ ಶಾಸಕರು, ಸಚಿವರು ಆಂತರಿಕ ಕಚ್ಚಾಟ ನಡೆಸಿ, ಮೂವರು ಮುಖ್ಯಮಂತ್ರಿಗಳನ್ನು ಬದಲಿಸಿ, ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿ, ಜೈಲಿ ಪಾಲಾಗಿದ್ದನ್ನು ರಾಜ್ಯದ ಜನತೆ ಮರೆತಿಲ್ಲ. 75 ವರ್ಷ ಪೂರೈಸಿರುವ ಬಿ.ಎಸ್.ಯಡಿಯೂರಪ್ಪ ಮುಂದೆ ವಯಸ್ಸಿನ ಕಾರಣ ನೀಡಿ ತಮಗೆ ಬಿಜೆಪಿ ವರಿಷ್ಠರು ಅಧಿಕಾರ ತಪ್ಪಿಸಬಹುದೆಂಬ ಕಾರಣಕ್ಕೆ ವಾಮಮಾರ್ಗದ ಮೂಲಕ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದು, ಇದು ಯಾವುದೇ ಕಾರಣಕ್ಕೂ ಫಲಿಸುವುದಿಲ್ಲ ಎಂದರು.

      ಕಾಂಗ್ರೆಸ್ ಪಕ್ಷದ ಚಿಹ್ನೆಯ ಅಡಿಯಲ್ಲಿ ಗೆದ್ದಿರುವ ಶಾಸಕರು, ಪಕ್ಷದಲ್ಲಿ ಅಧಿಕಾರ ಅನುಭವಿಸಿ ಕಷ್ಟಕಾಲದಲ್ಲಿ ಪಕ್ಷ ತೊರೆದು, ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡಬಾರದು. ಯಾರೂ ಸಹ ಬಿಜೆಪಿಯ ಅಧಿಕಾರದ ಲಾಲಾಸೆಗೆ ಬಲಿಯಾಗಬಾರದು. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಮೈತ್ರಿ ಶಾಸಕರು ವಾಪಾಸ್ ಬಂದು, ನಮ್ಮ ವರಿಷ್ಠರೊಂದಿಗೆ ಚರ್ಚೆ ಮಾಡಿ, ಬೇಡಿಕೆಗಳನ್ನು ಈಡೇರಿಸಿಕೊಂಡು ಸಂಕಷ್ಟದಲ್ಲಿರುವ ಪಕ್ಷವನ್ನು ಬಲಿಷ್ಠಗೊಳಿಸಬೇಕೆಂದು ಆಗ್ರಹಿಸಿದರು.

     ಬಿಜೆಪಿಯವರು ಗೌರವಯುತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು, ಕೆಲಸ ಮಾಡಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕು. ಇದನ್ನು ಬಿಟ್ಟು ಮೈತ್ರಿ ಸರ್ಕಾರವನ್ನು ಅಭದ್ರಗೊಳಿಸುವ ಕೆಲಸಕ್ಕೆ ಕೈ ಹಾಕಿದರೆ, ಬಿಜೆಪಿ ನಾಯಕರುಗಳ ನಿವಾಸಗಳ ಎದುರು ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

     ಪ್ರತಿಭಟನೆಯಲ್ಲಿ ಕೆಎಸ್‍ಐಸಿ ಮಾಜಿ ಅಧ್ಯಕ್ಷ ಡಿ.ಬಸವರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ನಗರಸಭಾ ಮಾಜಿ ಅಧ್ಯಕ್ಷ ಬಿ.ವೀರಣ್ಣ, ಪಾಲಿಕೆ ಮಾಜಿ ಸದಸ್ಯರಾದ ಮಂಜಮ್ಮ, ಗುರುರಾಜ್, ಲಿಂಗರಾಜ್, ಕೆ.ಚಮನ್ ಸಾಬ್, ಕೋಳಿ ಇಬ್ರಾಹಿಂ ಸಾಬ್, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಚ್.ಓಬಳಪ್ಪ, ಮುಖಂಡರಾದ ಕೆ.ಜಿ.ಶಿವಕುಮಾರ, ಮಾಲತೇಶ ರಾವ್ ಡಿ. ಜಾಧವ್, ಮುಜಾಹಿದ್ದೀನ್, ಎಲ್.ಎಚ್.ಸಾಗರ್, ಮಲ್ಲಿಕಾರ್ಜುನ್ ಇಂಗಳೇಶ್ವರ, ಶ್ರೀಕಾಂತ್ ಬಗಾರೆ, ಮೈನುದ್ದೀನ್, ಮಂಜುನಾಥ್ ಅಣ್ವೇಕರ್, ಕೆ.ಆರ್.ಗಂಗರಾಜ್ ಮತ್ತಿತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap