ಚಿತ್ರದುರ್ಗ:
ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳಾಗಿದೆ. ಇನ್ನು ಈಗ ಬಾಲ ಕಾರ್ಮಿಕ ಪದ್ದತಿ ವಿರೋಧಿ ಕುರಿತು ಚರ್ಚೆಯಾಗುತ್ತಿರುವುದು ದುಃಖಕರ ಸಂಗತಿ ಎಂದು ಶಿಕ್ಷಣ ತಜ್ಞರು ಮತ್ತು ಮಕ್ಕಳ ಹಕ್ಕುಗಳ ಹೋರಾಟಗಾರ ಡಾ.ನಿರಂಜನ್ ಆರಾಧ್ಯ ಆತಂಕ ವ್ಯಕ್ತಪಡಿಸಿದರು.
ಮಕ್ಕಳ ಹಕ್ಕುಗಳ ಶಿಕ್ಷಣ ಮತ್ತು ವಕಾಲತ್ತು ಬೆಂಗಳೂರು, ವಿಮುಕ್ತಿ ವಿದ್ಯಾಸಂಸ್ಥೆ ಚಿತ್ರದುರ್ಗ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ಸಹಾಯವಾಣಿ ಮತ್ತು ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬಾಲ ಕಾರ್ಮಿಕ ಮುಕ್ತ ಕರ್ನಾಟಕ ಕುರಿತು ಪತ್ರಕರ್ತರ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ವಿಚಾರ ಗೋಷ್ಟಿ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದ ಪರಿಚ್ಚೇದದ ಕುರಿತು ಚರ್ಚೆ ನಡೆಯುತ್ತಿದೆ. ಹದಿನಾಲ್ಕು ವರ್ಷದೊಳಗಿನ ಯಾವ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯಬಾರದು. ಬಾಲ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡಬೇಕಾದರೆ ಸಂವಿಧಾನದಡಿ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಶಿಕ್ಷಣ ಸಿಗಬೇಕು ಎಂದು ಹೇಳಿದರು.
ಬಾಲ ಕಾರ್ಮಿಕ ನಿಷೇಧಕ್ಕೆ ಹೋರಾಟ ಮಾಡುತ್ತಿರುವುದರಿಂದ ಆಳುವ ಸರ್ಕಾರಗಳು ತಲೆ ತಗ್ಗಿಸಬೇಕು. ಎಲ್ಲಾ ಮಕ್ಕಳು ಸಮಾನವಾಗಿ ನೆರೆಹೊರೆಯ ಶಾಲೆಯಲ್ಲಿ ಶಿಕ್ಷಣ ಪಡೆದುಕೊಳ್ಳಲು ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಕಾಯ್ದೆ ಅನುಷ್ಟಾನಕ್ಕೆ ಸರ್ಕಾರಗಳು ಮನಸ್ಸು ಮಾಡುತ್ತಿಲ್ಲ. ರಾಷ್ಟ್ರೀಯ ಉತ್ಪನ್ನದಲ್ಲಿ ಶೇ.45 ರಷ್ಟು ಹಣವನ್ನು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಬೇಕು. ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣಕ್ಕೆ ನಿರಂತರವಾಗಿ ಜನಾಂದೋಲನ ನಡೆಯುತ್ತಿದೆ. ಆದರೂ ನಿರೀಕ್ಷೆಗಳನ್ನು ತಲುಪಲು ಇಂದಿಗೂ ಸಾಧ್ಯವಾಗುತ್ತಿಲ್ಲ. ದೇಶದ ಜನಸಂಖ್ಯೆಯಲ್ಲಿ ಶೇ.40 ರಷ್ಟು ಮಕ್ಕಳಿದ್ದಾರೆ. ಆದ್ದರಿಂದ ಬಾಲ ಕಾರ್ಮಿಕ ಪದ್ದತಿ ಕಡ್ಡಾಯವಾಗಿ ನಿರ್ಮೂಲನೆಯಾಗಬೇಕೆಂದು ಒತ್ತಾಯಿಸಿದರು.
ಸಿ.ಆರ್.ಇ.ಎ.ಒಕ್ಕೂಟ ರಾಜ್ಯ ಸಂಚಾಲಕ ಬೆಂಗಳೂರಿನ ನಾಜರ್ ಮಾತನಾಡಿ ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಐದು ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣಕ್ಕಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತಂದು ಕಡ್ಡಾಯವಾಗಿ ಶಿಕ್ಷಣ ಕೊಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಕರ್ನಾಟಕವನ್ನು ಬಾಲ ಕಾರ್ಮಿಕ ಮುಕ್ತ ರಾಜ್ಯವನ್ನಾಗಿ ಮಾಡುವುದು ನಮ್ಮ ಕನಸು ಇದಕ್ಕೆ ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು.ಪತ್ರಕರ್ತ ನರೇನಹಳ್ಳಿ ಅರುಣ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಸಿ.ಎಲ್.ಎಫ್.ಝಡ್ ನವದೆಹಲಿಯ ರಾಷ್ಟ್ರೀಯ ಪ್ರತಿನಿಧಿ ಜೋಸೆಫ್ ಥಾಮಸ್, ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್, ಚಿತ್ರಡಾನ್‍ಬೋಸ್ಕೋ ಫಾದರ್ ಸೋನಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೈಶಾಲಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಪ್ರಭಾಕರ್, ಮಕ್ಕಳ ಸಹಾಯವಾಣಿ ಸಂಯೋಜಕ ಶಂಕರಪ್ಪ, ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶೇಷಣ್ಣ, ಬಾಲಕ ಸದಾಶಿವ ವೇದಿಕೆಯಲ್ಲಿದ್ದರು.ವಿಮುಕ್ತಿ ವಿದ್ಯಾಸಂಸ್ಥೆ ಅಧ್ಯಕ್ಷೆ ಅನ್ನಪೂರ್ಣ ಸ್ವಾಗತಿಸಿದರು. ನಿರ್ದೇಶಕ ಆರ್.ವಿಶ್ವಸಾಗರ್ ನಿರೂಪಿಸಿದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
