ಸರ್ಕಾರ ಉಗ್ರವಾದ ತಡೆದು ಮಾನವ ಹಕ್ಕು ರಕ್ಷಿಸಲಿ

ದಾವಣಗೆರೆ:

      ಉಗ್ರವಾದವನ್ನು ತಡೆದು, ಮಾನವ ಹಕ್ಕುಗಳನ್ನು ರಕ್ಷಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ ಎಂದು ಸುಪ್ರೀಂ ಕೋರ್ಟ್‍ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ರಾಜೇಂದ್ರಬಾಬು ಅಭಿಪ್ರಾಯಪಟ್ಟರು.

     ನಗರದ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಮಂಗಳವಾರ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಏರ್ಪಡಿಸಿದ್ದ ‘ದಶಮಾನೋತ್ಸವ ಉಪನ್ಯಾಸ ಮಾಲಿಕೆ’ ಕಾರ್ಯಕ್ರಮದಲ್ಲಿ ‘ಭಯೋತ್ಪಾದಕತೆ ಮಾನವ ಹಕ್ಕುಗಳಿಗೆ ಮಾರಕ’ ವಿಷಯ ಕುರಿತು ಅವರು ಮಾತನಾಡಿದರು.

    ಉಗ್ರವಾದದಿಂದ ಮಾನವ ಹಕ್ಕುಗಳ ಮೇಲೆ ಕ್ರೂರ ಹಾಗೂ ನೇರ ಪರಿಣಾಮ ಬೀರುತ್ತದೆ. ಅಲ್ಲದೇ, ದೇಶದ ಆರ್ಥಿಕ ವ್ಯವಸ್ಥೆ, ನಾಗರಿಕ ಸಮಾಜ ಹಾಗೂ ಅಭಿವೃದ್ಧಿಗೆ ಬೆದರಿಕೆ ಎದುರಾಗುತ್ತದೆ. ಆದ್ದರಿಂದ ಉಗ್ರವಾದವನ್ನು ತಡೆದು, ಮಾನವ ಹಕ್ಕುಗಳನ್ನು ರಕ್ಷಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ ಎಂದು ಹೇಳಿದರು.

     ಉಗ್ರವಾದ ನಿವಾರಿಸಲು ಕಾನೂನು ಆಡಳಿತ ಸಮರ್ಪಕವಾಗಿರಬೇಕು. ಸಂಕುಚಿತ ರಾಜಕೀಯ ಅಜೆಂಡಾದಿಂದ ಹೊರ ಬಂದು, ಆರ್ಥಿಕ ಅಭಿವೃದ್ಧಿಯಾಗಿ ಅಸಮಾನತೆ ಮಾಡಲು ಅಭಿವೃದ್ಧಿಗೆ ಉತ್ತೇಜನ ನೀಡಬೇಕು. ಪ್ರಜಾಪ್ರಭುತ್ವ ಬಲಗೊಳಿಸಬೇಕು. ಕಾನೂನು ವ್ಯವಸ್ಥೆ ಬಲಪಡಿಸಬೇಕೆಂದು ಸಲಹೆ ನೀಡಿದರು.

     ಉಗ್ರವಾದ ಇತ್ತೀಚಿನ ಬೆಳವಣಿಗೆಯೇನೂ ಅಲ್ಲ. 16ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ನಡೆದ ಗನ್ ಪೌಡರ್ ಸಂಚು ಅಧಿಕಾರದಲ್ಲಿ ಹಿಂಸಾತ್ಮಕ ಬದಲಾವಣೆ ತರುವ ಪ್ರಯತ್ನವಾಗಿತ್ತು. ಅದೂ ಸಹ ಉಗ್ರವಾದದ ಒಂದು ಮುಖವಾಗಿದೆ. ಉಗ್ರವಾದ ಬಳಸಿ ಅರಾಜಕತೆ, ಪ್ರಕ್ಷುಬ್ಧತೆ, ಅಪಾರ ಆಕ್ರೋಶ, ಸಂಘರ್ಷ ತರುವ ಮೂಲಕ ತಾವು ಬಯಸುವ ಬದಲಾವಣೆ ತರಲು ಉಗ್ರವಾದಿಗಳು ಯತ್ನಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಂತಹ ಸಂದರ್ಭದಲ್ಲಿ ಉಗ್ರವಾದ ಪೀಡಿತರು ಒಂದಾಗಿ ಹೋರಾಟ ನಡೆಸಬೇಕಾಗುತ್ತದೆ.

     ಉಗ್ರವಾದದ ಸಂತ್ರಸ್ತರಾಗುವ ಸಮುದಾಯಗಳು ಜೊತೆಯಾದಾಗ ಮಾತ್ರ ಉಗ್ರವಾದಕ್ಕೆ ಹಿನ್ನಡೆಯಾಗುತ್ತದೆ ಎಂದು ಪ್ರತಿಪಾದಿಸಿದರು.

     ವಾರದ ಹಿಂದಷ್ಟೇ ಶ್ರೀಲಂಕಾ, ನ್ಯೂಜಿಲ್ಯಾಂಡ್‍ನಲ್ಲಿ ನಡೆದ ಉಗ್ರವಾದಿ ದಾಳಿಗಳು ವಿಶ್ವದಾದ್ಯಂತ ಸುದ್ದಿ ಮಾಡಿದ್ದವು. ಉಗ್ರವಾದ ಶಾಂತಿಯನ್ನು ಹೇಗೆ ಕದಡುತ್ತದೆ ಎಂಬುದಕ್ಕೆ ಈ ಕೃತ್ಯಗಳು ಉದಾಹರಣೆಯಾಗಿದೆ. ಉಗ್ರವಾದದಿಂದ ಸಮಾಜ ಪ್ರಕ್ಷುಬ್ಧವಾಗುತ್ತದೆ, ಉದ್ವಿಗ್ನತೆ ಹೆಚ್ಚಾಗುತ್ತದೆ, ಕಾನೂನು ದುರ್ಬಲವಾಗುತ್ತದೆ. ಸಂವಿಧಾನ – ಕಾನೂನಾತ್ಮಕ ಆಡಳಿತಕ್ಕೆ ಹಿನ್ನಡೆಯಾಗುತ್ತದೆ. ಆದರೆ, ಸರ್ಕಾರಗಳು ಉಗ್ರವಾದದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿ ಮಾನವ ಹಕ್ಕುಗಳಿಗೆ ಧಕ್ಕೆ ತರಬಾರದು. ಉಗ್ರವಾದ ವಿರೋಧಿ ಹೋರಾಟ ಹಾಗೂ ಮಾನವ ಹಕ್ಕುಗಳನ್ನು ಕಾಯ್ದುಕೊಳ್ಳುವಲ್ಲಿ ಸಮತೋಲನ ಇರಬೇಕೆಂದು ಹೇಳಿದರು.

     ಉಗ್ರವಾದ ವಿರೋಧಿ ಹೋರಾಟದಲ್ಲಿ ಸರ್ಕಾರಗಳು ನಿಷ್ಕ್ರಿಯ ಆಗುವ ಇಲ್ಲವೇ ಅತಿರೇಕದ ಕ್ರಮ ತೆಗೆದುಕೊಳ್ಳುವುದರಿಂದ ದೂರ ಇರಬೇಕು. ಸರ್ಕಾರ ಉಗ್ರವಾದದ ವಿರುದ್ಧ ತೆಗೆದುಕೊಳ್ಳುವ ಕ್ರಮಗಳು ಸಮರ್ಥನೀಯವಾಗಿರಬೇಕೆಂದು ಸಲಹೆ ನೀಡಿದರು.
ಉಗ್ರವಾದದಲ್ಲಿ ತೊಡಗುವವರು ಅದನ್ನೇ ತಮ್ಮ ಸಂಸ್ಕೃತಿ, ಜೀವನ ಶೈಲಿಯನ್ನಾಗಿ ಮಾಡಿಕೊಂಡಿರುತ್ತಾರೆ. ಹಿಂಸಾತ್ಮಕವಾಗಿ ಜಗತ್ತನ್ನು ಬದಲಿಸುವ ಉದ್ದೇಶ ಹೊಂದಿರುತ್ತಾರೆ. ಆದರೆ, ಉಗ್ರವಾದದ ಇತಿಹಾಸವನ್ನು ಅವಲೋಕಿಸಿದಾಗ ಅದರ ವಿರುದ್ಧ ಪರಿಣಾಮ ಆಗಿರುವುದು ಸಹ ಕಂಡು ಬರುತ್ತದೆ. ಉಗ್ರವಾದಿಗಳು ಆತ್ಮಘಾತುಕರಾಗಿ ತಾವೇ ನಾಶವಾಗಿರುವುದು ಕಂಡು ಬರುತ್ತದೆ. ಉಗ್ರವಾದಿಗಳೇ ಉಗ್ರವಾದಕ್ಕೆ ಅಂತಿಮ ಬಲಿಪಶುಗಳಾಗುತ್ತಾರೆ ಎಂದರು.

      ಉಗ್ರವಾದದ ಸ್ವರೂಪ ಒಂದೇ ರೀತಿ ಇರುವುದಿಲ್ಲ. ಕೆಲ ಉಗ್ರವಾದಿ ಕೃತ್ಯಗಳು ವಿಶ್ವದಾದ್ಯಂತ ತಮ್ಮ ಕರಾಳ ಪ್ರಭಾವ ಬೀರುತ್ತವೆ. ಇದಕ್ಕೆ ಅಮೇರಿಕದ ಅವಳಿ ಗೋಪುರಗಳ ಮೇಲೆ ನಡೆದ ದಾಳಿಯೂ ಉದಾಹರಣೆಯಾಗಿದೆ. ಮತ್ತೊಂದೆಡೆ ಖಲಿಸ್ತಾನ, ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಪ್ರದೇಶದಲ್ಲಿ ನಡೆದ ಉಗ್ರವಾದಿ ಚಟುವಟಿಕೆಗಳು, ಮುಂಬೈ ಮೇಲೆ ನಡೆದ ಉಗ್ರವಾದಿ ದಾಳಿಗಳು ಜಾಗತಿಕವಾಗಿ ಪರಿಣಾಮ ಬೀರಲಿಲ್ಲ ಎಂದರು.

      ಉಗ್ರವಾದದಲ್ಲಿ ತೊಡಗುವವರು ಸರ್ಕಾರದ ಬೆಂಬಲ ಪಡೆದಿರಬಹುದು. ಅಥವಾ ಸರ್ಕಾರದ ನಿಯಂತ್ರಣಕ್ಕೆ ಹೊರತಾಗಿರಬಬಹುದು. ಅದಕ್ಕೆ ಕೆಲವೊಮ್ಮೆ ಮುಖ್ಯಸ್ಥರಿರುತ್ತಾರೆ, ಕೆಲವೊಮ್ಮೆ ಇರುವುದಿಲ್ಲ. ಮಾನಸಿಕ ಪರಿಣಾಮ ಬೀರಲು ಇಲ್ಲವೇ ರಾಜಕೀಯ ಉದ್ದೇಶ ಈಡೇರಿಸಿಕೊಳ್ಳಲೂ ಉಗ್ರವಾದ ಬಳಕೆಯಾಗುತ್ತದೆ. ಒಟ್ಟಾರೆ ಉಗ್ರವಾದ ಕೆಟ್ಟದ್ದಾದರೆ, ಸರ್ಕಾರದ ಬೆಂಬಲ ಪಡೆದ ಉಗ್ರವಾದ ಅತಿ ಕೆಟ್ಟದ್ದು ಎಂದು ವಿಶ್ಲೇಷಿಸಿದರು.

     ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ ಮಾತನಾಡಿ, ದೇವರು ಬಿಟ್ಟರೆ ಉಗ್ರವಾದ ಸರ್ವವ್ಯಾಪಿ ಎಂಬಂತಾಗಿದೆ. ಉಗ್ರವಾದ ಭೂಮಿಯ ಎಲ್ಲೆಡೆ ಹರಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.

    ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯದ ಉಪ ಕುಲಪತಿ  ಪಿ. ಈಶ್ವರಭಟ್ ಅಧ್ಯಕ್ಷತೆ ವಹಿಸಿದ್ದರು. ರೇಷ್ಮಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಆರ್.ಎಲ್. ಕಾನೂನು ಕಾಲೇಜಿನ ಪ್ರಾಂಶುಪಾಲ  ಬಿ.ಎಸ್. ರೆಡ್ಡಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಎಂ.ಸೋಮಶೇಖರಪ್ಪ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link