ಚಿತ್ರದುರ್ಗ:
ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳಿಂದಲೂ ಆಡಳಿತ ನಡೆಸುತ್ತಿರುವ ಎಲ್ಲಾ ಪಕ್ಷಗಳು ಕೊಳಗೇರಿಗಳಿಗೆ ಸಾಮಾಜಿಕ ತಾರತಮ್ಯವೆಸಗುತ್ತಿರುವುದನ್ನು ಹೋಗಲಾಗಡಿಸಲು ಯುವಜನರು ಸಂಘಟಿತರಾಗಬೇಕೆಂದು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಕೊಳಗೇರಿ ನಿವಾಸಿಗಳನ್ನು ಎಚ್ಚರಿಸಿದರು.
ಸ್ಲಂ ಜನಾಂದೋಲನ ಕರ್ನಾಟಕ ಚಿತ್ರದುರ್ಗ ಘಟಕದಿಂದ ಸ್ಲಂ ಯುವ ಜನರ ಸಂಘಟನೆ ಮತ್ತು ಸಾಮಾಜಿಕ ಹೋರಾಟ ಕುರಿತು ಸ್ಲಂ ನಿವಾಸಿಗಳೊಂದಿಗೆ ಪತ್ರಕರ್ತರ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.
ಟಾಟಾ ಬಿರ್ಲಾ, ಅಂಬಾನಿ, ದೊಡ್ಡ ಉದ್ಯಮಿಗಳು ಬಂಡವಾಳಶಾಹಿಗಳ ಬೆಂಗಾವಲಾಗಿ ಎಲ್ಲಾ ಸರ್ಕಾರಗಳು ನಿಂತಿರುವುದರಿಂದ ಕೊಳಚೆ ಪ್ರದೇಶಗಳಲ್ಲಿ ಇನ್ನು ಸಾಮಾಜಿಕ ತಾರತಮ್ಯ ಜೀವಂತವಾಗಿದೆ. ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಮನೆ, ನಿವೇಶನ, ಬೀದಿ ದೀಪ, ರಸ್ತೆ, ಚರಂಡಿ, ಶೌಚಾಲಯ ಇನ್ನು ಸ್ಲಂ ಪ್ರದೇಶಗಳಿಗೆ ಸರಿಯಾಗಿ ತಲುಪಿಲ್ಲ. ಬರಪೀಡಿತ ಪ್ರದೇಶ ಚಿತ್ರದುರ್ಗ ಜಿಲ್ಲೆಯಿಂದ ಕೆಲಸ ಹುಡುಕಿಕೊಂಡು ನಗರ ಪ್ರದೇಶಗಳಿಗೆ ಬರುವವರ ಸಂಖ್ಯೆ ಜಾಸ್ತಿಯಾಗಿರುವುದರಿಂದ ಕೊಳಗೇರಿಗಳು ಹೆಚ್ಚುತ್ತಿವೆ.
ದೇಶದ ಭೂಮಿ ಮತ್ತು ಸಂಪತ್ತು ಕೆಲವೇ ಜನರ ಕೈಯಲ್ಲಿರುವುದರಿಂದ ಉಳ್ಳವರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಬಡವರು ಬಡವರಾಗಿಯೇ ಕೊಳಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ಇಂತಹ ಸಾಮಾಜಿಕ ಅಸಮಾನತೆ ನಿವಾರಣೆಯಾಗಬೇಕಾದರೆ ಯುವಕರು ಸಂಘಟಿತರಾಗಿ ಹೋರಾಡಬೇಕು ಎಂದು ಹೇಳಿದರು.
ಕೊಳಗೇರಿಗಳಿಗೆ ಬಿ.ಪಿ.ಎಲ್.ಕಾರ್ಡ್, ಉಚಿತ ಅಕ್ಕಿ, ಆಯುಷ್ಮಾನ್ ಭಾರತ್ ಇಂತಹ ಯಾವುದೇ ಯೋಜನೆಗಳು ಬೇಡ. ಅದಕ್ಕೆ ಬದಲಾಗಿ ಒಂದು ಕುಟುಂಬಕ್ಕೆ ಐದು ಎಕರೆ ಜಮೀನು ಮನೆಗೊಂದು ಉದ್ಯೋಗ ಕೊಡಿ ಎಂದು ಆಳುವ ಸರ್ಕಾರವನ್ನು ಕೇಳುವ ಪ್ರಜ್ಞೆ ಕೊಳಗೇರಿಗಳಲ್ಲಿ ಮೂಡಬೇಕಿದೆ. ಹಕ್ಕು ಕೇಳುವ ನಾಯಕತ್ವವನ್ನು ಯುವಜನರು ವಹಿಸಬೇಕಾಗಿದೆ. ಧರ್ಮ ಮತ್ತು ದೇಶಭಕ್ತಿಯ ಹೆಸರಿನಲ್ಲಿ ಕೋಮುವಾದಿಗಳು ಯುವಕರನ್ನು ತಮ್ಮತ್ತ ಸೆಳೆಯುವ ತಂತ್ರಗಾರಿಕೆ ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕೆ ಕೊಳಚೆಪ್ರದೇಶದ ನಿವಾಸಿಗಳು ಬಲಿಯಾಗಬಾರದು ಎಂದು ಜಾಗೃತಿಗೊಳಿಸಿದರು.
ದೇಶದಲ್ಲಿ ಯಾವುದೇ ಅಭಿವೃದ್ದಿಯಾಗುತ್ತಿಲ್ಲ. ರಾಜಕಾರಣಿಗಳು ಆಶ್ವಾಸನೆಗಳನ್ನು ಮಾತ್ರ ನೀಡುತ್ತಿದ್ದಾರೆ. ದೊಡ್ಡ ದೊಡ್ಡ ನಗರದ ಬಡಾವಣೆಗಳಲ್ಲಿ ನೀಡುವ ನಿವೇಶನಗಳ ಅಳತೆ ಹಾಗೂ ಕೊಳಗೇರಿಗಳಿಗೆ ನೀಡುವ ನಿವೇಶನಗಳ ಅಳತೆಯಲ್ಲಿ ಭಾರಿ ವ್ಯತ್ಯಾಸಗಳಿವೆ. ಇಂತಹ ಸಾಮಾಜಿಕ ಅಸಮಾನತೆ ವಿರುದ್ದ ಹೋರಾಡಿ ಹಕ್ಕುಗಳನ್ನು ಕೇಳಿ ಪಡೆದುಕೊಳ್ಳಬೇಕಾದರೆ ಕೊಳಗೇರಿ ನಿವಾಸಿಗಳು ಮೊದಲು ಸಂಘಟಿರಾಗಿ ಎಂದು ಕರೆ ನೀಡಿದರು.
ಸ್ಲಂ ಜನಾಂದೋಲನ ಕರ್ನಾಟಕ ಚಿತ್ರದುರ್ಗ ಘಟಕದ ಜಿಲ್ಲಾ ಸಂಚಾಲಕ ಟಿ.ಮಂಜಣ್ಣ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ್, ಖಜಾಂಚಿ ಮಂಜುನಾಥ್, ಸುಮಿತ್ರದೇವಿ, ಜಿ.ರೂಪ, ಭಾಗ್ಯಮ್ಮ, ಭಾರತಿ, ಬಸವಂತಮ್ಮ, ಸಾಧಿಕ್ ಸೇರಿದಂತೆ ವಿವಿಧ ಕೊಳಗೇರಿ ಪ್ರದೇಶದ ನಿವಾಸಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು
.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ