ಸರ್ಕಾರ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ನಾಳೆ ಪ್ರತಿಭಟನೆ

ತುಮಕೂರು

     ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ಸರ್ಕಾರ ಮಾಡಿರುವ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿ ಬೆಂಗಳೂರಿನ ಟೌನ್ ಹಾಲ್ ಮುಂದೆ ಸೋಮವಾರದಂದು ಪ್ರತಿಭಟನೆ ಮಾಡಲು ಟಿಯುಸಿಸಿ ಸಂಘಟನೆ ನಿರ್ಧರಿಸಿದೆ ಎಂದು ಟಿಯುಸಿಸಿ ಸಂಘಟನೆ ಮಾಗಡಿ ಜಿಲ್ಲಾಧ್ಯಕ್ಷೆ ಯಶೋದಮ್ಮ ತಿಳಿಸಿದರು.

     ನಗರದಲ್ಲಿ ಆಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಪ್ರಾರಂಭ ಮಾಡಲು ಶಿಫಾರಸ್ಸು ಮಾಡಲು ಮುಂದಾಗಿದೆ. ಈ ಸಾಲಿನಿಂದ ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ಶಿಕ್ಷಣ ನೀಡಲು ಆದೇಶ ಹೊರಡಿಸಿದೆ. ಈ ಆದೇಶವನ್ನು ವಾಪಸ್ ಪಡೆಯಲು ಒತ್ತಾಯಿಸಿ ಜೂ.10ರ ಸೋಮವಾರದಂದು ಬೆಂಗಳೂರಿನ ಟೌನ್ ಹಾಲ್ ಮುಂದೆ ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

     ಮುಖ್ಯಮಂತ್ರಿ ಕುಮಾರಸ್ವಾಮಿಯವರು ಯಾವುದೇ ಪೂರ್ವಾಪರ ಅಲೋಚನೆ ಮಾಡದೆ, ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ಅನುಮತಿ ಕೊಟ್ಟಿರುವುದು ಸರಿಯಲ್ಲ. ಈ ಆದೇಶದಿಂದ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಬೀದಿಗೆ ಬೀಳಲಿದ್ದಾರೆ. ಹೀಗಾಗಿ ಕೂಡಲೇ ಆದೇಶವನ್ನು ಹಿಂಪಡೆಬೇಕು ಎಂದು ಒತ್ತಾಯಿಸಿದರು.

     ಸೋಮವಾರದಂದು ಬೆಂಗಳೂರಿನ ಟೌನ್ ಹಾಲ್ ಮುಂದೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು, ಸರ್ಕಾರ ಕೂಡಲೇ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸುತ್ತೇವೆ. ನಮ್ಮ ಒತ್ತಾಯಕ್ಕೆ ಸರ್ಕಾರ ಬೆಲೆ ಕೊಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಸಹ ನೀಡಿದರು.

     ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿರುವಂತಹ 62,580 ಅಂಗನವಾಡಿ ಕೇಂದ್ರಗಳು. ಈ ಸರ್ಕಾರದ ಆದೇಶದಿಂದ ಮುಚ್ಚುವ ಪರಿಸ್ಥಿತಿಗೆ ತಲುಪುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವುದಕ್ಕೆ ನಮ್ಮ ವಿರೋಧ ಇಲ್ಲ. ಆದ್ರೆ ಹೊಸದಾಗಿ ನೇಮಕಾತಿ ಮಾಡಿಕೊಳ್ಳದೆ ಇರುವ ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ ನೀಡಿ ಶಾಲೆಗಳಲ್ಲಿ ನಿಯೋಜನೆ ಮಾಡಿಕೊಂಡಲ್ಲಿ ಅನುಕೂಲ ಆಗುತ್ತೆ ಇಲ್ಲದೇ ಹೋದಲ್ಲಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಬೀದಿಗೆ ಬೀಳಲಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಸಂಕಷ್ಟವನ್ನು ಆಲಿಸಿ ನಮ್ಮ ಕಷ್ಟಗಳಿಗೆ ಮನ್ನಣೆ ಕೊಡಬೇಕೆಂದು ಮನವಿ ಮಾಡಿಕೊಂಡರು..

      ಪತ್ರಿಕಾಗೋಷ್ಠಿಯಲ್ಲಿ ಟಿಯುಸಿಸಿ ಸಂಘಟನೆಯ ನಗರ ಅಧ್ಯಕ್ಷೆ ನಾಗರತ್ನ, ಕಾರ್ಯದರ್ಶಿ ಗಿರಿಜಮ್ಮ, ಖಜಾಂಜಿ ಪ್ರೇಮಕುಮಾರಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap