ತುರುವೇಕೆರೆ
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಒಂದು ನಾಟಕೀಯ ವ್ಯವಸ್ಥೆ. ಸರ್ಕಾರದ ಹಣದಲ್ಲಿ ಗ್ರಾಮ ವಾಸ್ತವ್ಯದ ಮೂಲಕ ಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಾಗರನಹಳ್ಳಿ ವಿಜಯ್‍ಕುಮಾರ್ ಆರೋಪಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮವಾಸ್ತವ್ಯದ ಮೂಲಕ ಗ್ರಾಮದ ವಾಸ್ತವತೆ ಬದಲಾಗುವುದಿಲ್ಲ, ಕೇವಲ ಸರ್ಕಾರದ ಹಣ ಪೋಲಾಗುತ್ತದೆ. ಈ ಹಿಂದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಗ್ರಾಮವಾಸ್ತವ್ಯದ ಮೂಲಕ ಯಾವುದೇ ಬದಲಾವಣೆಯಾಗಲಿ ಅಭಿವೃದ್ಧಿಯಾಗಲಿ ಕಾಣಲು ಸಾಧ್ಯವಾಗಿಲ್ಲ ಎನ್ನುವುದು ನಮ್ಮ ಕಣ್ಣಮುಂದಿದೆ.
ತಾಲ್ಲೂಕಿನ ಪುರ ಗ್ರಾಮದ ಹುಚ್ಚಯ್ಯನ ಮನೆಗೆ 2007ರಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಕುಮಾರಸ್ವಾಮಿಯವರು ನೀಡಿದ ಭರವಸೆಗಳೆಲ್ಲವೂ ಕೇವಲ ಕಾಗದಕ್ಕೆ ಸೀಮಿತವಾಗಿದೆ. ಹುಚ್ಚಯ್ಯನ ಮಗ ಇಂದು ನಿರುದ್ಯೋಗಿಯಾಗಿದ್ದಾನೆ. ಉದ್ಯೋಗ ನೀಡುವ ಭರವಸೆ ಈಡೇರಿಲ್ಲ. ಗ್ರಾಮದ ರಸ್ತೆಗಳಾಗಲಿ, ಚರಂಡಿಗಳಾಗಲಿ, ಶಾಲೆಯಾಗಲಿ, ಅಭಿವೃದ್ಧಿ ಕಾಣದೆ ಯಥಾಸ್ಥಿತಿಯಲ್ಲೆ ಉಳಿದಿದೆ. ಮುಖ್ಯಮಂತ್ರಿ ಬಂದ ನಂತರ ಗ್ರಾಮ ಅಭಿವೃದ್ಧಿಯಾಗುತ್ತದೆಂದು ಆಶಾಭಾವನೆ ಹೊಂದಿದ್ದ ಜನರಿಗಿಂದು ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿದೆ. ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯದಲ್ಲಿ ಗ್ರಾಮದ ಚಿತ್ರಣವನ್ನು ಬದಲಿಸುವ ಶಕ್ತಿಯಿಲ್ಲ,
ಈ ಗ್ರಾಮದ ಎಷ್ಟೋ ಮಂದಿಗೆ ಸಾಮಾಜಿಕ ಭದ್ರತಾ ಯೋಜನೆಗಳಾಗಲಿ, ಪಡಿತರ ಚೀಟಿಯಾಗಲಿ ಸಮರ್ಪಕವಾಗಿ ವಿತರಣೆಯಾಗಿಲ್ಲ, ಕೇವಲ ಬಡವರ ಮನೆಗೆ, ದಲಿತರ ಮನೆಗೆ ತೆರಳಿ ಊಟಮಾಡಿದರೆ ಅವರ ಪರಿಸ್ಥಿತಿ ಸುಧಾರಿಸುವುದಿಲ್ಲ. ಮುಖ್ಯಮಂತ್ರಿಗಳಿಗೆ ಸಾಮಾಜಿಕ ಬದ್ದತೆಯಿದ್ದರೆ ಗ್ರಾಮ ವಾಸ್ತವ್ಯಕ್ಕೆ ತಗಲುವ ವೆಚ್ಚದಲ್ಲಿ ಒಂದು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸಬಹುದಾಗಿದೆ. ಗ್ರಾಮ ವಾಸ್ತವ್ಯದ ಕನಸು ಬಿಟ್ಟು ಅಭಿವೃದ್ಧಿಯ ಕಡೆ ಗಮನನೀಡಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಡಗೀಹಳ್ಳಿ ವಿಶ್ವನಾಥ್, ಯೋಗಾನಂದ್, ನಿಟ್ಟೂರು ಗ್ರಾ.ಪಂ.ಸದಸ್ಯ ಜಗದೀಶ್, ಮುಖಂಡ ಜಯಣ್ಣ ಇದ್ದರು.