ಬೆಳಗಾವಿ:
ರಾಜ್ಯದಲ್ಲಿ ದೊಡ್ಡ ಸಮಸ್ಯೆಯಾಗಿರುವ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ವಹಣೆ ಮತ್ತು ಸ್ಥಾಪನೆಗೆ ಸಂಬಂಧಿಸಿದದಂತೆ ಬೆಳಗಾವಿಯ ಹಲಗ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೂಮಿ ನೀಡಿದ ರೈತರ ಪರವಾಗಿ ಕಾಂಗ್ರೆಸ್ ಶಾಸಕಿಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಧ್ವನಿ ಎತ್ತುವ ಮೂಲಕ ರಾಜ್ಯ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿದ್ದಾರೆ.
ಸರ್ಕಾರ ಈ ಮೊದಲು ನಿಗದಿ ಪಡಿಸಿದ ಪರಿಹಾರದ ಹಣವನ್ನು ಕೊಡುವವರೆಗೂ ಯಾವುದೇ ಕಾರಣಕ್ಕೂ ಘಟಕ ಸ್ಥಾಪನೆಗೆ ಬಿಡುವುದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಪಟ್ಟು ಹಿಡಿದಿದ್ದಾರೆ, ಆದರೆ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಖಡಕ್ ಸಂದೇಶ ರವಾನಿಸುವ ಮೂಲಕ ಮತ್ತೆ ಬೆಳಗಾವಿ ರಾಜಕೀಯಕ್ಕೆ ರಂಗು ಬಂದಿದೆ.
ಅನ್ನದಾತನ ಜಮೀನಿಗೆ ಸೂಕ್ತ ಪರಿಹಾರ ನೀಡುವಂತೆ ಲಕ್ಷ್ಮಿ ಹೆಬ್ಬಾಳ್ಕರ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದ್ದು, ಸರ್ಕಾರಿ ಅಧಿಕಾರಿಗಳು ಮತ್ತು ರೈತರ ಸಭೆಯಲ್ಲಿ ಕುರ್ಚಿಗಳನ್ನು ಮುರಿದು ಆಕ್ರೋಶ ಹೊರಹಾಕಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಅವರ ಈ ನಡೆ ಸತೀಶ್ ಜಾರಕಿಹೊಳಿ ಅವರನ್ನು ಕೆರಳಿಸಿದ್ದು, ಭೂಮಿ ಒತ್ತುವರಿ 2009 ರಲ್ಲಿಯೇ ಆಗಿದೆ. ಪರಿಹಾರವೂ ಆಗಲೇ ಬಿಡುಗಡೆ ಆಗಿದೆ. ಈ ವಿಷಯದಲ್ಲಿ ಡಿಸಿ ಅಸಾಹಯಕರು, ‘ಸರ್ಕಾರದಿಂದ ಅನ್ಯಾಯವಾಗಿದ್ದರೆ ಸಹಿಸಿಕೊಳ್ಳಬೇಕಷ್ಟೆ’ ಎಂದಿದ್ದಾರೆ.
ತಮ್ಮದೇ ಸರ್ಕಾರದ ವಿರುದ್ಧ ಹೆಬ್ಬಾಳ್ಕರ್ ಪ್ರತಿಭಟನೆ ಇದು ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಬೆಂಬಲಿಗರನ್ನು ಮತ್ತಷ್ಟು ಕೆರಳಿಸಿದ್ದು, ಸರ್ಕಾರವು ಭೂಮಿ ಕಳೆದುಕೊಂಡವರಿಗೆ ಕೇವಲ 3 ಲಕ್ಷ ಮಾತ್ರ ನೀಡುವುದಾದರೆ ನಾವು ಸರ್ಕಾರದ ವಿರುದ್ಧವೇ ಪ್ರತಿಭಟನೆ ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ. ಪ್ರತಿ ಎಕರೆ ಜಮೀನಿಗೆ 30 ಲಕ್ಷ ರು ಹಣ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.