ಚಿತ್ರದುರ್ಗ:
ಬೆಂಗಳೂರಿನ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಿಂದ ಮುಖ್ಯಮಂತ್ರಿ ನಿವಾಸದವರೆಗೆ ಜು.21 ರಂದು ಚಳುವಳಿಯಲ್ಲಿ ಭಾಗಿಯಾಗುವ ಮೂಲಕ ಹುತಾತ್ಮ ರೈತ ದಿನಾಚರಣೆಯನ್ನು ಆಚರಿಸಲಾಗುವುದೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ಕೆ.ರಂಗಸ್ವಾಮಿ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ರೈತರ ಸಭೆ ನಡೆಸಿ ಮಾತನಾಡಿದ ಸೋಮಗುದ್ದು ಕೆ.ರಂಗಸ್ವಾಮಿ ಅಂದು ಬೆಳಿಗ್ಗೆ 8 ಕ್ಕೆ ನಡೆಯುವ ರೈತ ಹುತಾತ್ಮ ರ್ಯಾಲಿಯಲ್ಲಿ ರೈತರ ಸಾಲ ಮನ್ನ ವಿಚಾರದಲ್ಲಿ ಸರ್ಕಾರ ತಾರತಮ್ಯ ನೀತಿ ಅನುಸರಿಸುವುದನ್ನು ವಿರೋಧಿಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆವಿಮೆ ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಕೂಡಲೆ ತುಂಬಬೇಕು.
ಪ್ರತಿ ಹಳ್ಳಿಗಳಲ್ಲಿನ ಒಂದೊಂದು ಕೆರೆಗೆ ಎರಡೆರಡು ಜೆಸಿಬಿಯ ಮೂಲಕ ಹೂಳು ತೆಗೆಸಿ ರೈತರೆ ಮಣ್ಣನ್ನು ತಮ್ಮ ತಮ್ಮ ಹೊಲಗಳಿಗೆ ಸಾಗಿಸಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಲಾಗುವುದು. ಚಿತ್ರದುರ್ಗ ಜಿಲ್ಲೆ ಮೊದಲಿನಿಂದಲೂ ಬರಪೀಡಿತ ಪ್ರದೇಶವಾಗಿರುವುದರಿಂದ ನದಿಗಳ ಜೋಡಣೆಯೆ ಬರ ನಿವಾರಣೆಗೆ ಪರಿಹಾರ. ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಹಗಲು ವೇಳೆ ನಿರಂತರವಾಗಿ ಎಂಟು ಗಂಟೆಗಳ ಕಾಲ ವಿದ್ಯುತ್ ನೀಡಬೇಕು. ಬಗರ್‍ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ಕೊಡುವುದರಿಂದ ಯಾವ ಪ್ರಯೋಜನವಿಲ್ಲ.
ಅದರ ಬದಲು ಖಾತೆ ಮಾಡಿಕೊಡಬೇಕು. ಗುತ್ತಿಗೆ ಆಧಾರಿತ ನೌಕರರನ್ನು ಖಾಯಂಗೊಳಿಸಬೇಕು. ಶುಗರ್ ಫ್ಯಾಕ್ಟರಿಗಳಲ್ಲಿರುವ ಸಕ್ಕರೆಯನ್ನು ಮಾರಾಟ ಮಾಡಿದಾಗ ಮಾತ್ರ ರೈತರಿಗೆ ಕಬ್ಬಿನ ಬಾಕಿಯನ್ನು ಕೊಡಬಹುದು ಎಂದು ಸರ್ಕಾರದ ಗಮನ ಸೆಳೆಯುವುದಕ್ಕಾಗಿ ಹಮ್ಮಿಕೊಂಡಿರುವ ರೈತ ಹುತಾತ್ಮ ದಿನಾಚರಣೆ ಚಳುವಳಿಯಲ್ಲಿ ಭಾಗವಹಿಸುವ ಜಿಲ್ಲೆಯ ರೈತರು ಜು.20 ರಂದು ಸಂಜೆ 7 ಗಂಟೆಗೆ ರೊಟ್ಟಿ ಬುತ್ತಿಯೊಂದಿಗೆ ಚಿತ್ರದುರ್ಗ ರೈಲ್ವೆ ನಿಲ್ದಾಣಕ್ಕೆ ಬರುವಂತೆ ಸೋಮಗುದ್ದು ಕೆ.ರಂಗಸ್ವಾಮಿ ವಿನಂತಿಸಿದರು.
ರೆಸಾರ್ಟ್ ಶಾಸಕರ ಸಚಿವರ ದನದದೊಡ್ಡಿ:
ಬೀದಿ ದನಗಳನ್ನು ಹಾಗೂ ರಾತ್ರಿ ವೇಳೆ ಹೊಲಗಳಿಗೆ ನುಗ್ಗಿ ಮೇಯುತ್ತಿದ್ದ ದನಗಳನ್ನು ಕೂಡಿಹಾಕಲು ಈ ಹಿಂದೆ ಎಲ್ಲಾ ಕಡೆ ದೊಡ್ಡಿ ವ್ಯವಸ್ಥೆಯಿತ್ತು. ಈಗ ರಾಜ್ಯದ ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿರುವವರನ್ನು ಕೂಡಿ ಹಾಕಲು ರೆಸಾರ್ಟ್‍ಗಳು ಹುಟ್ಟಿಕೊಂಡಿವೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಸೋಮಗುದ್ದು ರಂಗಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಜು.21 ರಂದು ಬೆಂಗಳೂರಿನಲ್ಲಿ ಹುತಾತ್ಮ ರೈತರ ಜಾಥ ನಡೆಸುವ ಕುರಿತು ಪ್ರವಾಸಿ ಮಂದಿರದಲ್ಲಿ ರೈತರೊಂದಿಗೆ ಚರ್ಚಿಸಿದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಸೋಮಗುದ್ದು ಕೆ.ರಂಗಸ್ವಾಮಿ ವಿಧಾನಸೌಧ ಮತ್ತು ಪಾರ್ಲಿಮೆಂಟ್ ಪ್ರಜಾಪ್ರಭುತ್ವದ ದೇಗುಲವಿದ್ದಂತೆ ಅಂತಹ ಪವಿತ್ರ ಸ್ಥಳದಲ್ಲಿರುವ ರಾಜಕಾರಣಿಗಳು ಅಧಿಕಾರಕ್ಕಾಗಿ ಮಾಡಬಾರದ್ದನ್ನು ಮಾಡುತ್ತ ರೆಸಾರ್ಟ್‍ಗಳಲ್ಲಿ ಠಿಕಾಣಿ ಹೂಡಿ ಮತದಾರರಿಗೆ ವಂಚನೆ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಬರಗಾಲವಿದ್ದು, ಕುಡಿಯುವ ಹನಿ ನೀರಿಗೂ ಜನ ಪರದಾಡುತ್ತಿದ್ದಾರೆ. ಅನ್ನದಾತ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇದ್ಯಾವುದರ ಅರಿವು ಇಲ್ಲದ ಚುನಾಯಿತ ಪ್ರತಿನಿಧಿಗಳು ಇನ್ನು ಮುಂದಾದರೂ ತಮ್ಮ ಜವಾಬ್ದಾರಿಯನ್ನು ತಿಳಿದು ಅಭಿವೃದ್ದಿ ಕಡೆ ಗಮನ ಕೊಡಲಿ ಎಂದು ಎಚ್ಚರಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಎಲ್.ಬಸವರಾಜಪ್ಪ, ಗೌರವಾಧ್ಯಕ್ಷ ಕುರುಬರಹಳ್ಳಿ ಶಿವಣ್ಣ, ಉಪಾಧ್ಯಕ್ಷ ನಾರಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಸಿದ್ದಪ್ಪ, ಖಜಾಂಚಿ ಎನ್.ಜಿ.ಷಣ್ಮುಖಪ್ಪ, ಕೆ.ಎಸ್.ತಿಪ್ಪೇಸ್ವಾಮಿ, ಎ.ಎಸ್.ಗುರುಸಿದ್ದಪ್ಪ, ಎಸ್.ಕಲ್ಲಪ್ಪ, ಸತೀಶ್ ಸಭೆಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
