ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಪ್ರವೇಶಕ್ಕೆ ನೂಕು ನುಗ್ಗಲು

ತುಮಕೂರು

     ಮಕ್ಕಳು ಮತ್ತು ಪೋಷಕರನ್ನು ಸರ್ಕಾರಿ ಶಾಲೆಗಳಿಗೆ ಆಕರ್ಷಿಸಲು ಹಾಗೂ ಶಾಲೆಗಳ ಬಲವರ್ಧನೆಗಾಗಿ ಸರ್ಕಾರ ಈ ಶೈಕ್ಷಣಿಕ ವರ್ಷದಿಂದ ರಾಜ್ಯದ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಿದೆ. ತುಮಕೂರು ದಕ್ಷಿಣ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳಲ್ಲಿ 48 ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮಕ್ಕೆ ಪ್ರವೇಶ ಆರಂಭವಾಗಿದೆ.

     ಸರ್ಕಾರದ ಈ ಪ್ರಾಯೋಗಿಕ ಪ್ರಯತ್ನಕ್ಕೆ ಜಿಲ್ಲೆಯಲ್ಲಿ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಆಂಗ್ಲ ಮಾಧ್ಯಮ ಶಾಲೆಗಳಿಗೆ ನಿರೀಕ್ಷೆ ಮೀರಿ ಬೇಡಿಕೆ ಬಂದಿದ್ದು, ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಲು ಪೋಷಕರು ಮುಗಿಬಿದ್ದಿದ್ದಾರೆ.

      ಇತ್ತೀಚಿನ ವರ್ಷಗಲ್ಲಿ ಪೋಷಕರಲ್ಲಿ ಇಂಗ್ಲೀಷ್ ವ್ಯಾಮೋಹ ಹೆಚ್ಚಾಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಆಸಕ್ತಿ ವಹಿಸುತ್ತಿಲ್ಲ. ಇವರಿಗೆ ಬೆಂಬಲವೆಂಬಂತೆ ಹೋಬಳಿ ಕೇಂದ್ರದ ಆಂಗ್ಲ ಮಾಧ್ಯಮ ಶಾಲೆಗಳು ಅಕ್ಕಪಕ್ಕದ ಹಳ್ಳಿಗಳಿಗೂ ಶಾಲಾ ಬಸ್ ಸೇವೆ ಒದಗಿಸಿ ಹಳ್ಳಿ ಮಕ್ಕಳನ್ನು ಕಾನ್ವೆಂಟ್ ಶಾಲೆಗೆ ಆಕರ್ಷಿಸುತ್ತಿವೆ. ಹೀಗಾಗಿ ಗಾಮೀಣ ಪ್ರದೇಶದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಮಕ್ಕಳ ಕೊರತೆ ಎದುರಿಸುವಂತಾಗಿದೆ.

      ಎಷ್ಟೋ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಇದನ್ನು ಮನಗಂಡ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯವi ಆರಂಭಿಸಿ, ಪೋಷಕರನ್ನು ಆಕರ್ಷಿಸುವ ಜೊತೆಗೆ, ಶಾಲೆಗಳನ್ನು ಉಳಿಸುವ ಪ್ರಯತ್ನಕ್ಕೆ ಈ ಮೂಲಕ ಮುಂದಾಗಿದೆ. ಈ ವರ್ಷ ಒಂದನೇ ತರಗತಿ ಆರಂಭಿಸಿ ಮುಂದಿನ ವರ್ಷ ಅದೇ ಶಾಲೆಗಳಲ್ಲಿ ಎರಡನೇ ತರಗತಿ ಆರಂಭ ಮಾಡಲಾಗುತ್ತದೆ. ಈ ಬಾರಿ ಒಂದನೇ ತರಗತಿಗೆ ಪ್ರತಿ ಶಾಲೆಯಲ್ಲಿ 30 ಮಕ್ಕಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ.

       ಕೆಲವು ಶಾಲೆಗಳಲ್ಲಿ ಮಕ್ಕಳ ಪ್ರವೇಶಕ್ಕಾಗಿ ನೂರೈವತ್ತಕ್ಕೂ ಹೆಚ್ಚು ಅರ್ಜಿ ಬಂದಿವೆ. ಕೆಲ ಪೋಷಕರು ಶಾಸಕರು, ಜಿಲ್ಲಾ ಪಂಚಾಯ್ತಿ ಸದಸ್ಯರ ಶಿಫಾರಸು ಪತ್ರಗಳನ್ನೂ ಅರ್ಜಿ ಜೊತೆ ಲಗತ್ತಿಸಿ, ಶಾಲಾ ಪ್ರವೇಶಕ್ಕೆ ಪ್ರಯತ್ನ ನಡೆಸಿದ್ದಾರೆ. ಸರ್ಕಾರಿ ಶಾಲೆ ಪ್ರವೇಶಕ್ಕೆ ಹಿಂದೆಂದೂ ಇಂತಹ ಬೇಡಿಕೆ ಕಂಡುಬಂದಿರಲಿಲ್ಲ.

      ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಕನಿಷ್ಠ 4 ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭಿಸಲು ಸರ್ಕಾರ ಸುತ್ತೋಲೆ ಹೊರಡಿಸಿದೆ. ಅದರಂತೆ ಇಲಾಖೆ ಇಂಗ್ಲೀಷ್ ಮಾಧ್ಯಮ ತರಗತಿಗಳನ್ನ ಆರಂಭಿಸಲು ಸೂಕ್ತ ಶಾಲೆಗಳನ್ನು ಗುರುತಿಸಿ ಅಲ್ಲಿ ಮಕ್ಕಳ ಪ್ರವೇಶಕ್ಕೆ ಅವಕಾಶ ನೀಡಿದೆ.

        ಕೊರಟಗೆರೆ ಕ್ಷೇತ್ರದಲ್ಲಿ ಗರಿಷ್ಠ 7 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲಾಗಿದೆ. ಉಳಿದಂತೆ ಗುಬ್ಬಿ-5, ತುರುವೇಕೆರೆ-4, ಚಿಕ್ಕನಾಯಕನಹಳ್ಳಿ-4, ತಿಪಟೂರು-4, ತುಮಕೂರು ಗ್ರಾಮಾಂತರ-4, ತುಮಕೂರು ನಗರ-4, ಶಿರಾ-4, ಮಧುಗಿರಿ-5, ಪಾವಗಡ-4 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳು ಆರಂಭವಾಗಿವೆ.

      ಒಂದೇ ಆವರಣದಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ನಡೆಯುತ್ತಿರುವ ಶಾಲೆಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಒಂದು ವೇಳೆ ಈ ಶಾಲೆಗಳು ಲಭ್ಯ ಇಲ್ಲದಿದ್ದರೆ ಮಕ್ಕಳ ದಾಖಲಾತಿ ಹೆಚ್ಚಿರುವ ಒಂದರಿಂದ ಎಂಟನೇ ತರಗತಿಗಳು ನಡೆಯುವ ಶಾಲೆಗಳನ್ನು ಇಂಗ್ಲೀಷ್ ಮೀಡಿಯಂಗಾಗಿ ಆಯ್ಕೆ ಮಾಡಲಾಗಿದೆ.

      ಇಂಗ್ಲೀಷ್ ಮಾಧ್ಯಮ ಆರಂಭವಾದ ಬಗ್ಗೆ ಆಯಾ ಶಾಲೆ ಶಿಕ್ಷಕರು ಶಾಲಾ ವ್ಯಾಪ್ತಿಯಲ್ಲಿ ಪ್ರಚಾರ ಮಾಡಿ ಮಕ್ಕಳ ಪ್ರವೇಶಕ್ಕೆ ಪೋಷಕರ ಮನವೊಲಿಸುವ ಪ್ರಯತ್ನ ಮಾಡಲು ಸೂಚನೆ ನೀಡಲಾಗಿದೆ. ಆದರೆ ಅದಕ್ಕೂ ಮೊದಲೇ ಹೆಚ್ಚು ಪ್ರಚಾರ ಪಡೆದು ಅಕ್ಕಪಕ್ಕದ ಗ್ರಾಮಗಳ ಪೋಷಕರೂ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಲು ಪ್ರಯತ್ನ ನಡೆಸಿದ್ದಾರೆ.

30 ಮಕ್ಕಳಿಗೆ ಮಿತಿ

     ಆಂಗ್ಲ ಮಾಧ್ಯಮ ತರಗತಿಗಳ ಪ್ರವೇಶವನ್ನು 30 ಮಕ್ಕಳಿಗೆ ಮಿತಿಗೊಳಿಸಲಾಗಿದೆ. ಪ್ರವೇಶಕ್ಕೆ ಯಾವುದೇ ಮಾನದಂಡ ನಿಗಧಿ ಮಾಡಿಲ್ಲ. ಆದರೆ, ಪ್ರವೇಶ ಬಯಸಿ ಹೆಚ್ಚಿನ ಅರ್ಜಿಗಳು ಬಂದಿರುವ ಶಾಲೆಗಳಲ್ಲಿ ಪೋಷಕರ ಸಮ್ಮುಖದಲ್ಲಿ ಲಾಟರಿ ಎತ್ತಿ 30 ಮಕ್ಕಳನ್ನು ಆಯ್ಕೆ ಮಾಡಿ ದಾಖಲು ಮಾಡಿಕೊಳ್ಳಲಾಗುವುದು ಎಂದು ಡಿಡಿಪಿಐ ಎಂ ಆರ್ ಕಾಮಾಕ್ಷಿ ಹೇಳಿದರು.

      ಎಲ್ಲಾ ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲೂ ಮಕ್ಕಳಿಗೆ ಇಂಗ್ಲೀಷ್ ವಿಷಯದ ಜೊತೆಗೆ ಪ್ರಥಮ ಭಾಷೆಯಾಗಿ ಕನ್ನಡ ಭಾಷೆ ಕಲಿಕೆ ಕಡ್ಡಾಯವಾಗಿರುತ್ತದೆ. 2017ರ ಕನ್ನಡ ಭಾಷಾ ಕಲಿಕಾ ಅಧಿನಿಯಮದ ಅನ್ವಯ ರಾಜ್ಯದ ಎಲ್ಲಾ ಐಸಿಎಸ್‍ಸಿ, ಸಿಬಿಎಸ್‍ಸಿ, ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಲೇಬೇಕು.ಅದೇ ನಿಯಮ ಇಲ್ಲೂ ಪಾಲನೆಯಾಗುತ್ತದೆ.

ಪಠ್ಯ ಪುಸ್ತಕ ಬಂದಿಲ್ಲ

      ಮೇ 29ರಿಂದ ಎಲ್ಲಾ ಸರ್ಕಾರಿ ಶಾಲೆಗಳಂತೆ ಇಂಗ್ಲೀಷ್ ಮಾಧ್ಯಮ ಶಾಲೆಗಳೂ ಆರಂಭವಾಗಿವೆಯಾದರೂ ಇನ್ನೂ ಮಕ್ಕಳ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಆಂಗ್ಲ ಮಾಧ್ಯಮದ ಪಠ್ಯ ಪುಸ್ತಕಗಳೂ ಇನ್ನೂ ಶಾಲೆಗೆ ತಲುಪಿಲ್ಲ. ಆಂಗ್ಲ ಮಾಧ್ಯಮ ಬೋಧಿಸಲು ಪ್ರತ್ಯೇಕ ಶಿಕ್ಷಕರ ನೇಮಕವಾಗಿಲ್ಲ. ಹಾಲಿ ಕನ್ನಡ ಮಾಧ್ಗಯಮ ಶಾಲೆ ಶಿಕ್ಷಕರಿಗೇ ಇಲಾಖೆಯಿಂದ ವಿಶೇಷ ತರಬೇತಿ ನೀಡಿ ಪರಿಣಿತಿಗೊಳಿಸಲಾಗಿದೆ. ಪಠ್ಯಕ್ರಮದ ಮಾಹಿತಿ ಒದಗಿಸಿದೆ. ಪಠ್ಯ ಪುಸ್ತಕಗಳು ಸರಬರಾಜು ಆಗುವವರೆಗೆ ಶಿಕ್ಷಕರು ಪಠ್ಯಕ್ರಮದ ಚಟುವಟಿಕೆಗಳನ್ನು ಮಕ್ಕಳಿಗೆ ಬೋಧಿಸಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

 

Recent Articles

spot_img

Related Stories

Share via
Copy link