ಚುನಾವಣಾ ನೀತಿ ಸಂಹಿತೆ : ಸರ್ಕಾರಿ ಕಚೇರಿಗಳು ಇನ್ನೂ ಖಾಲಿ…ಖಾಲಿ!

ತುಮಕೂರು

        ಲೋಕಸಭಾ ಚುನಾವಣೆ ಏಪ್ರಿಲ್ 18 ರಂದೇ ಮುಗಿದಿದ್ದರೂ, “ಚುನಾವಣೆ ನೀತಿ ಸಂಹಿತೆ”ಯ ಪರಿಣಾಮ ಮಾತ್ರ ಇನ್ನೂ ಸಹ ಕಿಂಚಿತ್ತೂ ಕಡಿಮೆಯಾಗಿಲ್ಲ. ತುಮಕೂರು ನಗರದ ಸರ್ಕಾರಿ ಕಚೇರಿಗಳು ಇನ್ನೂ ಸಹಾ ಜನರಿಲ್ಲದೆ ಖಾಲಿ… ಖಾಲಿ ಎನಿಸುತ್ತಿವೆ. ಇನ್ನೂ ಸಹ ಒಂದು ತಿಂಗಳು ಅಂದರೆ ಮೇ 23 ರವರೆಗೆ ಇದೇ ಪರಿಸ್ಥಿತಿ ಇರಲಿದೆಯೆಂಬುದು ಸಾರ್ವಜನಿಕರ ಪಾಲಿಗೆ “ನುಂಗಲಾರದ ತುತ್ತು” ಆಗಿದೆ.

        ಜಿಲ್ಲಾದ್ಯಂತದಿಂದ ಬರುವ ನಾಗರಿಕರಿಂದ ಸದಾ ಗಿಜಿಗಿಡುತ್ತಿದ್ದ ತುಮಕೂರಿನ ಮಿನಿವಿಧಾನಸೌಧ ಇದೀಗ ನಾಗರಿಕರ ಆಗಮನವಿಲ್ಲದೆ ಬಣಗುಡುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ, ಇಲ್ಲಿರುವ ಜಿಲ್ಲಾ ಮಟ್ಟದ ಎಲ್ಲ ಕಚೇರಿಗಳ ಸ್ಥಿತಿಯೂ ಒಂದೇ ರೀತಿ ಇದೆ. ತುಮಕೂರು ತಾಲ್ಲೂಕು ಕಚೇರಿಯಲ್ಲೂ ಇದೇ ಸ್ಥಿತಿ ಕಾಣಿಸುತ್ತಿದೆ. ಅಧಿಕಾರಿಗಳು-ನೌಕರರು ಕಚೇರಿಯಲ್ಲಿ ಸಿಗುತ್ತಿಲ್ಲ.

        ಇದ್ದರೂ  ಚುನಾವಣಾ ನೀತಿ ಸಂಹಿತೆ”ಯ ಪ್ರಮುಖ ಕಾರಣ ಎಲ್ಲರ ಮುಂದಿದೆ. ಬೆರಳೆಣಿಕೆ ಸಂಖ್ಯೆಯ ನಾಗರಿಕರು ಯಾವುದಾದರೂ ತುರ್ತು ಕೆಲಸಗಳಿದ್ದರೆ ಇಲ್ಲಿನ ಕಚೇರಿಗಳಿಗೆ ಬಂದು ಹೋಗುತ್ತಿದ್ದಾರೆ. ಮಿಕ್ಕಂತೆ ಎಲ್ಲವೂ ಖಾಲಿ… ಖಾಲಿ ಆಗಿದೆ.
ಸಮೀಪವೇ ಇರುವ ತುಮಕೂರು ತಾಲ್ಲೂಕು ಪಂಚಾಯಿತಿ ಕಚೇರಿಯೂ ಜನಪ್ರತಿನಿಧಿಗಳಿಲ್ಲದೆ, ಗ್ರಾಮೀಣ ಪ್ರದೇಶದ ಜನರಿಲ್ಲದೆ ಸಂಪೂರ್ಣ ಖಾಲಿಯಾಗಿದೆ.

       ಇಲ್ಲೇ ಇರುವ ತುಮಕೂರು ಗ್ರಾಮಾಂತರ ಶಾಸಕರ ಕಚೇರಿಯೂ ಬಾಗಿಲು ಮುಚ್ಚಿದೆ. ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿರುವ ಜನಪ್ರತಿನಿಧಿಗಳ ಕೊಠಡಿಗಳಿಗೆಲ್ಲ ಬೀಗ ಹಾಕಿರುವುದರಿಂದ ಜನಪ್ರತಿನಿಧಿಗಳೂ ಇತ್ತ ಬರುತ್ತಿಲ್ಲ. ಅಧಿಕಾರಿಗಳು-ನೌಕರರು ಮಾತ್ರ ಕಚೇರಿಗೆ ಬಂದುಹೋಗುತ್ತಿದ್ದಾರೆ. ಮಿಕ್ಕಂತೆ ಇಡೀ ತಾಲ್ಲೂಕು ಪಂಚಾಯಿತಿ ಕಚೇರಿ ಯಾವುದೇ ಚಟುವಟಿಕೆಗಳಿಲ್ಲದೆ ಸ್ಥಬ್ಧಗೊಂಡಂತಾಗಿದೆ.
ತುಮಕೂರು ಮಹಾನಗರ ಪಾಲಿಕೆ ಕಚೇರಿಯೂ ಇದಕ್ಕಿಂತ ಹೊರತಾಗಿಲ್ಲ.

         ಇಲ್ಲೂ ಸಹ ಕಂದಾಯ ಪಾವತಿಸಲು “ತೆರಿಗೆದಾರ ನಾಗರಿಕರು” ಬಂದು ಕೌಂಟರ್‍ಗಳಲ್ಲಿ ಸಾಲುಗಟ್ಟಿನಿಂತು ತೆರಿಗೆ ಪಾವತಿಸಿ ಹೋಗುತ್ತಿದ್ದಾರೆ. ಮಿಕ್ಕಂತೆ ಎಲ್ಲ ಚಟುವಟಿಕೆಗಳೂ ಬಂದ್ ಆಗಿವೆ. ಮೇಯರ್, ಉಪಮೇಯರ್, ಸ್ಥಾಯಿ ಸಮಿತಿಯ ನಾಲ್ವರು ಅಧ್ಯಕ್ಷರುಗಳ ಕೊಠಡಿಗಳು “ಚುನಾವಣಾ ನೀತಿ ಸಂಹಿತೆ”ಯ ಪ್ರಮುಖ ಕಾರಣದಿಂದ ಬೀಗ ಹಾಕಲ್ಪಟ್ಟಿವೆ. ಹೀಗಾಗಿ ಜನಪ್ರತಿನಿಧಿಗಳು ಇತ್ತ ಸುಳಿಯುತ್ತಿಲ್ಲ. ಬಂದರೂ ಎಲ್ಲಾದರೂ ಕುಳಿತು ಹೋಗಬೇಕಾದ ಪರಿಸ್ಥಿತಿಯಿದೆ. ತುರ್ತು ಕೆಲಸಗಳನ್ನು ಬಿಟ್ಟರೆ ಬೇರಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಅನೇಕ ಅಧಿಕಾರಿಗಳು-ನೌಕರರು ಇನ್ನೂ ಚುನಾವಣಾ ಕೆಲಸದ ಒತ್ತಡದಲ್ಲಿ ಇದ್ದಾರೆ. ಸಾರ್ವಜನಿಕರೂ ಪಾಲಿಕೆ ಕಚೇರಿಯತ್ತ ಕಾಲಿಡುತ್ತಿಲ್ಲ. ಬಹುತೇಕ ಪಾಲಿಕೆ ಕಚೇರಿಯು ಖಾಲಿ… ಖಾಲಿ ಎನಿಸುತ್ತಿದೆ.

       ಮೇ 23 ರಂದು ಮತಎಣಿಕೆ ಕಾರ್ಯ ನಡೆಯಲಿದ್ದು ಅಂದೇ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಆನಂತರದ ಇನ್ನೂ ಎರಡು ದಿನಗಳವರೆಗೆ ಅಂದರೆ ಮೇ 25 ರವರೆಗೆ ಚುನಾವಣೆಯ “ಮಾದರಿ ನೀತಿ ಸಂಹಿತೆ” ಜಾರಿಯಲ್ಲಿರುತ್ತದೆ. ಅಲ್ಲಿಯವರೆಗೂ ಈಗಿರುವ ಪರಿಸ್ಥಿತಿಯನ್ನು ಸಾರ್ವಜನಿಕರು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಿದೆ ಎಂಬುದೀಗ ಎಲ್ಲೆಲ್ಲೂ ಚರ್ಚಾ ವಿಷಯವಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link