ಹರಪನಹಳ್ಳಿ:
ಮಳೆಯ ಕೊರತೆಯಿಂದ ಬೆಳೆಗಳಷ್ಟೇ ಅಲ್ಲ, ಕೆರೆ ಕಟ್ಟೆಗಳೂ ಬತ್ತಿಹೋಗಿ 5 ತಿಂಗಳಿನಿಂದ ಸಂಬಳವಿಲ್ಲದೆ ಸರ್ಕಾರಿ ನೌಕರರ ಜೀವನವೂ ಒಣಗಿದಂತಾಗಿದೆ. ಮೀನುಗಾರರಿಗೆ ಇಲಾಖೆಯಿಂದ ಯಾವುದೇ ಅನುದಾನವಿಲ್ಲದೆ ರೈತರಿಗೆ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತಾಗಿದೆ.
ಅನುದಾನ ಬಿಡುಗಡೆಯಾಗಿಲ್ಲ, ಪ್ರತಿ ವರ್ಷದಂತೆ ನವಂಬರ್ 2018 ರಲ್ಲಿ ತಯಾರಾಗಿರುವ ಕ್ರಿಯಾಯೋಜನೆ ದಾವಣಗೆರೆಗೆ ಸಲ್ಲಿಸಲಾಗಿದೆ. ಹರಪನಹಳ್ಳಿ ಬಳ್ಳಾರಿ ಜಿಲ್ಲೆಗೆ ಮರು ಸೇರ್ಪಡೆಯಿಂದಾಗಿ ಹಣ ಬಿಡುಗಡೆಯಾಗದೆ ರೈತರಿಗೆ ಉತ್ತರಿಸಲಾಗದೆ ಕಳೆದ ಐದು ತಿಂಗಳಿನಿಂದ ಸಂಬಳವೂ ಇಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಮೀನುಗಾರಿಕೆಯ ಸಿಬ್ಬಂದಿಗಳು ಗೊಣಗಿಕೊಳ್ಳುವಂತಾಗಿದೆ.
ಕಡಿಮೆ ಅನುದಾನ ವಿರಳ ಸಹಕಾರಿ ಸಂಘಗಳು
ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ತಾಲೂಕಿನ 28 ಕೆರೆಗಳ ವ್ಯಾಪ್ತಿಯನ್ನು ಹೊಂದಿದೆಯಾದರೂ 5 ಸಹಕಾರಿ ಮೀನುಗಾರಿಕೆ ಸಂಘಗಳು ಕಾರ್ಯನಿರ್ವಹಿಸುತ್ತಿವೆ. 3 ಜನ ಸಿಬ್ಬಂದಿಯ ಇಲಾಖೆಗೆ ಅನುದಾನವೂ ಕಡಿಮೆ. ಇನ್ನು ಹೆಚ್ಚಿನ ಸಹಕಾರಿ ಸಂಘಗಳ ನೊಂದಣಿಗೆ ಅವಕಾಶ ಕಲ್ಪಿಸಿದರೆ ಹೆಚ್ಚಿನ ಅನುದಾನವೂ ದೊರೆಯುವಂತಾಗುತ್ತದೆ. ರೈತರಿಗೂ ಸಹಕಾರಿಯಾಗಲಿದ್ದು. ಸ್ವಯಂ ಉದ್ಯೋಗ ಸೃಷ್ಟಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ತಾಲೂಕಿನ ಮೀನುಗಾರರು.
ಬಿಡುಗಡೆಯಾಗದ ಅನುದಾನ
ಒಳನಾಡು ಮೀನುಗಾರರ ಅಭಿವೃದ್ದಿಯ ಮೀನುಮರಿ ಪಾಲನೆಗೆ ಬೇಕಾದ ಸಾಮಗ್ರಿ, ಕಚೇರಿ ಕಟ್ಟಡ ದುರಸ್ತಿಗಾಗಿ 2 ಲಕ್ಷ, ವಿಷೇಶ ಘಟಕ ಯೋಜನೆಯಲ್ಲಿನ ರೈತರ ಜಮೀನಿನಲ್ಲಿ ಹೊಂಡ ನಿರ್ಮಾಣಕ್ಕೆ ಪರಿಶಿಷ್ಟ ಜಾತಿಗೆ ಸೀಮಿತ 1 ಲಕ್ಷ, ಪರಿಶಿಷ್ಟ ಪಂಗಡಕ್ಕೆ ಸೀಮಿತವಾಗಿ 1 ಲಕ್ಷ, ದ್ವಿಚಕ್ರ ವಾಹನಗಳಿಗೆ 3 ಜನರಿಗೆ 30 ಸಾವಿರ, ವಸ್ತು ಪ್ರದರ್ಶನಕ್ಕಾಗಿ 30 ಸಾವಿರ ಕ್ರಿಯಾ ಯೋಜನೆ ಸಿದ್ದವಾಗಿ 9 ತಿಂಗಳಾದರೂ ಅನುದಾನ ಬಿಡುಗಡೆಯಾಗಿಲ್ಲ.
7 ಜನ ಮೀನುಗಾರಿಗೆ ರಾಜ್ಯ ವಲಯದಿಂದ ಮೀನುಗಾರಿಕೆ ಸಲಕರಣೆ ಕಿಟ್‍ಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಸಲಕರಣೆ ಶೀಘ್ರದಲ್ಲಿ ಬರುವ ನಿರೀಕ್ಷೆಯಿದೆ.
ಹೋರಾಟದಿಂದ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾಗಿದ್ದು ಬಹು ಖುಷಿಯಾಗಿದೆಯಾದರೂ ಇಲಾಖೆವಾರು ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ. ಅನುದಾನ ಸಕಾಲಕ್ಕೆ ಬಿಡುಗಡೆಯಾದರೆ ಅನುಕೂಲ ಸಿಂಧುವಾಗಲಿದೆ. ಆದರೆ ಬಿಡುಗಡೆಯಾಗದ ಅನುದಾನದ ಜೊತೆಯಲ್ಲಿ ತಾಂತ್ರಿಕ ಕಾರಣಗಳಿಂದ ಸಂಬಳವೂ ಕೈಸೇರದಂತಾಗಿ ತಿಂಗಳ ಜೀವನ ನಿರ್ವಹಣೆಗೂ ತೊಂದರೆ ಅನುಭವಿಸುವಂತಾಗಿದೆ ಎನ್ನುತ್ತಾರೆ ಸಿಬ್ಬಂದಿ.
ಬಳ್ಳಾರಿ ಜಿಲ್ಲೆಗೆ ತಾಲೂಕು ಸೇರ್ಪಡೆಯಾದ ಕೂಡಲೇ 371 ಜೆ ಕಲಂ ನಡಿಯಲ್ಲಿ ಸಲ್ಲಬೇಕಾದ ಸೌಲಭ್ಯಗಳು ಬರುವ ನಿರೀಕ್ಷೆಯಿತ್ತಾದರೂ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲವಾದ್ದರಿಂದ ಸಮಸ್ಯೆಗಳು ಉಲ್ಬಣವಾಗುತ್ತಿವೆ ಎನ್ನುವುದು ತಾಲೂಕಿನ ಎಲ್ಲಾ ಇಲಾಖೆಗಳ ಅಭಿಪ್ರಾಯವಾಗಿದೆ.
ಬರಗಾಲ ಸಂಕಷ್ಟದಲ್ಲಿ ರೈತ
ಮೇಳೆಯಿಲ್ಲ ಬೆಳೆಯಿಲ್ಲ, ಮೀನುಗಾರಿಕೆನಾದರೂ ಮಾಡಲೆಂದರೆ ಕೆರೆಗಳಿಗೆ ನೀರಿಲ್ಲ, ಅದರಲ್ಲಿ ಸಮಸ್ಯೆಗಳ ಬಗೆಹರಿಸಿಕೊಳ್ಳಲು ಬಹುದೂರದ ಬಳ್ಳಾರಿಗೆ ಹೋಗಿ ಬರಲು ಎರಡು ದಿನಗಳೇ ಕಳೆದು ಹೋಗುತ್ತವೆ, ರೈತರಿಗೆ ಭರಿಸಲಾಗದಷ್ಟು ಆರ್ಥಿಕ ಹಾಗೂ ಸಮಯದ ತೊಂದರೆ ಉಂಟಾಗಿದೆ ಎನ್ನುವುದು ಇಡೀ ತಾಲೂಕಿನ ನಾಗರೀಕರ ಮಾತಾಗಿದೆ.