ಚಿತ್ರದುರ್ಗ:
ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಶಿಕ್ಷಣ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು, ಈ ನಿಟ್ಟಿನಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರಕಿಸುವಲ್ಲಿ ಶಿಕ್ಷಕರು ಹಾಗೂ ಪೋಷಕರು ಶ್ರಮ ವಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಕರೆ ನೀಡಿದರು.
ಇಂಗಳದಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2019-20 ನೇ ಸಾಲಿನ ಪ್ರಾರಂಭೋತ್ಸವವನ್ನು ಬುಧವಾರ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆ ಪ್ರಾರಂಭೋತ್ಸವದ ಅಂಗವಾಗಿ ಇಂಗಳದಾಳು ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಿ ಖಾಸಗಿ ಶಾಲೆಗಳಂತೆ ವಿಭಿನ್ನ ರೀತಿಯಲ್ಲಿ ಸಜ್ಜಗೊಳಿಸಿರುವುದು ಮನಸ್ಸಿಗೆ ಅತ್ಯಂತ ಮುದುನೀಡುವಂತಿದೆ. ಮಕ್ಕಳ ಕಲಿಕೆಗೆ ಇದು ಪೂರಕ ವಾತಾವರಣ ನಿರ್ಮಾಣ ಮಾಡಿದಂತಿದೆ. ಇದೇ ರೀತಿ ಮನೆ ಮನೆಗೆ ಭೇಟಿ ನೀಡಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಪೋಷಕರುಗಳ ಮನವೊಲಿಸಬೇಕೆಂದು ಹೇಳಿದರು.
ಬಿ.ಆರ್.ಸಿ. ಟಿ.ಈಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡುತ್ತ ಶಾಲೆಯ ಆರಂಭದ ದಿನದಂದೆ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ನೀಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ದಾಖಲಾಗಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಶಾಲೆಯಿಂದ ಹೊರಗುಳಿದ ಮಕ್ಕಳು ಯಾರಾದರೂ ಇದ್ದರೆ ಅಂತಹವರ ಮನೆಗಳಿಗೆ ಭೇಟಿ ನೀಡಿ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಿದೆ ಎಂದು ಶಿಕ್ಷಕರುಗಳಿಗೆ ಹೇಳಿದರು.
ಗ್ರಾ.ಪಂ.ಸದಸ್ಯರುಗಳಾದ ತಿಮ್ಮಣ್ಣ, ಓಬಯ್ಯ, ಇಂಗಳದಾಳ್ ಗ್ರಾ.ಪಂ.ಉಪಾಧ್ಯಕ್ಷ, ಗ್ರಾ.ಪಂ.ಮಾಜಿ ಸದಸ್ಯರುಗಳಾದ ಉಮೇಶ್, ನಿಂಗಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಹುಲಿಕುಂಟೆ ರಾಮಪ್ಪ, ಇ.ಸಿ.ಓ.ಇನಾಯತ್, ಬಿ.ಆರ್.ಪಿ.ಗಳಾದ ಅನಿಲ್‍ಕುಮಾರ್ , ದೇವರಾಜು, ಸಿ.ಆರ್.ಪಿ. ಕೆ.ರೇವಣ್ಣ, ಮುಖ್ಯ ಶಿಕ್ಷಕ ಅಂಜಿನಪ್ಪ, ತಳವಾರ ಸಂಚಾಲಪ್ಪ ಪ್ರೌಢಶಾಲೆ ಮುಖ್ಯ ಶಿಕ್ಷಕ ಹೆಚ್.ಎಸ್.ಟಿ .ಸ್ವಾಮಿ, ದೈಹಿಕ ಶಿಕ್ಷಕಿ ಎಂ.ಎಸ್.ಲತ, ಎಸ್.ಡಿ.ಎಂ.ಸಿ.ಸದಸ್ಯೆ ಬಂಧಮ್ಮ, ಶಿಕ್ಷಕಿ ಅಪ್ಸಾನಾಭಾನು, ಬಿಲ್ ಕಲೆಕ್ಟರ್ ಮಂಜಣ್ಣ, ಊರಿನ ಗ್ರಾಮಸ್ಥರು, ಎಸ್.ಡಿ.ಎಂ.ಸಿ.ಸದಸ್ಯರು, ಗ್ರಾ.ಪಂ.ಸದಸ್ಯರುಗಳಾದ ನಾಗರಾಜು, ರಂಗಮ್ಮ, ನೀಲಮ್ಮ, ಲಕ್ಷ್ಮಿದೇವಿ ಈ ಸಂದರ್ಭದಲ್ಲಿ ಹಾಜರಿದ್ದರು.ಟ್ರಾಕ್ಟರ್‍ಗೆ ತಳಿರು ತೋರಣಗಳಿಂದ ಅಲಂಕರಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








