ಗುಬ್ಬಿ
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ತಮ್ಮ ಹಳ್ಳಿಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಹೆಚ್ಚಿನ ಮತದಾನ ಮಾಡುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವತ್ತ ಮುಂದಾಗಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಕೆ.ಆರ್.ಹೊನ್ನೇಶಪ್ಪ ಕರೆನೀಡಿದರು.
ಪಟ್ಟಣದ ಸ್ತ್ರೀಶಕ್ತಿಭವನದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕೆ ಹೊರತು ಯಾವುದೆ ಪಕ್ಷದ ಪರವಾಗಿ ಮತ ಪ್ರಚಾರ ಮಾಡದಂತೆ ತಿಳಿಸಿದರು.
ತಾವು ಕೂಡ ಮತವನ್ನು ಕಡ್ಡಾಯವಾಗಿ ಮಾಡುವ ಮೂಲಕ ಮತದಾನದ ಸಂಖ್ಯೆಯನ್ನು ಹೆಚ್ಚಿಸುವಂತೆ ತಿಳಿಸಿದ ಅವರು, ವಿಶೇಷ ಚೇತನರು ಮತ್ತು ವಯೋವೃದ್ಧರು ಮತದಾನ ಮಾಡಲು ಅನುಕೂಲವಾಗುವಂತೆ ಪ್ರತಿ ಮತಗಟ್ಟೆಗಳಲ್ಲಿ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದ್ದು ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ಅರಿವು ಮೂಡಿಸುವಂತೆ ತಿಳಿಸಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣಾಧಿಕಾರಿ ನಟರಾಜು ಮಾತನಾಡಿ, ಮಹಿಳೆಯರು, ವಿಶೇಷ ಚೇತನರು, ತೃತೀಯ ಲಿಂಗಿಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲು ತಿಳಿಸಿದರು ಹಾಗೂ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯನಿರ್ವಾಹಕ ಅಧಿಕಾರಿ ಕೊರಮತಿಮ್ಮಪ್ಪ ಮಾತನಾಡಿ, ಮತದಾನ ಮಾಡುವುದು ಪ್ರತಿಯೊಬ್ಬ ಮತದಾರರ ಕರ್ತವ್ಯ, ಎಲ್ಲರನ್ನು ಮತದಾನ ಮಾಡುವಂತೆ ಜಾಗೃತಿ ಮೂಡಿಸುವುದು ಎಲ್ಲಕ್ಕಿಂತ ಮಹತ್ವದ ಕಾರ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ರಮೇಶ್, ಸಿ.ಡಿ.ಪಿ.ಓ ಕಚೇರಿಯ ಮೇಲ್ವಿಚಾರಕಿಯರು, ಎಂ.ಆರ್.ಡಬ್ಲ್ಯೂ ಶಿವಗಂಗಮ್ಮ, ವಿ.ಆರ್.ಡಬ್ಲ್ಯೂ, ಸ್ವಯಂ ಸೇವಕರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
