ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಪಿಡಿಓ: ಗ್ರಾ..ಪಂ.ಗೆ ಬೀಗ

ತುಮಕೂರು:

     ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಸೇರಿದಂತೆ ಮತ್ತಿತರೆ ಕೆಲಸ ಕಾರ್ಯಗಳಿಗೆ ಪಿಡಿಓ ಸರಿಯಾಗಿ ಸ್ಪಂದಿಸದೆ ಏಕಪಕ್ಷೀಯ ಕೆಲಸ ಮಾಡುತ್ತಿರುವುದರ ವಿರುದ್ಧ ಜು.16 ರಂದು ಸಾರ್ವಜನಿಕರು ಪಂಚಾಯತಿ ಕಛೇರಿಗೆ ಬೀಗ ಜಡಿಯುವುದರ ಮೂಲಕ ಸದರಿ ಅಧಿಕಾರಿಯನ್ನು ವರ್ಗಾಯಿಸುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

     ಬೆಳಗುಂಬ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೋಹನ್ ಕುಮಾರ್ ಅವರು ಪಂಚಾಯತಿಯ ಗೌಪ್ಯತೆಯನ್ನು ಕಾಪಾಡದೆ ಅಧ್ಯಕ್ಷರು, ಉಪಾಧ್ಯಕ್ಷರ ಮಾತನ್ನೂ ಸಹ ಲೆಕ್ಕಿಸದೆ ಕಚೇರಿಯಲ್ಲಿರುವ ದಾಖಲೆಗಳನ್ನು ಬೇರೆಯವರಿಗೆ ನೀಡಿರುತ್ತಾರೆ. ಇದರ ಪರಿಣಾಮ ಜಿಲ್ಲಾ ಪಂಚಾಯತಿಯಿಂದ ವಿಶೇಷ ಲೆಕ್ಕ ತಪಾಸಣೆಗೆ ಬೆಳಗುಂಬ ಗ್ರಾ.ಪಂ.ನ್ನು ಒಳಪಡಿಸಿರುತ್ತಾರೆ.

     ಪ್ರತಿ ಗ್ರಾಮದಲ್ಲೂ ನೀರಿನ ಹಾಹಾಕಾರವಿದ್ದು, ಬೋರ್‍ವೆಲ್‍ಗಳು, ಮೋಟಾರ್‍ಗಳು ಸುಟ್ಟು ಹೋಗಿವೆ ಎಂದು ಸದರಿ ಅಧಿಕಾರಿಗಳಿಗೆ ಹಲವು ಬಾರಿ ಗಮನಕ್ಕೆ ತಂದಿದ್ದರೂ ಸಹ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಹಾಗೂ ನೀರಿನ ಟ್ಯಾಂಕರ್‍ನಲ್ಲಿ ನೀರು ಸರಬರಾಜು ಮಾಡುವವರಿಗೆ ಹಣ ಪಾವತಿದೇ ಇರುವುದರಿಂದ ಟ್ಯಾಂಕರ್‍ನವರು ನೀರು ಸರಬರಾಜು ಮಾಡುತ್ತಿಲ್ಲ. ಮತ್ತೊಂದು ವಿಶೇಷವೆಂದರೆ ಇಲ್ಲಿನ 2 ಬೋರ್‍ವೆಲ್‍ಗಳಲ್ಲಿ ನೀರಿದ್ದರೂ ಸಹ ನೀರು ಬರುತ್ತಿಲ್ಲ ಎಂದು ಸುಳ್ಳು ಹೇಳಿ ಟ್ಯಾಂಕರ್‍ನಲ್ಲಿ ನೀರು ಸರಬರಾಜು ಮಾಡುವವರಿಗೆ ಹಣ ನೀಡಿ ಪಂಚಾಯತಿಗೆ ನಷ್ಟ ಉಂಟು ಮಾಡಿರುತ್ತಾರೆಂದು ದೂರಿನಲ್ಲಿ ವಿವರಿಸಿದ್ದಾರೆ.

     ಪಂಚಾಯತಿ ಸದಸ್ಯ ಕಂ ನೀರು ವಿತರಕನಾಗಿ ಕೆಲಸ ಮಾಡುತ್ತಿರುವ ಲೋಕೇಶ್ ಎಂಬುವರು ಎಸ್ಸಿ ಕಾಲೋನಿಗೆ ನೀರು ಬಿಡದೆ ಅಸಡ್ಡೆ ತೋರಿದ್ದರೂ ಸಹ ಆತನ ಮೇಲೆ ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಮೇಲ್ಕಂಡ ಎಲ್ಲಾ ಕಾರಣಗಳಿಂದ ಗ್ರಾಮಸ್ಥರು ಬೇಸತ್ತು ಪಂಚಾಯತಿಗೆ ಬೀಜ ಜಡಿಯುವುದರ ಮೂಲಕ ಪಿಡಿಓ ಮೋಹನ್ ಕುಮಾರ್ ಅವರನ್ನು ಈ ಕೂಡಲೇ ಬೇರೆಗೆ ವರ್ಗಾಯಿಸುವಂತೆ ಇ.ಓ. ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link