ತುಮಕೂರು
ತುಮಕೂರು ನಗರದಲ್ಲಿ ಸಾರ್ವಜನಿಕರಿಗೆ ಅನಾವಶ್ಯಕ ತೊಂದರೆಯಾಗದಂತೆ ಸ್ಮಾರ್ಟ್ ಸಿಟಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಡಿ ಕೈಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪಿಡಬ್ಲ್ಯೂಡಿ ಹಾಗೂ ಆರೋಗ್ಯ ಇಲಾಖೆ ಮತ್ತಿತರ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ ಎಂದು ಲೋಕಾಯುಕ್ತರು ತಿಳಿಸಿದ ಹಿನ್ನೆಲೆಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ಅವರು ನಗರದಲ್ಲಿ ಸ್ಮಾರ್ಟ್‍ಸಿಟಿ ಯೋಜನೆ, ಗ್ಯಾಸ್‍ಲೈನ್, ಬೆಸ್ಕಾಂ, ಒಳಚರಂಡಿ ಕಾಮಗಾರಿ, ಹೀಗೆ ಹಲವು ಕಾಮಗಾರಿಗಳನ್ನು ಕೈಗೊಂಡಿರುವುದರಿಂದ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆ ಬಗೆಹರಿಸುವುದಕ್ಕಾಗಿ ಅಧಿಕಾರಿಗಳ ಸಮನ್ವಯ ಸಭೆಯನ್ನು ಪ್ರತಿ 15 ದಿನಕ್ಕೊಮ್ಮೆ ನಡೆಸಿ ಚರ್ಚಿಸಲಾಗುತ್ತಿದ್ದು, ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ ಎಂದು ತಿಳಿಸಿದರು.
ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದರಲ್ಲದೇ, ಶಿಕ್ಷಣ ಇಲಾಖೆಯಡಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ “ಅಂತರ್-ಶಾಲಾ ಕಾಲೇಜು” ಸ್ಪರ್ಧೆಗಳನ್ನು ಏರ್ಪಡಿಸುವಂತೆ ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಅಂತರ್ ಶಾಲಾ ಸ್ಪರ್ಧೆಗಳನ್ನು ಏರ್ಪಡಿಸಬೇಕು. ಇದರಿಂದ ಮಕ್ಕಳಲ್ಲಿರುವ ಪ್ರತಿಭೆ ಹೊರಹೊಮ್ಮಲು ಸಹಕಾರಿಯಾಗುತ್ತದೆ. ಪಠ್ಯತ್ತರ ಚಟುವಟಿಕೆಗಳಾದ ಟೆನಿಸ್ ಬಾಲ್, ರಸಪ್ರಶ್ನೆ, ಕ್ವಿಜ್‍ಗಳಂತ ಸ್ಪರ್ಧೆಗಳನ್ನು ಏರ್ಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ಅವರು ಶಿರಾ ತಾಲೂಕು ಭುವನಹಳ್ಳಿ ಹತ್ತಿರ ಈ ವಿದ್ಯಾರ್ಥಿಗಳಿಗೆ ಕ್ರೀಡಾ ತಾಲೀಮು ನಡೆಸಲು ಅನುಕೂಲವಾಗುವಂತೆ ಕ್ರೀಡಾ ಕಾಂಪ್ಲೆಕ್ಸ್(sಠಿoಡಿಣs ಛಿomಠಿಟex) ನಿರ್ಮಾಣಕ್ಕಾಗಿ 3 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ ಎಂದರು.
ನರೇಗಾ ಯೋಜನೆಯಡಿಯಲ್ಲಿ ಕೈಗೊಳ್ಳುವ ಚೆಕ್‍ಡ್ಯಾಂ, ಕೃಷಿ ಹೊಂಡ, ನಿರ್ಮಾಣದ ಬಗ್ಗೆ ಹಾಗೂ ಹಣ ಪಾವತಿಯ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಓ ಶುಭಾ ಕಲ್ಯಾಣ್ ಅವರಿಂದ ಮಾಹಿತಿ ಪಡೆದರು.
ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರಲ್ಲದೇ ಅಂಗನವಾಡಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯವನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು ಎಂದು ಅವರು ನಿರ್ದೇಶನ ನೀಡಿದರು. ತದನಂತರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ತುರ್ತು ಚಿಕಿತ್ಸಾ ಘಟಕ, ಹೊರ ರೋಗಿಗಳ ವಿಭಾಗ, ಶಸ್ತ್ರ ಚಿಕಿತ್ಸೆಗೊಳಗಾದ ರೋಗಿಗಳ ವಿಭಾಗ, ಪಿ.ಎನ್.ಸಿ ವಾರ್ಡ್, ಮಕ್ಕಳ ಆರೋಗ್ಯ ಪುನಶ್ಚೇತನ ಕೇಂದ್ರ, ಮಕ್ಕಳ ಹೆರಿಗೆ ವಾರ್ಡ್ ಸೇರಿದಂತೆ ಮತ್ತಿತರ ವಾರ್ಡ್‍ಗಳಿಗೆ ಭೇಟಿ ನೀಡಿ ಮೂಲ ಸೌಕರ್ಯದ ಬಗ್ಗೆ ಅವರು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಪಿಎನ್‍ಸಿ ವಾರ್ಡ್‍ಗೆ ಭೇಟಿ ನೀಡಿದ ಲೋಕಾಯುಕ್ತರು ಪ್ರತಿಯೊಂದು ಆಸ್ಪತ್ರೆಗಳಲ್ಲಿ ಪಿಎನ್‍ಸಿ ವಾರ್ಡ್ ಸೂಕ್ಷ್ಮವಾಗಿದ್ದು, ರೋಗಿಗಳ ಬಳಿ ಬರುವಾಗ ವೈದ್ಯರು ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಪಾದರಕ್ಷೆಗಳನ್ನು ವಾರ್ಡ್ ಹೊರಗಡೆ ಬಿಟ್ಟು ಬರಬೇಕು. ಯಾವುದೇ ಸೊಂಕು ಹರಡದಂತೆ ಎಚ್ಚರವಹಿಸಿ, ಸ್ವಚ್ಛತೆಯನ್ನು ಕಾಪಾಡಬೇಕು. ಎಂದರಲ್ಲದೇ ಪ್ರಸೂತಿ ತಜ್ಞರು ಗರ್ಭಿಣಿಯರಿಗೆ ಸಿಜರಿನ್ ಹೆರಿಗೆಗಿಂತ ಸ್ವಾಭಾವಿಕ ಹೆರಿಗೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು. ಜಿಲ್ಲಾಸ್ಪತ್ರೆಯಲ್ಲಿರುವ ಪ್ರತಿ ವಿಭಾಗದ ವೈದ್ಯರು ತಮ್ಮ ವಿಭಾಗಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಪಟ್ಟಿ ಮಾಡಿ ಈ ಸೌಲಭ್ಯಗಳನ್ನು ಒದಗಿಸುವಂತೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಹಣದ ಕೊರತೆಯಿಲ್ಲ. ಜಿಲ್ಲಾಸ್ಪತ್ರೆಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಿದರೆ ಒದಗಿಸುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಜಿಲ್ಲಾ ಪಂಚಾಯತ್ ಸಿಇಓ ಶುಭಾ ಕಲ್ಯಾಣ್, ಡಿವೈಎಸ್‍ಪಿ ರವೀಶ್ ಸೇರಿದಂತೆ ವೈದ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲೆಯಲ್ಲಿರುವ ಸರ್ಕಾರಿ ಹಾಸ್ಟೆಲ್‍ಗಳಿಗೂ ಭೇಟಿ ನೀಡಿದ ಲೋಕಾಯುಕ್ತರು ಹಾಸ್ಟೆಲ್‍ನಲ್ಲಿ ಕಲ್ಪಿಸಿರುವ ಸೌಕರ್ಯಗಳನ್ನು ಪರಿಶೀಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ