ಬಳ್ಳಾರಿಯಲ್ಲಿ ಸರ್ವಂ ಗಾಂಧಿಮಯಂ

ಬಳ್ಳಾರಿ

     ಹಿರಿಯರು ಯುವಜನರಿಗೆ ಗಾಂಧಿ ಜೀವನ ಚರಿತ್ರೆ ಮತ್ತು ತತ್ವಗಳನ್ನು ತಿಳಿಸುವ ಕೆಲಸವನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡಬೇಕು.ಯುವಜನರು ಗಾಂಧೀಜಿ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಗಾಂಧಿ ಅವರ ತತ್ವ ಪರಿಪಾಲನೆಯಾಗುತ್ತಿದೆಯಾ ಎಂದು ಒಮ್ಮೆ ಪ್ರಶ್ನಿಸಿಕೊಂಡು ಸಮಾಜದಲ್ಲಿರುವ ಪಿಡುಗುಗಳನ್ನು ಹೋಗಲಾಡಿಸಲು ಮುಂದಾಗಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಹೇಳಿದರು.

    ಜಿಲ್ಲಾಡಳಿತ,ಜಿಪಂ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಯೋಗದಲ್ಲಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಹಾತ್ಮಾಗಾಂಧೀಜಿ 150ನೇ ಜನ್ಮವರ್ಷಾಚರಣೆ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಗಾಂಧೀಜಿ ಅವರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿರುವ ಅಸ್ಪಶ್ಯತೆ, ಬಡತನ ನಿರ್ಮೂಲನೆ,ಅನಕ್ಷರತೆ ಸೇರಿದಂತೆ ವಿವಿಧ ರೀತಿಯ ಪೀಡುಗುಗಳನ್ನು ಹೊಗಲಾಡಿಸಲು ಪ್ರಯತ್ನಿಸುವ ಕೆಲಸವಾಗಬೇಕಿದೆ ಎಂಬುದನ್ನು ತಮ್ಮ ಮಾತುಗಳಲ್ಲಿ ಒತ್ತಿ ಹೇಳಿದ ಡಾ.ಕೆ.ವಿ.ರಾಜೇಂದ್ರ ಅವರು, ಗಾಂಧಿ ಬದುಕಿದ್ದರೆ ಇಂದಿನ ಯುವಜನರು ಸ್ವಾತಂತ್ರ್ಯ ಬಳಸಿಕೊಳ್ಳುತ್ತಿರುವುದನ್ನು ನೋಡಿ ಮರುಕ ಪಡುತ್ತಿದ್ದರು ಎಂದು ವಿಷಾದ ವ್ಯಕ್ತಪಡಿಸಿದ ಅವರು,

    ಸ್ವಚ್ಛ ಸಮಾಜದ ನಿರ್ಮಾಣಕ್ಕೆ ಪಣ ತೊಟ್ಟು ಸ್ವಾತಂತ್ರ್ಯ ಸ್ವೆಚ್ಛೆ ಅಲ್ಲ ಜವಾಬ್ದಾರಿ ಎಂಬುದನ್ನರಿತು ನಡೆಯಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಹೊನ್ನೂರ್ ಅಲಿ ಅವರು ಉಪನ್ಯಾಸ ನೀಡಿ, ಗಾಂಧೀಜಿ ಅರ್ಥವಾಗದಿದ್ದರೂ ನಿರಾಕರಿಸಲಾಗದಷ್ಟು ದೊಡ್ಡ ವ್ಯಕ್ತಿತ್ವವುಳ್ಳವರಾಗಿದ್ದರು. ಗಾಂಧೀಜಿ ಭಾರತೀಯರ ಮನಃ ಪರಿವರ್ತನೆ ಮಾಡಿ, ಬ್ರಿಟೀಷರ ಧೋರಣೆಗಳನ್ನು ವಿಮರ್ಶಿಸುತ್ತಿದ್ದರು ಎಂದರು.

     ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ ಅವರು ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ದೇಶದ ದೊಡ್ಡ ಮಹಾನುಭಾವರು. ಅವರು ತ್ಯಾಗ,ವಿವಿಧ ರೀತಿಯ ಹೋರಾಟಗಳ ಮೂಲಕ ದೇಶದ ಸ್ವಾತಂತ್ರ್ಯಕ್ಕೆ ನೀಡಿದ ಕೊಡುಗೆ ಬಹುದೊಡ್ಡದು ಎಂದರು. ಅಂತ ಮಹನೀಯರ ತ್ಯಾಗ,ಆದರ್ಶಗಳನ್ನು ನಮ್ಮ ಮಕ್ಕಳು ಮೈಗೂಡಿಸಿಕೊಂಡು ದೇಶದ ಅಭಿವೃದ್ಧಿಗೆ ಕಂಕಣಬದ್ಧರಾಗಬೇಕು ಎಂದರು.

     ವಿಧಾನಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ ಅವರು ಮಾತನಾಡಿದರು.ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ಅವರು ಗಾಂಧೀಜಿ ಅವರ ಅಪರೂಪದ ಛಾಯಾಚಿತ್ರಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು. ಕೆ.ದೊಡ್ಡ ಬಸಪ್ಪ ಮತ್ತು ಸಂಗಡಿಗರ ಗಾಂಧೀ ಪ್ರಿಯ ಭಜನ್‍ಗಳು ಗಮನ ಸೆಳೆದವು.*ಗಾಂಧೀಜಿ ಕಿರುಹೊತ್ತಿಗೆಗಳ ಅನಾವರಣ: ಮಹಾತ್ಮಗಾಂಧೀಜಿ ಅವರ ತತ್ವ ಸಂದೇಶಗಳಿರುವ ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕ ಹಾಗೂ ಪಾಪು ಗಾಂಧಿ ಬಾಪು ಗಾಂಧಿ ಆದ ಬಗೆ ಕಿರುಹೊತ್ತಿಗೆಗಳನ್ನು ಶಾಸಕರಾದ ಸೋಮಶೇಖರರೆಡ್ಡಿ ಮತ್ತು ಅಲ್ಲಂ ವೀರಭದ್ರಪ್ಪ ಅವರು ಬಿಡುಗಡೆ ಮಾಡಿದರು.

     ಈ ಕಿರುಹೊತ್ತಿಗೆಗಳಲ್ಲಿ ಗಾಂಧೀಜಿ ಹೋರಾಟ ನಡೆಸಿದ ಪರಿ, ಅವರು ಅನುಭವಿಸಿದ ಅವಮಾನಗಳು, ಎದುರಿಸಿದ ಸಂಕಷ್ಟಗಳು, ಸ್ವಾತಂತ್ರ್ಯ ಹೋರಾಟಕ್ಕಾಗಿ ಅನುಸರಿಸಿದ ಮಾರ್ಗ, ಆಹಿಂಸಾ ಮಾರ್ಗ ಮತ್ತು ಅವರ ಚಿಂತನೆಗಳು, ರಾಜ್ಯ ಸರಕಾರ ಗಾಂಧೀಜಿ ಮಾರ್ಗದಲ್ಲಿಯೇ ಸಾಗುತ್ತಿರುವ ಬಗೆ, ಗಾಂಧೀಜಿ ಜೀವನ ಮತ್ತು ಸಾಧನೆಗಳ ಕುರಿತು ಸಮಗ್ರ ಚಿತ್ರಣವನ್ನು ಇವುಗಳಲ್ಲಿ ಕಟ್ಟಿಕೊಡಲಾಗಿದೆ.

*ಗಮನಸೆಳೆದ ಛಾಯಾಚಿತ್ರ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ:       ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ಮಹಾತ್ಮಾ ಗಾಂಧೀಜಿ ಅವರ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ “ಗಾಂಧಿ ಕರ್ನಾಟಕದಲ್ಲಿ ಹೆಜ್ಜೆ…”ಗಮನಸೆಳೆಯಿತು.

     ಮೋಹನ್ ಕರಮ್‍ದಾಸ್ ಗಾಂಧಿ ಮಹಾತ್ಮಾಗಾಂಧಿಯಾದ ಬಗೆ… ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಹೋರಾಟ,ಬಿಳಿಯರೊಂದಿಗಿನ ಜಗಳ,ರೈಲಿನಿಂದ ಹೊರದಬ್ಬಿಸಿಕೊಂಡಿದ್ದು, ಅವರು ಅಲ್ಲಿ ನಡೆಸಿದ ಹೋರಾಟ, ನಂತರ ಮರಳಿ ಭಾರತಕ್ಕೆ ಬಂದ ನಂತರ ಆಹಿಂಸಾಮಾರ್ಗದಲ್ಲಿ ನಡೆಸಿದ ಹೋರಾಟಗಳು. ಕರ್ನಾಟಕದ ವಿವಿಧೆಡೆ ಭೇಟಿ ನೀಡಿ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟಗಳು ಹಾಗೂ ಬಳ್ಳಾರಿಗೂ ಭೇಟಿ ಕೊಟ್ಟಿದ್ದು ಸೇರಿದಂತೆ ವಿವಿಧ ರೀತಿಯ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಗಮನಸೆಳೆಯಿತು.

      ಈ ಛಾಯಾಚಿತ್ರ ಪ್ರದರ್ಶನಕ್ಕೆ ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ಅವರು ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ 2 ಸಾವಿರ ವಿದ್ಯಾರ್ಥಿಗಳು ಹಾಗೂ ಗಣ್ಯರು ಈ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವನ್ನು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ನಡೆದ ಗಾಂಧೀಜಿ ಜೀವನ ಮತ್ತು ಅವರು ನಡೆಸಿದ ಹೋರಾಟದ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಎಲ್ಲರ ಗಮನಸೆಳೆಯಿತು. ಈ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಲಾವಿದ ಮಂಜುನಾಥ ಗೋವಿಂದವಾಡ ಅವರ ರೇಖಾಚಿತ್ರಗಳು ಸಹ ಪ್ರದರ್ಶನಕ್ಕಿಡಲಾಗಿತ್ತು.

      ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅರುಣ್ ರಂಗರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿಪಂ ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ, ಮಹಾನಗರ ಪಾಲಿಕೆ ಮೇಯರ್ ಸುಶೀಲಾಬಾಯಿ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಪಾಲಿಕೆ ಆಯುಕ್ತ ಬಿ.ಎಚ್.ನಾರಾಯಣಪ್ಪ,ಸದಸ್ಯರಾದ ಪರ್ವೀನ್ ಬಾನು, ಬೆಣಕಲ್ ಬಸವರಾಜ್, ಮಲ್ಲನಗೌಡ, ದಿವ್ಯಕುಮಾರಿ ಮತ್ತಿತರರು ಇದ್ದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬಿ.ಕೆ.ರಾಮಲಿಂಗಪ್ಪ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ನಿರೂಪಿಸಿ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link