ತುಮಕೂರು:
ತುಮಕೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 22, ತಿಪಟೂರು ನಗರಸಭೆ, ಕುಣಿಗಲ್ ಮತ್ತು ಪಾವಗಡ ಪುರಸಭೆ, ತುರುವೇಕೆರೆ ಪಟ್ಟಣ ಪಂಚಾಯತಿಗೆ ಇಂದು ಚುನಾವಣೆ ನಡೆಯಲಿದೆ.
ಕುಣಿಗಲ್:
ಕುಣಿಗಲ್ ಪಟ್ಟಣದಲ್ಲಿ 23 ವಾರ್ಡ್‍ಗಳಿದ್ದು, 75 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್,ಜೆಡಿಎಸ್ ಮತ್ತು ಬಿಜೆಪಿ. ಮೂರು ಪಕ್ಷಗಳಿಂದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೆಚ್ಚು ಪೈಪೋಟಿ ಕಂಡುಬರುತ್ತಿದ್ದು, ಕೆಲವು ಕಡೆ ಬಿಜೆಪಿಯೂ ಸ್ಪರ್ಧೆಯೊಡ್ಡಿದೆ.
23 ವಾರ್ಡ್‍ಗಳಲ್ಲಿ ಬಹಳಷ್ಟು ಕಡೆ ಕಾಂಗ್ರೆಸ್ ಬಂಡಾಯ ಎದುರಿಸಬೇಕಾಗಿ ಬಂದಿದೆ. ಈಗಾಗಲೇ ಕೆಲವು ಕಡೆ ಕಾಂಗ್ರೆಸ್ಸಿಗರು ಅಸಮಾಧಾನಗೊಂಡು ಜೆಡಿಎಸ್‍ನತ್ತ ವಾಲಿದ್ದಾರೆ. ವಾರ್ಡ್ ನಂ.21, 20 ಹೆಚ್ಚು ಗಮನ ಸೆಳೆಯುವ ವಾರ್ಡ್‍ಗಳಾಗಿವೆ.
ತುರುವೇಕೆರೆ:
ತುರುವೇಕೆರೆ ಪಟ್ಟಣ ಪಂಚಾಯತಿಯಲ್ಲಿ 14 ವಾರ್ಡ್‍ಗಳಿದ್ದು, 53 ಜನ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮೂರೂ ಪಕ್ಷಗಳ ಅಭ್ಯರ್ಥಿಗಳಲ್ಲದೆ, ಪಕ್ಷೇತರರು ಸಹ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ತಿಪಟೂರು:
ಇಲ್ಲಿನ ನಗರಸಭೆಯಲ್ಲಿ ಒಟ್ಟು 31 ವಾರ್ಡ್‍ಗಳಿದ್ದು, ಒಟ್ಟು 134 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಲ್ಲಾ ಪಕ್ಷಗಳಿಂದಲೂ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕಳೆದ ಒಂದು ವಾರದಿಂದ ಚುನಾವಣಾ ಪ್ರಚಾರದ ಕಾವು ತೀವ್ರತೆ ಪಡೆದಿದ್ದು, ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರವಾಗಲಿದೆ. ಬಿಜೆಪಿ ನಗರಾಧ್ಯಕ್ಷರ ಪತ್ನಿ ಹಾಗೂ ಕಾಂಗ್ರೆಸ್ ನಗರಾಧ್ಯಕ್ಷರು ಸ್ಪರ್ಧೆಯಲ್ಲಿದ್ದು, ಗಮನ ಸೆಳೆದಿದ್ದಾರೆ.
ಪಾವಗಡ:
ಪಾವಗಡ ಪುರಸಭೆಯಲ್ಲಿ 23 ವಾರ್ಡ್‍ಗಳಿದ್ದು, ಕಾಂಗ್ರೆಸ್‍ನಿಂದ 23, ಜೆಡಿಎಸ್‍ನಿಂದ 23 ಹಾಗೂ ಬಿಜೆಪಿಯಿಂದ 12 ಮಂದಿ ಸ್ಪರ್ಧೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಈಗ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲ್ಲಾ ಕಡೆಯೂ ಬಿಜೆಪಿ ಸ್ಪರ್ಧೆಯೊಡ್ಡಿದ್ದರೆ, ಇಲ್ಲಿ ಎಲ್ಲ ವಾರ್ಡ್‍ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ಹೆಚ್ಚು ಸ್ಪರ್ಧೆ ಇಲ್ಲಿ ಕಾಣುತ್ತಿದೆ.
ತುಮಕೂರು ನಗರ:
ತುಮಕೂರು ನಗರದ 22ನೇ ವಾರ್ಡ್‍ಗೆ ಇಂದು ಚುನಾವಣೆ ನಡೆಯುತ್ತಿದೆ. ರವಿಕುಮಾರ್ ಕೊಲೆಯಾದ ಹಿನ್ನೆಲೆಯಲ್ಲಿ ತೆರವಾಗಿರುವ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಈ ವಾರ್ಡ್ ಅತ್ಯಂತ ಪ್ರತಿಷ್ಠಿತ ಎನ್ನಿಸಿಕೊಂಡಿದೆ. ಸಚಿವ ಎಸ್.ಆರ್.ಶ್ರೀನಿವಾಸ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮೊದಲಾದವರು ತಮ್ಮ ಅಭ್ಯರ್ಥಿಗಳ ಪರವಾಗಿ ಒಂದು ಸುತ್ತು ಪ್ರಚಾರ ಕೈಗೊಂಡಿದ್ದಾರೆ.
ಫಲಿತಾಂಶದ ಗುಂಗು:
17ನೇ ಲೋಕಸಭಾ ಚುನಾವಣೆಯ ಫಲಿತಾಂಶ ಮೇ 23 ರಂದು ಪ್ರಕಟವಾಯಿತು. ಇದಕ್ಕೂ ಮುಂಚಿತವಾಗಿಯೇ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ಪ್ರಕಟವಾಗಿತ್ತಾದರೂ ಲೋಕಸಭಾ ಚುನಾವಣೆಯ ಫಲಿತಾಂಶದ ಕಾತರ ಹಾಗೂ ಆನಂತರ ಸೋಲು ಗೆಲುವಿನ ಚರ್ಚೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಖದರ್ ಮರೆಯಾಗಿಬಿಟ್ಟಿತ್ತು. ಆದರೂ ರಾಜಕಾರಣಿಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವುದರಿಂದ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರ ರೂಪಿಸುವ ಪ್ರಕ್ರಿಯೆಗಳು ನಡೆದೇ ಇವೆ. ಇಂದು ಚುನಾವಣೆ ನಡೆಯುತ್ತಿದ್ದು, ಫಲಿತಾಂಶ ಏನಾಗಬಹುದು ಎಂಬ ಕುತೂಹಲದತ್ತ ರಾಜಕೀಯ ನಾಯಕರು ನೋಟ ಹರಿಸಿದ್ದಾರೆ.
ಕುಣಿಗಲ್, ಪಾವಗಡ ಪುರಸಭೆ, ತಿಪಟೂರು ನಗರ ಸಭೆ, ತುರುವೇಕೆರೆ ಪಟ್ಟಣ ಪಂಚಾಯತಿ, ತುಮಕೂರು ನಗರ 22ನೇ ವಾರ್ಡ್‍ಗೆ ಇಂದು ಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿರುವ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾ ಚುನಾವಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಹಾಗೂ ಮತ ಎಣಿಕೆಯ ದಿನ ಮೇ 31 ರಂದು ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ನಿಷೇಧ ಜಾರಿಯಲ್ಲಿರುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ