ದಾವಣಗೆರೆ:
ಸತ್ಯದ ಅನ್ವೇಷಣೆಯೇ ಕೃತಿಗಳ ಆಶಯವಾಗಿರಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ ಕುರ್ಕಿ ಪ್ರತಿಪಾದಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಜನಮಿಡಿತ ಪತ್ರಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆಳಗಳಮನೆ ಬೋಸಯ್ಯ ಪುಸ್ತಕಮಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಹಿರಿಯ ಸಾಹಿತಿ ಬಿ.ಟಿ.ಬೆಳಗಟ್ಟ ಅವರ ಕೃತಿಗಳ ಲೋಕಾರ್ಪಣೆ ಸಮಾರಂಭ, ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ಸುಗಮ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೂರ್ವಗ್ರಹ ಪೀಡಿತ ವಿಚಾರಗಳಿಂದ ಕೂಡಿರುವ ಸಾಹಿತ್ಯ ಕೃತಿಗಳನ್ನು ಯಾರೂ ಸಹ ಸ್ವೀಕರಿಸುವುದಿಲ್ಲ. ಹೀಗಾಗಿ ಸತ್ಯಾನ್ವಷಣೆಯೇ ಕೃತಿಗಳ ಆಶಯವಾಗಿರಬೇಕು. ಈ ನಿಟ್ಟಿನೊಳಗೆ ಬರಹಗಾರರು ಅನುಭಾವಕ್ಕೆ ಅಕ್ಷರ ರೂಪ ಕೊಟ್ಟು ಜನರ ಅರಿವಿನ ವಲಯವನ್ನು ವಿಸ್ತರಿಸುತ್ತಾ ಹೋಗಬೇಕೆಂದು ಕಿವಿಮಾತು ಹೇಳಿದರು.
ಇಂದು ತನ್ನನ್ನು ತಾನು ಅರಿಯುವ ಸಾಮಾಜಿಕ ಸಂವೇದನೆಯ ಕೃತಿಗಳು ಹೊರಬರಬೇಕಾದ ಅವಶ್ಯಕತೆ ಇದೆ ಎಂದ ಅವರು, ಸಮಾಜವನ್ನು ಉನ್ನತ ಸ್ತರಕ್ಕೆ ಕೊಂಡೊಯ್ಯಬಲ್ಲ ಮಾನವೀಯ ಸಂವೇದನೆಯುಳ್ಳ ಸಾಹಿತ್ಯ ಸೃಷ್ಟಿ ಮಾಡುವುದು ಇಂದಿನ ತುರ್ತಾಗಿದೆ ಎಂದರು.
ಇಂದಿನ ಜಾಗತೀಕರಣ ಯುಗದ ಮಾರುಕಟ್ಟೆ ಸಂಸ್ಕೃತಿಗೆ ಮಾರುಹೋಗಿರುವ ನಾವುಗಳು ನಮ್ಮತನವನ್ನೇ ಕಳೆದುಕೊಂಡಿದ್ದೇವೆ. ಅಲ್ಲದೇ, ಸಾಮಾಜಿಕ ಜವಾಬ್ದಾರಿಯನ್ನೂ ಸಹ ಮರೆತಿದ್ದೇವೆ. ಭಾವೈಕ್ಯತೆಯ ಬೆಸುಗೆ ಕಳಚಿದೆ. ನಾಗರೀಕ ಸಮಾಜ ನಿರ್ಮಿಸಲು, ಸಮಾಜದಲ್ಲಿ ಭಾವೈಕ್ಯತೆ ಬೆಸೆಯಲು ಹಾಗೂ ಜನರಲ್ಲಿ ವೈಚಾರಿಕ ದೃಷ್ಟಿಕೋನ ಬಿತ್ತಲು ಸಾಹಿತ್ಯ ಕೃಷಿ ನಡೆಯಲಿ ಎಂದು ಆಶಿಸಿದರು.
ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದ ಹಿರಿಯ ಜಾನಪದ ತಜ್ಞ ಹಾಗೂ ಸಾಹಿತಿ ಡಾ.ಎಂ.ಜಿ.ಈಶ್ವರಪ್ಪ ಮಾತನಾಡಿ, ಬಿ.ಟಿ.ಬೆಳಗಟ್ಟ ಅವರು ಪತ್ರಿಕೆಯಲ್ಲಿ ಪ್ರಕಟವಾದ ಕಥೆಗಳನ್ನು ಸಂಗ್ರಹಿಸಿ, ತಲಾ 10 ಕಥೆಗಳಂತೆ ನಾಲ್ಕು ಸಂಪುಟ ಹೊರತಂದಿದ್ದಾರೆ. ಒಂದಿಷ್ಟು ನನ್ನದು ಎಂಬ ಆತ್ಮಕಥೆಯ ಮೂಲಕ ದಲಿತ ಬಾಲಕನೊಬ್ಬ ಎದುರಿಸುವ ನೋವು, ಅಪಮಾನ, ಶೋಷಣೆಗಳನ್ನು ಚಿತ್ರಿಸಿದ್ದಾರೆ ಎಂದು ವಿಶ್ಲೇಷಿಸಿದರು.
ಪ್ರಸ್ತುತ ಮೊಬೈಲ್ ಹಾವಳಿಯ ದುಷ್ಫಲಗಳು ಶುರುವಾಗಿದ್ದು, ವಿವೇಕವಿಲ್ಲದ ವಿಜ್ಞಾನ ಅಪಾಯಕಾರಿ ಎಂಬುದಕ್ಕೆ ಸಾಕ್ಷಿಯಾಗಿದೆ. ಇಂತಹ ಸಂದರ್ಭದಲ್ಲಿ ಜನರು ಮತ್ತೆ ಪುಸ್ತಕ ಓದುವ ಸಂಸ್ಕೃತಿಗೆ ಮರಳುವ ದಿನ ದೂರವಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜನಮಿಡಿತ ಸಂಪಾದಕ ಜಿ.ಎಂ.ಆರ್.ಆರಾಧ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುಸ್ತಕಗಳ ಲೇಖಕ ಬಿ.ಟಿ.ಬೆಳಗಟ್ಟ, ಸಾಹಿತಿ ಓಂಕಾರಯ್ಯ ತವನಿಧಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಂತರ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಸಾಹಿತಿ ಕೆ.ಎನ್.ಸ್ವಾಮಿ ಉದ್ಘಾಟಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಹೆಚ್.ರಾಜಶೇಖರ್ ಗುಂಡಗಟ್ಟಿ ವಹಿಸಿದ್ದರು. ನಾಡಿನ ನಾನಾ ಭಾಗಗಳಿಂದ 20ಕ್ಕೂ ಹೆಚ್ಚಿನ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ, ಸ್ವ ರಚಿತ ಕವನ ವಾಚಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
