ದಾವಣಗೆರೆ:
ನಗರದ ಚೌಡೇಶ್ವರಿ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಡಿ-ವಲಯದಿಂದ ಲೋಕಕಲ್ಯಾಣಾರ್ಥ ಏರ್ಪಡಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿತು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಹೊಸದುರ್ಗ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿಯಲ್ಲಿ ಸರ್ಕಾರದ ಆಡಳಿತ ಯಂತ್ರ ಕೆಲಸ ಮಾಡಿದರೆ ಇಡೀ ರಾಜ್ಯ ರಾಮರಾಜ್ಯವಾಗುತ್ತದೆ. ಜನಸಾಮಾನ್ಯರ ಕಲ್ಯಾಣಕ್ಕಾಗಿ ಸರ್ಕಾರದ ಅನೇಕ ಯೋಜನೆಗಳು ಜಾರಿಗೆ ಬಂದರೂ ಸಹ ಯಶಸ್ವಿಯಾಗುವುದಿಲ್ಲ.
ಸರ್ಕಾರದ ಯೋಜನೆ, ಸೌಲಭ್ಯಗಳು ಜನರ ಕೈ ಸೇರುವ ಹೊತ್ತಿಗೆ ಸಾಕಷ್ಟು ಹಣ ಸೋರಿಕೆಯಾಗಿರುತ್ತದೆ. ಭ್ರಷ್ಟಾಚಾರದ ಕಾರಣದಿಂದ ಅರ್ಹರಿಗೆ ಸರ್ಕಾರಿ ಸವಲತ್ತುಗಳು ತಲುಪದೇ ಹೋಗುತ್ತವೆ. ಇಂತಹ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೈಗೊಳ್ಳುತ್ತಿರುವ ಸೇವಾ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿಯಾಗಿವೆ ಎಂದು ಅವರು ನುಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳು ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿವೆ. ಯೋಜನೆಯ ಕಾರ್ಯಕ್ರಮಗಳಲ್ಲಿ ಯಾವುದೇ ಭ್ರಷ್ಟಾಚಾರ, ಅವ್ಯವಹಾರಕ್ಕೆ ಅವಕಾಶವಿಲ್ಲದಂತೆ ಸುಸೂತ್ರವಾಗಿ ನಡೆಯಲು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಬದ್ಧತೆ, ನಿಷ್ಠೆ, ಪ್ರಾಮಾಣಿಕತೆಯೇ ಕಾರಣವಾಗಿದೆ. ರಾಜ್ಯಾದ್ಯಂತ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ, ಮಹಿಳೆಯರ ಮೂಲಕ ಎಲ್ಲ ಕುಟುಂಬಗಳಿಗೆ ಆರ್ಥಿಕ ಶಕ್ತಿ ಒದಗಿಸುವುದು ಶ್ಲಾಘನೀಯ ಕಾರ್ಯ ಎಂದರು.
ಉಪನ್ಯಾಸ ನೀಡಿದ ಸಾಹಿತಿ ಎಸ್.ಟಿ.ಶಾಂತಗಂಗಾಧರ ಮಾತನಾಡಿ, ವೈಯಕ್ತಿಕ ಒಳಿತಿಗಾಗಿ ಪೂಜೆ, ಧಾರ್ಮಿಕ ಆಚರಣೆ ಕೈಗೊಳ್ಳುವುದು ಸಹಜ. ಆದರೆ ಇಲ್ಲಿ ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ ಏರ್ಪಡಿಸಿರುವುದು ವಿಶೇಷವಾಗಿದೆ. ಜಗತ್ತಿಗೆ ಒಳಿತು ಬಯಸುವ ಇದುವೇ ನಿಜವಾದ ಧರ್ಮ.
ಜಾತಿ, ವರ್ಗ ಭೇದವಿಲ್ಲದೆ ಎಲ್ಲರಿಗೂ ನೆರವು ನೀಡುತ್ತಿರುವ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಯಾವುದೇ ಸರ್ಕಾರವೂ ಮಾಡದಂತಹ ಸೇವಾ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 500ಕ್ಕೂ ಅಧಿಕ ದಂಪತಿಗಳು ವ್ರತಧಾರಿಗಳಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಪೂಜಾ ಸಮಿತಿ ಅಧ್ಯಕ್ಷ ಸತೀಶ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯೋಗ ಒಕ್ಕೂಟದ ಕಾರ್ಯದರ್ಶಿ ವಾಸುದೇವ ರಾಯ್ಕರ್, ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಜಯಂತ ಪೂಜಾರಿ, ಅಣಬೇರು ಮಂಜಣ್ಣ, ಪದ್ಮಯ್ಯ, ಇ.ಎ.ಗಿರೀಶ, ನೇತ್ರಾವತಿ, ಗೀತಾ, ಚಂದ್ರಶೇಖರ ಕೆ.ಗಣಪ, ರಾಘವೇಂದ್ರ, ಸಲ್ಮಾಬಾನು, ಯಶೋಧ, ಲಕ್ಷ್ಮೀ, ಗಿರಿಜಾ, ವೀಣಾ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು
