ಚಿತ್ರದುರ್ಗ:
ಅಧಿಕಾರಕ್ಕಾಗಿ ಕಚ್ಚಾಡುವ ಬದಲು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲಿ ಎಡವಿದೆ. ಹೇಗೆ ಸರಿಪಡಿಸಿಕೊಳ್ಳಬೇಕು ಎನ್ನುವುದರ ಕಡೆ ಗಮನ ಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೇಶಕ್ಕೆ ಅಪಾಯವಿದೆ ಎಂದು ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ದೇಶದ ಉಪ ಪ್ರಧಾನಿ ಡಾ.ಬಾಬುಜಗಜೀವನರಾಂರವರ 33 ನೇ ಪುಣ್ಯತಿಥಿಯಲ್ಲಿ ಭಾಗವಹಿಸಿ ಮಾತನಾಡಿದರು.
ಇಲ್ಲಿಯವರೆಗೂ ಕಾಂಗ್ರೆಸ್ ಪಕ್ಷ ದೇಶದ ಜನರಿಗೆ ನೀಡಿರುವ ಕೊಡುಗೆಗಳನ್ನು ಬಾಯಿಂದ ಬಾಯಿಗೆ ಮುಟ್ಟಿಸುವಲ್ಲಿ ಕಾಂಗ್ರೆಸ್ ಸೋತಿದೆ. ಸುಳ್ಳು ಹೇಳಿಕೊಂಡು ಜನರನ್ನು ವಂಚಿಸಿ ಎರಡನೇ ಬಾರಿ ದೇಶದ ಪ್ರಧಾನಿಯಾಗಿರುವ ಮೋದಿ ಮಾಡುತ್ತಿರುವ ಮೋಸವನ್ನು ಯಾರು ಪ್ರಶ್ನಿಸುತ್ತಿಲ್ಲ. ನಮ್ಮ ನಾಯಕ ರಾಹುಲ್‍ಗಾಂಧಿ ಎ.ಐ.ಸಿ.ಸಿ.ಅಧ್ಯಕ್ಷ ಸ್ಥಾನ ತ್ಯಜಿಸಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತ ಹಾಗೂ ಮುಖಂಡರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.
ರಾಹುಲ್‍ರವರ ಜನಪರ ಹೋರಾಟಕ್ಕೆ ಬೆಂಬಲ ಸಿಗಲಿಲ್ಲ. ತ್ಯಾಗ ಬಲಿದಾನಗಳ ಮೂಲಕ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರದಿದ್ದಾರೆ ಗಂಡಾಂತರ ಕಾದಿದೆ. ಆರ್ಥಿಕ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ 27.86 ಲಕ್ಷ ಬಜೆಟ್ ಆರು ವರ್ಷದ್ದಲ್ಲ. ಇಲ್ಲಿಯವರೆಗೂ ದೇಶವನ್ನಾಳಿದ ಕಾಂಗ್ರೆಸ್ ಪಕ್ಷದ 73 ವರ್ಷದ ಬಜೆಟ್ ಎಂದು ಶ್ರೇಷ್ಟ ಅರ್ಥಶಾಸ್ತ್ರಜ್ಞರೊಬ್ಬರು ಹೇಳಿರುವುದನ್ನು ಬುದ್ದಿಜೀವಿಗಳು ಸೂಕ್ಷ್ಮವಾಗಿ ಗಮನಿಸಬೇಕು ಎಂದರು.
ಡಾ.ಬಾಬುಜಗಜೀವನರಾಂರವರು ಹಸಿರುಕ್ರಾಂತಿಯ ಹರಿಕಾರ ಎಂದೆನಿಸಿದರು. ದೇಶದ ಸ್ವಾತಂತ್ರಕ್ಕಾಗಿ ಹೋರಾಡಿ ತ್ಯಾಗ ಮಾಡಿದ್ದಾರೆ. ಡಂಬಾಚಾರ, ನಾಟಕವಾಡುವವರನ್ನು ದೇಶ ಒಪ್ಪಿಕೊಂಡಿದೆ. ಮುಸ್ಲಿಂರ ವಿರುದ್ದ ಹಿಂದುಗಳನ್ನು ಎತ್ತಿಕಟ್ಟುವ ಕೆಲಸ ಬಿಜೆಪಿ.ಮಾಡುತ್ತಿರುವುದರಿಂದ ಮುಂದೆ ಇಲ್ಲಿಯೂ ಮಾರಣ ಹೋಮವಾಗಬಹುದು. ಇವೆಲ್ಲವನ್ನು ವಿರೋಧಿಸಿದರೆ ಕಾಂಗ್ರೆಸ್ ಮುಸ್ಲಿಂರ ಪರ ಎಂದು ಹಣೆಪಟ್ಟಿ ಕಟ್ಟುತ್ತಾರೆ.
ನಾವು ಯಾರ ಪರವೂ ಅಲ್ಲ. ಮಾನವೀಯತೆ ಪರ. ಗಾಂಧಿಯನ್ನು ಕೊಂದ ನಾಥುರಾಂಗೋಡ್ಸೆಯನ್ನು ದೇಶಭಕ್ತ ಎಂದು ಆರ್.ಎಸ್.ಎಸ್. ಬಿಜೆಪಿ.ಯವರು ಹೇಳುವುದಾದರೆ ಕಾಂಗ್ರೆಸ್ ಸರ್ವನಾಶವಾದಂತಾಗುತ್ತದೆ. ರಾಹುಲ್‍ಗಾಂಧಿ ಬೇಸತ್ತು ಎ.ಐ.ಸಿ.ಸಿ. ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಗಾಂಧಿ ಕುಟುಂಬದಿಂದ ಮಾತ್ರ ಎ.ಐ.ಸಿ.ಸಿ.ಉಳಿಯಲು ಸಾಧ್ಯ.
ಕಾಂಗ್ರೆಸ್ ಸಾಧನೆಗಳನ್ನು ಮನೆ ಮನೆಗೆ ಮುಟ್ಟಿಸಿ ಕಾಂಗ್ರೆಸ್ ಕಟ್ಟುವ ವಿಚಾರದಲ್ಲಿ ಮೊದಲು ಎಲ್ಲರೂ ಒಂದಾಗೋಣ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ನೂಕು ನುಗ್ಗಲಿರುತ್ತದೆ. ಡಾ.ಬಾಬುಜಗಜೀವನರಾಂ ಪುಣ್ಯತಿಥಿಗೆ ಕೇವಲ ಬೆರಳೆಣಿಕೆಯಷ್ಟಿರುವುದು ನೋವಿನ ಸಂಗತಿ. ರಾಜ್ಯದಲ್ಲಿ ಪಕ್ಷ ಶೋಚನೀಯವಾಗಿದೆ.
ದಲಿತರು. ಮುಸ್ಲಿಂರಷ್ಟೆ ಪಕ್ಷದಲ್ಲಿ ಉಳಿದುಕೊಂಡಿದ್ದಾರೆನ್ನುವಂತಾಗಿದೆ. ಅಲ್ಪಸಂಖ್ಯಾತರು, ದಲಿತರಿಗೆ ಪಕ್ಷ ಯಾವ್ಯಾವ ಯೋಜನೆಗಳನ್ನು ಕೊಡುಗೆಯಾಗಿ ನೀಡಿದೆ ಎನ್ನುವುದನ್ನು ಮನೆ ಮನೆಗೆ ತಲುಪಿಸಬೇಕು. ಕಾರ್ಯಕರ್ತರು ಹಾಗೂ ಮುಖಂಡರುಗಳಲ್ಲಿ ಬದ್ದತೆ ಇದ್ದಾಗ ಮಾತ್ರ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಸಾಧ್ಯ ಎಂದು ತಿಳಿಸಿದರು.
ಡಾ.ಬಾಬುಜಗಜೀವನರಾಂರವರು ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿ ಹಸಿರುಕ್ರಾಂತಿಯ ಹರಿಕಾರ ಎಂದೆನಿಸಿಕೊಂಡಿದ್ದಾರೆ. ಮನಮೋಹನ್‍ಸಿಂಗ್, ಸಿದ್ದರಾಮಯ್ಯನವರ ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸಿ ಆರ್.ಎಸ್.ಎಸ್.ನಂತ ಕಟ್ಟಾಭಿಮಾನಿಗಳು ಕಾಂಗ್ರೆಸ್‍ನಲ್ಲಿ ಬರಬೇಕಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಕೆ.ಪಿ.ಸಂಪತ್‍ಕುಮಾರ್, ಕಾರ್ಯದರ್ಶಿ ಹೆಚ್.ಶಬ್ಬೀರ್‍ಭಾಷ, ಎ.ಪಿ.ಎಂ.ಸಿ.ಉಪಾಧ್ಯಕ್ಷ ಜಯಣ್ಣ, ಮುದಸೀರ್‍ನವಾಜ್, ಕೆ.ಪಿ.ಸಿ.ಸಿ.ಪರಿಶಿಷ್ಟ ಜಾತಿ ವಿಭಾಗದ ಸಂಚಾಲಕ ರವಿಕುಮಾರ್, ಎಸ್.ಸಿ.ವಿಭಾಗದ ಜಿಲ್ಲಾಧ್ಯಕ್ಷ ಡಿ.ರಾಜಣ್ಣ, ಚಾಂದ್‍ಪೀರ್, ನ್ಯಾಯವಾದಿ ರವೀಂದ್ರ, ಅಶೋಕ್‍ನಾಯ್ಡು, ಸೇವಾದಳದ ಇಂದಿರಾ ಇನ್ನು ಮುಂತಾದವರು ಡಾ.ಬಾಬುಜಗಜೀವನರಾಂರವರ ಪುಣ್ಯತಿಥಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
