ಬೆಂಗಳೂರು
ಬೆಂಗಳೂರಿನಲ್ಲಿ ಸದ್ಯದಲ್ಲಿಯೇ ಸೌದಿ ಅರೇಬಿಯಾ ಕಾನ್ಸುಲೇಟ್ ಕಚೇರಿ ಪ್ರಾರಂಭವಾಗುತ್ತಿರುವುದನ್ನು ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಸ್ವಾಗತಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ. ಅವರನ್ನು ಭೇಟಿ ಮಾಡಿದ್ದ ಸೌದಿ ಅರೇಬಿಯಾದ ರಾಯಭಾರಿ ಡಾ: ಸೌದಿ ಮಹಮ್ಮದ್ ಎ. ಅಲ್-ಸತಿ ಈ ವಿಷಯವನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದರು.
ಪ್ರವಾಸೋದ್ಯಮ ಹಾಗೂ ಮೂಲ ಸೌಲಭ್ಯ ಕ್ಷೇತ್ರದಲ್ಲಿ ರಾಜ್ಯದಲ್ಲಿ ವಿಪುಲ ಅವಕಾಶಗಳಿದ್ದು ಈ ನಿಟ್ಟಿನಲ್ಲಿ ಸೌದಿ ಅರೇಬಿಯಾ ಉದ್ಯಮಿಗಳು ಆಸಕ್ತಿ ತೋರಿದರೆ ಎಲ್ಲ ಸಹಕಾರವನ್ನು ನೀಡುತ್ತೇವೆ? ಎಂದ ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆಗೂ ಮುಂದಾಗುವಂತೆ ಸಲಹೆ ನೀಡಿದರು.
ಬೆಂಗಳೂರು ಮತ್ತು ಸೌದಿ ಅರೇಬಿಯಾ ನಡುವೆ ಪ್ರಯಾಣ ಮಾಡುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಸೌದಿ ಅರೇಬಿಯಾಗೆ ವೀಸಾ ಕೋರುವವರ ಸಂಖ್ಯೆಯೂ ದುಪ್ಪಟ್ಟುಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಕಾನ್ಸುಲೇಟ್ನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಸೌದಿ ಅರೇಬಿಯಾದ ರಾಯಭಾರಿಗಳು ಮುಖ್ಯಮಂತ್ರಿಗಳಿಗೆ ತಿಳಿಸಿದರು.
ಸೌಲತ್ ಉನ್ನಿಸಾ ಎಂಬ ಬೆಂಗಳೂರಿನ ಮಹಿಳೆ ಮೆಕ್ಕಾದಲ್ಲಿ 100 ವರ್ಷಗಳ ಹಿಂದೆ ಬಾಲಕಿಯರ ಶಾಲೆಯೊಂದನ್ನು ತೆರೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಲಭ್ಯವಿದೆ. ಅವರ ಪೂರ್ವಜರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ ಎಂಬ ವರದಿ ಇದೆ. ಅವರ ಬಗ್ಗೆ ಮಾಹಿತಿ ಒದಗಿಸಿದರೆ, ಅವರ ಕುಟುಂಬವನ್ನು ಗೌರವಿಸಲಾಗುವುದು ಎಂದು ಕಾನಸುಲೇಟ್ ಜನರಲ್ ತಿಳಿಸಿದರು. ಬೆಂಗಳೂರಿನ ಹವಾಮಾನ ಹಾಗೂ ಮೂಲಸೌಲಭ್ಯಗಳ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಆರ್.ರೋಷನ್ ಬೇಗ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ