ಪ್ಲೀಸ್ ಸೇವ್ ಬಂಡೀಪುರ’ ಹೆಸರಿನಲ್ಲಿ ಆನ್‍ಲೈನ್ ಅಭಿಯಾನ

ಬೆಂಗಳೂರು

         ಬಂಡೀಪುರ ಅಭಯಾರಣ್ಯದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದೆಂದು ವನ್ಯಜೀವಿ ಸಂರಕ್ಷಣಾ ಹೋರಾಟಗಾರರು ನಡೆಸುತ್ತಿರುವ ಆನ್‍ಲೈನ್ ಅಭಿಯಾನಕ್ಕೆ ನಗರದ ಫ್ರೀಡಂ ಪಾರ್ಕ್ ನಲ್ಲಿ ಸೇರಿದ್ದ ವನ್ಯಜೀವಿ ಸಂರಕ್ಷಣಾ ಹೋರಾಟಗಾರರು, ವಿವಿಧ ಕ್ಷೇತ್ರದ ಗಣ್ಯರು ಕೈಜೋಡಿಸಿದ್ದಾರೆ.

          ಈಗಾಗಲೇ ಆನ್‍ಲೈನ್ ಅಭಿಯಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭುತಪೂರ್ವ ಬೆಂಬಲ ದೊರಕಿದ್ದು ಈ ಹಿನ್ನಲೆಯಲ್ಲಿ ಶನಿವಾರ ನಡೆದ ಬಂಡೀಪುರ ಟ್ರಾಫಿಕ್ ಬೇಡ ಶೀರ್ಷಿಕೆಯ ಅಭಿಯಾನಕ್ಕೆ ಕೈ ಜೋಡಿಸಿದ ವನ್ಯಜೀವಿ ಸಂರಕ್ಷಣಾ ಹೋರಾಟಗಾರರು, ವಿವಿಧ ಕ್ಷೇತ್ರದ ಗಣ್ಯರು ಯಾವುದೇ ಕಾರಣಕ್ಕೂ ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಸ ನೀಡದಂತೆ ಆಗ್ರಹಿಸಿದರು.

         ಅಭಿಯಾನದಲ್ಲಿ ಪಾಲ್ಗೊಂಡಿದ್ದ ಪರಿಸರ ವಾದಿ ನಟ ಸುರೇಶ ಹೆಬ್ಳೀಕರ್ ಅವರು ಮಾತನಾಡಿ ಬೆಂಗಳೂರು ಸೇರಿದಂತೆ ಎಲ್ಲವೂ ಅಭಿವೃದ್ಧಿಗೆ ಪರಿಸರವೇ ಕಾರಣ.ಆದರೆ, ನಾವು ಪರಿಸರ ನಾಶ ಮಾಡುವುದು ಸರಿಯಲ್ಲ. ಬಂಡೀಪುರ ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ.ಈ ಹೋರಾಟಕ್ಕೆ ಯಶಸ್ಸು ದೊರೆಯಲಿದೆ ಎಂದರು.

           ಅಭಿಯಾನಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಪುನರಾರಂಭಿಸುವ ಬಗ್ಗೆ ಕೇಂದ್ರ ಸರ್ಕಾರದ ಮೂಲಕ ಕೇರಳ ರಾಜ್ಯ ಲಾಭಿ ಆರಂಭಿಸಿರುವ ವಿಷಯ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನ ಆರಂಭಿಸಿ, ಕೇರಳ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಇದಕ್ಕೆ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಅಭಿಯಾನದ ಮೂಲಕ ಒತ್ತಾಯಿಸಲಾಗುತ್ತಿದೆ.

ಸೇವ್ ಬಂಡೀಪುರ

           ಪ್ಲೀಸ್ ಸೇವ್ ಬಂಡೀಪುರ’ ಹೆಸರಿನಲ್ಲಿ ಆರಂಭಿಸಿರುವ ಅಭಿಯಾನದಲ್ಲಿ ಬಂಡೀಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಹೊತ್ತಿನಲ್ಲಿ ವಾಹನ ಸಂಚಾರ ನಿಷೇಧಿಸಿರುವ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದ್ದು ಈಗಾಗಲೇ ವಾಟ್ಸಪ್, ಫೇಸ್‍ಬುಕ್, ಟ್ವಿಟರ್ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಭಿಯಾನದ ಮನವಿಗೆ ಈವರೆಗೆ 24 ಸಾವಿರಕ್ಕೂ ಹೆಚ್ಚು ಮಂದಿ ಸಹಿ ಹಾಕಿ ಸಾಥ್ ನೀಡಿದ್ದಾರೆ. ಜತೆಗೆ ಈ ಸಂದೇಶವನ್ನು ತಮ್ಮ ಸ್ನೇಹಿತರು, ಕುಟುಂಬ ಸದಸ್ಯರು ಹೀಗೆ ಒಬ್ಬರಿಂದ ಒಬ್ಬರಿಗೆ ರವಾನಿಸಿ ಅಭಿಯಾನಕ್ಕೆ ಕೈಜೋಡಿಸುವಂತೆ ಕೋರಲಾಗಿದೆ.

         ಬಂಡೀಪುರ ಅಭಯಾರಣ್ಯ ಹುಲಿ ಸಂರಕ್ಷಣಾ ಪ್ರದೇಶವಾಗಿದ್ದು, ದೇಶದ ಅತಿ ದೊಡ್ಡ ಅರಣ್ಯಪ್ರದೇಶಗಳಲ್ಲಿ ಒಂದಾಗಿದೆ. ಹೀಗಾಗಿ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳಾದ (ಎನ್‍ಎಚ್-67 ಮತ್ತು ಎನ್‍ಎಚ್-212)ನಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸುವುದರಿಂದ ಅನೇಕ ಕಾಡು ಪ್ರಾಣಿಗಳ ಉಳಿವಿಗೆ ಕಾರಣವಾಗಿದೆ.

ಬಸ್‍ಗಳಿಗೆ ಅನುಮತಿ

         ಅಲ್ಲದೆ ಈ ಹಿಂದೆ ಹೈಕೋರ್ಟ್ ಆದೇಶದಂತೆ ಬಂಡೀಪುರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ಬಂದ್ ಮಾಡಲಾಗಿದೆ. ಹೀಗಿದ್ದರೂ ತುರ್ತು ವಾಹನಗಳು ಹಾಗೂ 16 ಸಾರಿಗೆ ಬಸ್‍ಗಳು ರಾತ್ರಿ ಹೊತ್ತಿನಲ್ಲಿ ಇದೇ ಮಾರ್ಗವಾಗಿ ಸಂಚರಿಸಲು ಅನುಮತಿ ನೀಡಲಾಗಿದೆ.

        ಅಲ್ಲದೆ ಇಲ್ಲಿನ ಹೆದ್ದಾರಿಗಳಲ್ಲಿ ರಾತ್ರಿ ವಾಹನ ಸಂಚಾರದಿಂದ ವನ್ಯಜೀವಿಗಳ ಸಾವಿನ ಬಗ್ಗೆ ಸಾಕಷ್ಟು ದಾಖಲೆಗಳು ಮತ್ತು ವೈಜ್ಞಾನಿಕ ಅಧ್ಯಯನಗಳು ಇವೆ. ಜತೆಗೆ ಬಂಡಿಪುರ – ನಾಗರಹೊಳೆ -ಮುದುಮಲೈನಲ್ಲಿ ನಡೆಸಿದ ವೈಜ್ಞಾನಿಕ ಅಧ್ಯಯನದಿಂದ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರದಿಂದ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ.

          ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದ ಮೇರೆಗೆ ರೂಪುಗೊಂಡ ವಿಶೇಷ ಸಮಿತಿ, ಬೆಳಗ್ಗೆ 6ರಿಂದ ಸಂಜೆ 6ರವರೆಗೆ ನಿಷೇಧಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಎಲ್ಲಾ ಕಾರಣಗಳಿಂದ ಕರ್ನಾಟಕದ ಹಿಂದಿನ ನಾಲ್ಕು ಮುಖ್ಯಮಂತ್ರಿಗಳು ಬಂಡೀಪುರ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಬೇಕೆಂಬ ನಿಲುವು ತೆಗೆದುಕೊಂಡಿದ್ದರು. ಈಗಲೂ ಮುಖ್ಯಮಂತ್ರಿ ಕುಮಾರಸ್ವಾಮಿ ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಬೇಕೆಂದು ಅಭಿಯಾನದ ಮೂಲಕ ಮನವಿ ಮಾಡಲಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap