ಜ್ಞಾನ ಹೆಚ್ಚಿಸಿಕೊಂಡು ಮಕ್ಕಳ ಆರೋಗ್ಯ ರಕ್ಷಿಸಿ..!

ದಾವಣಗೆರೆ:

     ವೈದ್ಯರು ಜ್ಞಾನ ಹೆಚ್ಚಿಸಿಕೊಂಡು ಮಕ್ಕಳ ಆರೋಗ್ಯ ರಕ್ಷಣೆ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಬೇಕೆಂದು ಮಕ್ಕಳ ವೈದ್ಯರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಶ್ರೀನಾಥ್ ಮುಗಳಿ ಕರೆ ನೀಡಿದರು.

       ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ನಡೆದ ಮಕ್ಕಳ ವೈದ್ಯರ ಸಂಘದ ರಾಜ್ಯ ಮಟ್ಟದ 38ನೇ ಹಾಗೂ ದಕ್ಷಿಣ ಭಾರತ ವಲಯದ 33ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಕಲಿಕೆಗೆ ವಯಸ್ಸಿನ ಯಾವುದೇ ಮಿತಿ ಇಲ್ಲ. ಕೆಲವು ವರ್ಷಗಳ ಹಿಂದೆ ವೈದ್ಯಕೀಯ ಕ್ಷೇತ್ರದಲ್ಲಿನ ನೂತನ ವಿಚಾರಗಳನ್ನು ಕಲಿಯಲು ವಿದೇಶಕ್ಕೆ ಹೋಗಬೇಕಾದ ಪರಿಸ್ಥಿತಿ ಇತ್ತು. ಆದರೆ, ಈಗ ಸಾಕಷ್ಟು ವೈದ್ಯಕೀಯ ಆವಿಷ್ಕಾರಗಳು ನಮ್ಮ ದೇಶದಲ್ಲೇ ನಡೆದಿದ್ದು, ಸ್ಥಳೀಯವಾಗಿಯೇ ವೈದ್ಯಕೀಯ ಕ್ಷೇತ್ರದಲ್ಲಿನ ತಂತ್ರಜ್ಞಾನವನ್ನು ಕಲಿಯುವ ಅವಕಾಶಗಳಿದ್ದು, ಇದರ ಸದುಪಯೋಗಹ ಪಡೆದುಕೊಂಡು ಜ್ಞಾನವನ್ನು ಹೆಚ್ಚಿಸಿಕೊಂಡು ಮಕ್ಕಳ ಆರೋಗ್ಯ ರಕ್ಷಣೆಗೆ ಮುಂದಾಗಬೇಕೆಂದು ಕಿವಿಮಾತು ಹೇಳಿದರು.

      ಎರಡು ದಶಕಗಳ ಹಿಂದೆ 18 ಸಾವಿರ ದೂರದಲ್ಲಿರುವ ವಿದೇಶಕ್ಕೆ ಹೋಗಿ ವೆಂಟಿಲೇಟರ್ ಕಲಿತು ಬಂದಿದ್ದೆ. ಆದರೆ, ಇಂದಿನ ಪರಿಸ್ಥಿತಿ ಬದಲಾಗಿದೆ. ಸ್ಥಳೀಯವಾಗಿ ಸೌಲಭ್ಯಗಳು ದೊರಕುತ್ತಿವೆ. ಅಲ್ಲದೇ, ಮಕ್ಕಳ ವೈದ್ಯರ ಸಂಘದಿಂದ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇವುಗಳಲ್ಲಿ ಭಾಗವಹಿಸಿ ವಿಷಯ ತಿಳಿದು ನಿಮ್ಮಲ್ಲಿರುವ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಈ ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೊಸ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

      ಕಲಿಕೆಗೆ ವಯಸ್ಸಿನ ಬೇಧವಿಲ್ಲ. ಹಿರಿಯ ವೈದ್ಯ ಮಿತ್ರರು ಈಗ ಆಪರೇಷನ್ ಮಾಡುವುದನ್ನು ಕಲಿತಿದ್ದಾರೆ. ಹೊಸದನ್ನು ಕಲಿಯುವ ಉತ್ಸಾಹ ಹೊಂದಿರಬೇಕು. ಇದು ಬಂದಲ್ಲಿ ವೃತ್ತಿ ಬದುಕಿನಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ಹೇಳಿದರು.

     ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ. ಎನ್.ಕೆ. ಕಾಳಪ್ಪನವರ್ ಮಾತನಾಡಿ, ದಕ್ಷಿಣ ಭಾರತ ಮತ್ತು ಕರ್ನಾಟಕ ಮಕ್ಕಳ ವೈದ್ಯರ ಸಂಘದ ವಾರ್ಷಿಕ ಸಮ್ಮೇಳನದಲ್ಲಿ ವಿವಿಧ ರಾಜ್ಯಗಳ ಸುಮಾರು 1200 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಹಲವಾರು ತಜ್ಞರು ಕೃತಕ ಉಸಿರಾಟ, ತುರ್ತು ಚಿಕಿತ್ಸೆ, ಆ?ಯಂಟಿಬಯಾಟಿಕ್ ಔಷಧಿಗಳ ಬಳಕೆ, ನವಜಾತ ಶಿಶುಗಳ ಜನನ ಸಂಬಂಧಿ ತೊಂದರೆಗಳ ನಿವಾರಣೆ, ಎದೆ ಹಾಲಿನ ಮಹತ್ವ ಇನ್ನಿತರ ವಿಷಯಗಳ ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದರು.

       ಇಂದು ಆಯೋಜಿಸಲ್ಪಟ್ಟ ಕಾರ್ಯಾಗಾರದಲ್ಲಿ 900 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ 90 ಜನರು ಪ್ರತಿನಿಧಿಗಳಾಗಿ ಆಗಮಿಸಿದ್ದಾರೆ. ತಾಯಿ ಮಗುವಿಗೆ ಎದೆಹಾಲುಣಿಸುವ, ತುರ್ತು ಚಕಿತ್ಸೆ ಇಂಥ ಹಲವಾರು ವಿಷಯಗಳ ಬಗ್ಗೆ ಉಪನ್ಯಾಸ ನಡೆಲಿದೆ ಎಂದು ತಿಳಿಸಿದರು.

     ಕಾರ್ಯಕ್ರಮದಲ್ಲಿ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಬಿ.ಮುರುಗೇಶ್, ಎಸ್.ಎಸ್. ವೈದ್ಯವಿಜ್ಞಾನ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಡಾ.ಬಿ.ಎಸ್.ಪ್ರಸಾದ್, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ಮಧು ಎಸ್. ಪೂಜಾರ್, ಡಾ.ಮೂಗನಗೌಡ ಪಾಟೀಲ್, ಡಾ.ಜಿ.ಎಸ್. ಲತಾ, ಡಾ. ನಾಗಮಣಿ ಅಗರವಾಲ್, ಡಾ. ಎಂ.ಬಿ. ಕೌಜಲಗಿ, ಐಎಪಿ ಜಿಲ್ಲಾ ಘಟಕ ಅಧ್ಯಕ್ಷ ಡಾ. ಬಸವಂತ ಕುಮಾರ್, ಕಾರ್ಯದರ್ಶಿ ಡಾ. ವರುಣ್ ಕುಸಗುರ್, ಡಾ. ಆರ್.ಚೈತಾಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

 

Recent Articles

spot_img

Related Stories

Share via
Copy link