ದಾವಣಗೆರೆ:
ಗಿಡಮೂಲಿಕೆಗೆ ಬೇಕಾಗಿರುವ ಅಪರೂಪದ ಔಷಧಿ ಸಸ್ಯ ಸಂಪತ್ತು ಇರುವ ಪಶ್ಚಿಮ ಘಟ್ಟಗಳ ಉಳಿವಿಗಾಗಿ ಸರ್ಕಾರ ತಕ್ಷಣವೇ ಮಾಧವ ಗಾಡ್ಗೀಳ್, ಕಸ್ತೂರಿರಂಗನ್ ವರದಿ ಜಾರಿಗೆ ತರಬೇಕೆಂದು ಚಿತ್ರದುರ್ಗ ಮಾದಾರ ಗುರುಪೀಠದ ಶ್ರೀಮಾದಾರ ಚನ್ನಯ್ಯ ಸ್ವಾಮೀಜಿ ಒತ್ತಾಯಿಸಿದರು.
ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಗುರುವಾರ ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕ ವತಿಯಿಂದ ಆಯೋಜಿಸಿರುವ ಮೂರು ದಿನಗಳ ರಾಷ್ಟ್ರೀಯ ಪಾರಂಪರಿಕ ವೈದ್ಯ ಸಮ್ಮೇಳನ ಹಾಗೂ ಮೂಲಿಕಾ ಉತ್ಸವದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಜೀವವೈವಿಧ್ಯದ ಜೊತೆಗೆ ಗಿಡಮೂಲಿಕೆಗೆ ಬೇಕಾಗಿರುವ ಅಮೂಲ್ಯ ಹಾಗೂ ಅಪರೂಪದ ಸಸ್ಯ ಸಂಪತ್ತಿಗೆ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯು ಆಶ್ರಯತಾಣವಾಗಿದೆ. ಆದ್ದರಿಂದ ಈ ಪಶ್ಚಿಮ ಘಟ್ಟಗಳ ಉಳಿವಿಗಾಗಿ ಸರ್ಕಾರವು ಮಾಧವ ಗಾಡ್ಗೀಳ್, ಕಸ್ತೂರಿರಂಗನ್ ವರದಿ ಜಾರಿಗೆ ತರುವ ಮೂಲಕ ದಿಟ್ಟ ಹೆಜ್ಜೆ ಇಡಬೇಕೆಂದು ಆಗ್ರಹಿಸಿದರು.
ಪ್ರವರ್ತ ಶ್ರೇಣಿಗೆ ಧಕ್ಕೆ ತರುವುದರಿಂದ ಇತ್ತೀಚೆಗೆ ಕೊಡುಗು ಜಿಲ್ಲೆಯಲ್ಲಿ ಸಂಭವಿಸಿರುವ ಅನಾಹುತವನ್ನು ನೋಡಿದ್ದೇವೆ. ಆದ್ದರಿಂದ ಈಗಲಾದರೂ ಸರ್ಕಾರ ಪಶ್ಚಿಮ ಘಟ್ಟಗಳ ಉಳಿವಿಗಾಗಿ ದಿಟ್ಟ ನಿರ್ಧಾರ ಕೈಗೊಳ್ಳಬೇಕೆಂದು ಸಲಹೆ ನೀಡಿದ ಅವರು, ಅಭಿವೃದ್ಧಿಯ ನೆಪದಲ್ಲಿ ನಡೆಯುತ್ತಿರುವ ಅರಣ್ಯ ನಾಶವನ್ನು ತಡೆಯಬೇಕೆಂದು ಮನವಿ ಮಾಡಿದರು.
ಅಭಿವೃದ್ಧಿಯ ಹೆಸರಿನಲ್ಲಿ ಎಗ್ಗಿಲ್ಲದೇ ಅರಣ್ಯನಾಶ ನಡೆಯುತ್ತಿರುವುದರಿಂದ ಔಷಧೀಯ ವನಸ್ಪತಿಗಳು ಸಹ ಹಾಳಾಗುತ್ತಿವೆ. ಪಾರಂಪರಿಕ ವೈದ್ಯ ಪದ್ಧತಿ ಉಳಿಯಬೇಕಾದರೆ, ಔಷಧೀಯ ಸಸ್ಯಗಳು ಹೇರಳವಾಗಿ ಸಿಗಬೇಕು. ಆದ್ದರಿಂದ ಅರಣ್ಯ ನಾಶಕ್ಕೆ ಕಡಿವಾಣ ಹಾಕುವ ಮೂಲಕ ಪಾರಂಪರಿಕ ವೈದ್ಯ ಪದ್ಧತಿಯ ಉಳಿವಿಗಾಗಿ ಔಷಧೀಯ ವನಸ್ಪತಿಗಳನ್ನು ಸಂರಕ್ಷಿಸೋಣ ಎಂದು ಕರೆ ನೀಡಿದರು.
ಹಿಂದಿನ ಕಾಲದಲ್ಲಿ ಹಳ್ಳಿಗೊಬ್ಬರಂತೆ ನಾಟಿ ವೈದ್ಯರು ಸಿಗುತ್ತಿದ್ದರು. ಆ ಹಳ್ಳಿಯ ಜನರ ಆರೋಗ್ಯದಲ್ಲಿ ಏನೇ ಏರುಪೇರಾದರೂ ಆ ನಾಟಿ ವೈದ್ಯರನ್ನೇ ಅವಲಂಬಿಸಿರುತ್ತಿದ್ದರು. ಅಲ್ಲದೆ, ಮನೆಯ ಹಿತ್ತಲಿನಲ್ಲೇ ಔಷಧೀಯ ಸಸ್ಯಗಳನ್ನು ಬೆಳೆದು ಸಣ್ಣಪುಟ್ಟ ಕಾಯಿಲೆಗಳಿಗೆ ಮನೆಯಲ್ಲಿಯೇ ಮದ್ದು(ಗಿಡಮೂಲಿಕೆ) ತಯಾರಿಸಿಕೊಳ್ಳುತ್ತಿದ್ದರು. ಆದರೆ, ಕಾಲಬದಲಾದಂತೆ ಇಂದಿನ ಆಧುನಿಕ ಯುಗದಲ್ಲಿ ನಗರ ಪ್ರದೇಶಗಳಲ್ಲಿರುವ ಬೃಹತ್ ಕಟ್ಟಡವುಳ್ಳ ಆಸ್ಪತ್ರೆಗಳು ಜನರನ್ನು ಆಕರ್ಷಿಸುತ್ತಿವೆ.
ಇಂತಹ ಕಾಲಘಟ್ಟದಲ್ಲಿ ಪಾರಂಪರಿಕ ವೈದ್ಯ ಪದ್ಧತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸಮಾಜ, ಸರ್ಕಾರದ ಮೇಲಿದೆ. ಹೀಗಾಗಿ ಎಲ್ಲರೂ ಇದಕ್ಕಾಗಿ ಪ್ರಯತ್ನಿಸಬೇಕೆಂದು ಕಿವಿಮಾತು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್.ಎ.ರವೀಂದ್ರನಾಥ ಮಾತನಾಡಿ, ಪ್ರಸ್ತುತ ಆರೋಗ್ಯ ಕ್ಷೇತ್ರವು ಉದ್ಯಮವಾಗಿ ಮಾರ್ಪಟ್ಟಿರುವ ಕಾರಣ, ಬಡವರು ಆಸ್ಪತ್ರೆಗೆ ಹೋಗಲು ಹಣಕಾಸಿನ ಸಮಸ್ಯೆ ಇದೆ. ಇಂಥಹ ಸಂದರ್ಭದಲ್ಲಿ ಸಾಮಾನ್ಯರಿಗೂ ಆರೋಗ್ಯ ಸೇವೆ ಕಡಿಮೆ ವೆಚ್ಚದಲ್ಲಿ ಸಿಗುವಂತಾಗಬೇಕಾದರೆ, ಪಾರಂಪರಿಕ ವೈದ್ಯ ಪದ್ಧತಿ ಮತ್ತಷ್ಟು ಬೆಳೆಯಬೇಕೆಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾಗರದ ದೇವಪ್ಪ, ಬಸವರಾಜ ಕೊಂಚಿಗೇರಿ, ಹಾಸನದ ಸತ್ಯನಾರಾಯಣಶೆಟ್ಟಿ ಅವರುಗಳಿಗೆ ಪಾರಂಪರಿಕ ವೈದ್ಯರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಡಾ.ಪ್ರಸನ್ನನಾಥ ಸ್ವಾಮೀಜಿ, ಪಂಚಮಸಾಲಿ ಶ್ರೀ ವಚನಾನಂದ ಸ್ವಾಮೀಜಿ, ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ಬಾಲಸುಬ್ರಹ್ಮಣ್ಯ ಗುರೂಜಿ, ಜಿ.ಹರಿರಾಮಮೂರ್ತಿ, ಡಾ.ಸತ್ಯನಾರಾಯಣ ಭಟ್, ನಿರ್ಮಲಕುಮಾರ ಅವಸ್ತಿ, ಡಾ.ದರ್ಶನ್ ಶಂಕರ್, ಡಿಎಫ್‍ಓ ಮಂಜುನಾಥ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲಾ ಮತ್ತಿತರರು ಉಪಸ್ಥಿತರಿದ್ದರು. ಪರಿಷತ್ ಅಧ್ಯಕ್ಷ ನೇರ್ಲಿಗೆ ಗುರುಸಿದ್ದಪ್ಪ ಪ್ರಾಸ್ತಾವಿಕ ಮಾತನಾಡಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
