ತುಮಕೂರು
ಎಸ್‍ಸಿ, ಎಸ್‍ಟಿ ನೌಕರರ ಮುಂಬಡ್ತಿ ಮೀಸಲಾತಿ ಅನುಷ್ಠಾನ ಆಗಲೇಬೇಕು ಆಗುತ್ತದೆ. ಅದರ ಜವಾಬ್ದಾರಿ ನನ್ನದು ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ಆಶ್ವಾಸನೆ ನೀಡಿದರು.
ನಗರದ ಎಸ್‍ಐಟಿ ಕಾಲೇಜಿನ ಬಿರ್ಲಾ ಸಭಾಂಗಣದಲ್ಲಿ ಸರ್ಕಾರಿ ಎಸ್‍ಸಿ, ಎಸ್‍ಟಿ ನೌಕರರ ಸಮನ್ವಯ ಸಮಿತಿ ವತಿಯಿಂದ ಜಿಲ್ಲೆಯ ನೂತನ ಸಚಿವರು ಹಾಗೂ ಶಾಸಕರಿಗೆ ಹಮ್ಮಿಕೊಳ್ಳಲಾಗಿದ್ದ ಅಬಿಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಐದಾರು ತಿಂಗಳಿಂದ ನನ್ನ ಹಿಂದೆ ಬಿದ್ದು ಅಭಿನಂದನಾ ಸಮಾರಂಭ ನಡೆಸಿದ್ದು ನನ್ನ ಕರ್ತವ್ಯವನ್ನು ನೆನೆಪಿಸುವ ಕಾರ್ಯ ನೌಕರರು ಮಾಡಿದ್ದಾರೆ. ನನ್ನ ಮೇಲಿನ ಪ್ರೀತಿ, ವಿಶ್ವಾಸ, ಗೌರವ ಇಟ್ಟಿದ್ದಕ್ಕೆ ನಾನು ಆಭಾರಿಯಾಗಿರುತ್ತೇನೆ. ಎಸ್‍ಸಿ,ಎಸ್‍ಟಿ ನೌಕರರ ಹಿಂಬಡ್ತಿಯಿಂದ ಅನ್ಯಾಯವಾಗಿರುವ ನೌಕರರಿಗೆ ನ್ಯಾಯ ದೊರಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಂಬಡ್ತಿ ಮೀಸಲಾತಿ ಅನುಷ್ಠಾನಗೊಳಿಸುವುದು ನನ್ನ ಜವಾಬ್ದಾರಿಯಾಗಿದೆ ಎಂದರು.
ಐದು ಸಾವಿರ ವರ್ಷಗಳ ಹಿಂದಿನಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಶೋಷಣೆಗೆ ಒಳಪಟ್ಟಿದ್ದಾರೆ. ಅದರ ಬದಲಾವಣೆ ಮಾಡುವುದು ಅತ್ಯವಶ್ಯ. ಬದಲಾವಣೆ ಆಗಲು ಸ್ವಲ್ಪ ಸಮಯ ಬೇಕು. ನಮಗೆ ಎಲ್ಲವೂ ಬೇಗನೆ ಆಗಬೇಕು ಎಂಬ ಬಯಕೆ ಇದೆ. ಆಗದೆ ಹೋದರೆ ಹೋರಾಟಗಳನ್ನು ಮಾಡುತ್ತೇವೆ. ಹೋರಾಟ ಮಾಡುವುದು ನಮ್ಮ ಹಕ್ಕು. ನಮ್ಮ ಸಮುದಾಯ ಅಭಿವೃದ್ಧಿಯಾಗುತ್ತಿಲ್ಲ ಎಂದಾಗ ಹೋರಾಟ ಮಾಡಬೇಕು.
ಪ್ರತಿ ವಿಷಯದಲ್ಲೂ ಹೋರಾಟ ಮಾಡುತ್ತಾ ಹೋದರೆ ಯಾವ ಪ್ರಯೋಜನವು ಆಗುವುದಿಲ್ಲ ಎಂದರಲ್ಲದೆ, 1985ರಲ್ಲಿ ಸಿದ್ದಾರ್ಥ ಶಿಕ್ಷಣ ಸಂಸ್ಥೆಗೆ ಅಂದಿನ ರಾಷ್ಟ್ರಪತಿ ಜೈಲ್‍ಸಿಂಗ್ ಭೇಟಿ ನೀಡಿದಾಗ ಹರಿಜನರು ಅಭಿವೃದ್ಧಿಯಾಗಬೇಕಾದರೆ ಮೊದಲು ಶಿಕ್ಷಣ ಪಡೆಯಬೇಕು, ಅಧಿಕಾರಿಗಳಾಗಬೇಕು, ಜನಪ್ರತಿನಿಧಿಗಳಾಗಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದಿದ್ದನ್ನು ನೆನಪಿಸಿದ ಪರಮೇಶ್ವರ್ ನಾವು ಇತ್ತೀಚೆಗೆ ಅಭಿವೃದ್ಧಿಯಾಗುತ್ತಿದ್ದೇವೆ. ನಮ್ಮ ಸಮುದಾಯದವರೆ ಸರ್ಕಾರಿ ನೌಕರರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದರು.
ಶೋಷಿತ ಸಮುದಾಯದವರು ಮೀಸಲಾತಿ ಕೇಳುವುದಕ್ಕೆ ಕಾರಣವಿದೆ. ನಮ್ಮಲ್ಲಿ ಅರ್ಹರಿದ್ದೇವೆ. ನಮಗೂ ನೌಕರಿ ಕೊಡಿ, ಪ್ರೋತ್ಸಾಹ ನೀಡಿ ಎಂದು ಕೇಳುತ್ತಿದ್ದೇವೆ ಹೊರತು ಇನ್ನೊಬ್ಬರ ಕೆಲಸವನ್ನು ಕಸಿಯುತ್ತಿಲ್ಲ. ಅಷ್ಟನ್ನು ಕೇಳುವ ಹಕ್ಕು ನಮಗಿಲ್ಲವೆ. ಕಳೆದ 71 ವರ್ಷದಲ್ಲಿ ವಿವಿಧ ಸಮುದಾಯಗಳಿಂದ ಮುಖ್ಯಮಂತ್ರಿಗಳಾಗಿದ್ದೀರಿ. ಈಗ ದಲಿತ ಸಮುದಾಯದವರು ಉಪಮುಖ್ಯಮಂತ್ರಿಯಾದರೆ ಸಹಿಸಲಾರರು ಎಂದರೆ ಎಷ್ಟು ಅಸಮಾಧಾನ ಇರಬಹುದು ಎಂದು ಮಾರ್ಮಿಕವಾಗಿ ನುಡಿದರು. ಅಲ್ಲದೆ ಎಲ್ಲರೂ ನನ್ನನ್ನು ಶಾಂತಸ್ವರೂಪಿ ಎನ್ನುತ್ತಾರೆ.
ನೀರು ಶಾಂತ ಇದ್ದಷ್ಟು ಇನ್ಯಾರು ಇರುವುದಿಲ್ಲ. ಅದೇ ರೀತಿ ಕೋಪ ಬಂದರೆ ಎಂತಹ ಕಲ್ಲುಬಂಡೆಗಳು ಸಹ ಪುಡಿಪುಡಿಯಾಗುತ್ತವೆ. ಹಾಗೆಯೇ ನಾನು ನೋಡಲು ಶಾಂತವಾಗಿಯೇ ಇರುತ್ತೇನೆ. ಆದರೆ ಸಮಯಕ್ಕೆ ತಕ್ಕಂತೆ ಹೇಗೆ ವರ್ತನೆ ಮಾಡಬೇಕು ಎಂಬುದು ನನಗೆ ತಿಳಿದಿದೆ. ಯಾವ ಅಧಿಕಾರಿಗಳಿಂದ ಹೇಗೆ ಕೆಲಸ ಮಾಡಿಸಬೇಕು ಎಂಬುದನ್ನು ಅರಿತಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಕಾರ್ಮಿಕ ಸಚಿವ ವೆಂಕಟರವಣಪ್ಪ, ಇಂದಿನ ದಿನಗಳಲ್ಲಿ ನಮ್ಮನಮ್ಮಲ್ಲಿಯೇ ಎಡಗೈ, ಬಲಗೈ ಎಂದು ಭೇದ ಭಾವ ಮಾಡುತ್ತಾರೆ. ಮೊದಲು ಅದನ್ನು ನಿರ್ಮೂಲನೆ ಮಾಡಿ ನಮ್ಮಲ್ಲಿ ಸಮಾನತೆ ಬರಬೇಕು. ಎಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿ ಬರಬೇಕು.
ಸರ್ಕಾರಿ ನೌಕರರಲ್ಲಿ ಸಾಮಾಜಿಕ ಅನ್ಯಾಯವಾಗಿದೆ. ಬಡ್ತಿ ಮೀಸಲಾತಿಯಿಂದ ಸುಮಾರು ಅಧಿಕಾರಿಗಳು ತಮ್ಮತಮ್ಮ ಕೆಲಸದಿಂದ ಹಿಂದಕ್ಕೆ ಇಳಿದಿದ್ದಾರೆ. ಇದು ಕೇವಲ ನೌಕರರಲ್ಲಿ ಮಾತ್ರವಲ್ಲದೆ ರಾಜಕಾರಣದಲ್ಲೂ ಕೂಡ ಅನ್ಯಾಯವಾಗಿದೆ. ಖಾತೆಗಳನ್ನು ಹಂಚಬೇಕಾದರೆ ಇತರ ಸಮುದಾಯದವರಿಗೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ. ಇಲ್ಲಿ ನಮ್ಮ ಸಮುದಾಯದವರಿಗೆ ಮನ್ನಣೆ ಸಿಕ್ಕಿಲ್ಲ.
ಎಲ್ಲಾ ರೀತಿಯಲ್ಲೂ ಎಸ್‍ಸಿ,ಎಸ್‍ಟಿ ಸಮುದಾಯಕ್ಕೆ ಅನ್ಯಾಯವಾಗಿದೆ. ನಾವು ನ್ಯಾಯಕ್ಕಾಗಿ ಎಲ್ಲರೂ ಸೇರಿಕೊಂಡು ಹೋರಾಟ ಮಾಡಬೇಕಿದೆ. ನಮಗೆ ಅಧಿಕಾರ ಶಾಶ್ವತವಲ್ಲ ನಾವು ಮಾಡಿದ ಕೆಲಸಗಳು ಮಾತ್ರ ಶಾಶ್ವತ ಎಂದರು.
ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ನಮ್ಮ ದೇಶಕ್ಕೆ ಕರ್ನಾಟಕ ಮಾದರಿ ರಾಜ್ಯವಾಗಿದೆ. ರಾಜರ ಕಾಲದಿಂದಲೂ ನಮ್ಮ ಸಮುದಾಯದವರಿಗೆ ಮೀಸಲಾತಿ ನೀಡಲಾಗಿದೆ. ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಇದ್ದಾಗಲೇ ಅಸ್ಪಶ್ಯರು ಸಂಸ್ಕøತ ಓದಿಕೊಳ್ಳಲು ಅನುವು ಮಾಡಿಕೊಟ್ಟಿದ್ದರು. ವಿದ್ಯಾಭ್ಯಾಸ ಮಾಡಲು ವಿವಿಧ ಸೌಲಭ್ಯಗಳನ್ನು ನೀಡಿದ್ದರು. ಆದರೆ ಸ್ವಾತಂತ್ರ ಬಂದ ನಂತರ ನಮ್ಮ ಜನಾಂಗದ ಒಬ್ಬ ನಾಯಕನನ್ನು ನಾವು ಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ.
71 ವರ್ಷಗಳ ನಂತರ ಡಾ.ಜಿ.ಪರಮೇಶ್ವರ್‍ರವರು ಉಪಮುಖ್ಯಮಂತ್ರಿಯಾಗಿದ್ದು ನಮಗೆ ಹೆಮ್ಮೆಯ ವಿಷಯವೇ ಆದರೂ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡುವುದು ನಮ್ಮ ಕರ್ತವ್ಯ. ಕೆಪಿಸಿಸಿಯಲ್ಲಿ ದೀರ್ಘಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಸಾರ್ವತ್ರಿಕ ಚುನಾವಣೆಯಲ್ಲಿ ತಾವು ಸೋಲನ್ನು ಅನುಭವಿಸಿದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವಲ್ಲಿ ಹೆಚ್ಚಿನ ಶ್ರಮ ವಹಿಸಿದ್ದಾರೆ ಎಂದು ಪರಮೇಶ್ವರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತುಮಕೂರು ಲೋಕಸಭಾ ಸದಸ್ಯ ಎಸ್.ಪಿ.ಮುದ್ದಹನುಮೇಗೌಡ, ಚಿತ್ರದುರ್ಗ ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ, ಮಾತನಾಡಿ, ಅರ್ಹತೆ, ಹೋರಾಟ, ಅನುಭವ ಹೊಂದಿರುವ ಡಾ.ಜಿ.ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಗಳಾಗಿರುವುದು ನಮಗೆ ಹೆಮ್ಮೆಯ ವಿಷಯ. ಅವರಿಗೆ ಶತ್ರುಗಳು ಎಷ್ಟೇ ಇದ್ದರೂ ಅವರನ್ನು ಕ್ಷಮಿಸುವ ಗುಣವನ್ನು ಹೊಂದಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವ ವೆಂಕಟರವಣಪ್ಪ, ಶಾಸಕ ಜ್ಯೋತಿಗಣೇಶ್, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಎಸ್‍ಪಿ ದಿವ್ಯಾ ವಿ ಗೋಪಿನಾಥ್, ಜಿಪಂ ಸಿಇಒ ಅನ್ನಿಸ್ ಕಣ್ಮಣಿ ಜಾಯ್ ಮತ್ತಿತರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್‍ಸಿ, ಎಸ್‍ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ್ ಪ್ರಾಸ್ತಾವಿಕ ನುಡಗಳನ್ನಾಡಿದರು. ಜಿ.ಪಂ ಉಪಾಧ್ಯಕ್ಷೆ ಶಾರದ ನರಸಿಂಹಮೂರ್ತಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ನ್ಯಾ.ಬಾಬಾಸಾಹೇಬ್ ಜಿನರಾಳ್ಕರ್ ಸೇರಿದಂತೆ ಸಮನ್ವಯ ಸಮಿತಿಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆರಂಭದಲ್ಲಿ ಅರುಣ್ ಮತ್ತು ತಂಡದವರಿಂದ ಗಾಯನ ಕಾರ್ಯಕ್ರಮ ನಡೆಯಿತು. ಸಮಿತಿ ಅಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ಸ್ವಾಗತಿಸಿ ವಂದಿಸಿದರು.
ಡಾ.ಜಿ.ಪರಮೇಶ್ವರ್ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ನಾನು ಇನ್ನು 9ನೇತರಗತಿ ಓದುತ್ತಿದ್ದೆ. ಅವರು ಎಸ್ಟೀಮ್ ಕಾರನ್ನು ತಾವೇ ಚಲಾಯಿಸಿಕೊಂಡು ಬರುತ್ತಿದ್ದರು. ಅವರ ನೆನಪುಗಳು ಇಂದಿಗೂ ಇವೆ. ನಂತರದಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಗಳಾಗಿದ್ದಾಗ ಪರಮೇಶ್ವರ್ ಅವರು ಶಿಕ್ಷಣ ಸಚಿವರಾಗಿದ್ದಾಗ ಅವರಲ್ಲಿ ಟಿಸಿಎಚ್,ಬಿಎಡ್ ಕಾಲೇಜಿಗೆ ಮನವಿ ಮಾಡಿದ್ದೆವು. ಅವರ ಸಹಾಯದಿಂದಲೇ ನಾವು ಕಾಲೇಜು ಪ್ರಾರಂಭಿಸಿ ಇಂದು ಉನ್ನತ ಮಟ್ಟಕ್ಕೆ ಬೆಳೆದಿದ್ದೇವೆ.
ಜಿ.ಬಿ.ಜ್ಯೋತಿ ಗಣೇಶ್, ಶಾಸಕ
ಸಮಾರಂಭದಲ್ಲಿ ನಿರೂಪಣೆ ಮಾಡುತ್ತಿದ್ದ ನೌಕರರು ಗಣ್ಯರು ಅತಿಥಿಗಳ ಬಗ್ಗೆ ಹೆಚ್ಚಾಗಿ ಹೇಳುತ್ತಿರುವಾಗ ಮಧ್ಯದಲ್ಲಿ ಮಾತನಾಡಿದ ಕಾರ್ಮಿಕ ಸಚಿವ ವೆಂಕಟರವಣಪ್ಪ, ಸಾಹೆಬ್ರೇ, ನೀವು ಮಾತಾಡೋದು ಬಿಟ್ಟು, ಕಾರ್ಯಕ್ರಮಕ್ಕೆ ಬಂದ ಗಣ್ಯರಿಂದ ಮಾತನಾಡಿಸಿ ಎಂದು ಜೋರಾಗಿಯೇ ಹೇಳಿಬಿಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ