ತುಮಕೂರು
ಲೋಕಸಭಾ ಚುನಾವಣೆಯ ಮುನ್ನಾದಿನವಾದ ಬುಧವಾರ ಜಿಲ್ಲಾ ಕೇಂದ್ರವೂ ಆದ ತುಮಕೂರು ನಗರದಲ್ಲಿ ಜನಸಂಚಾರ, ಬಸ್‍ಗಳ ಸಂಚಾರ ಕ್ಷೀಣವಾಗಿದ್ದುದು ಕಂಡುಬಂದಿತು.
ಗುರುವಾರ ನಡೆಯುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್‍ಗಳನ್ನು ಚುನಾವಣಾ ಕಾರ್ಯಕ್ಕೆ ಗರಿಷ್ಟ ಪ್ರಮಾಣದಲ್ಲಿ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ, ಬುಧವಾರ ಬಸ್‍ಗಳ ಲಭ್ಯತೆ ಕಡಿಮೆಯಾಗಿದೆ. ಇರುವ ಬಸ್‍ಗಳೇ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿವೆ.
ಹೀಗಾಗಿ ಪ್ರಯಾಣಿಕರ ಸಂಖ್ಯೆಯೂ ಇಳಿಮುಖವಾಗಿದೆ. ಲಭ್ಯ ಬಸ್‍ಗಳಲ್ಲೇ ಪ್ರಯಾಣಿಕರ ದಟ್ಟಣೆ ಕಂಡುಬಂದಿದೆ. ಬಸ್‍ಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಯಿತು. ಬುಧವಾರ ತುಮಕೂರು ನಗರದ ಅಶೋಕ ರಸ್ತೆಯಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಕಂಡುಬಂದ ದೃಶ್ಯವಿದು.
ಇದೇ ಅಶೋಕ ರಸ್ತೆಯಲ್ಲಿರುವ ಖಾಸಗಿ ಬಸ್ ನಿಲ್ದಾಣದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ನಿಲ್ದಾಣದ ತುಂಬ ಖಾಸಗಿ ಬಸ್‍ಗಳು ಇದ್ದವು. ಬಸ್‍ಗಳು ಹೋಗಿ- ಬರುತ್ತಿದ್ದವು. ಆದರೆ ಇವುಗಳಲ್ಲೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು.
ಕಲ್ಯಾಣ ಮಂಟಪಗಳ ಮೇಲೂ ಪರಿಣಾಮ:
ನಗರದ ಕಲ್ಯಾಣ ಮಂಟಪಗಳಲ್ಲಿ ನಡೆಯುತ್ತಿದ್ದ ವಿವಾಹಗಳ ಮೇಲೂ ಚುನಾವಣೆಯ ಬಿಸಿ ತಟ್ಟಿದ್ದುದು ಮೇಲ್ನೋಟಕ್ಕೆ ಕಂಡುಬಂದಿತು. ವಿವಾಹ ನಡೆಯುವ ಕಲ್ಯಾಣ ಮಂಟಪಗಳಲ್ಲಿ ಸಾಮಾನ್ಯವಾಗಿ ಜನಜಂಗುಳಿ ಇರುತ್ತಿತ್ತು. ಆದರೆ ಈಗ ಚುನಾವಣೆಯ ಮುನ್ನಾದಿನವೇ ವಿವಾಹ ಏರ್ಪಟ್ಟಿರುವುದರಿಂದ ಆಗಮಿಸುವವರ ಸಂಖ್ಯೆಯಲ್ಲಿ ಇಳಿಮುಖ ಆಗಿರುವುದು ಗೋಚರಿಸುತ್ತಿತ್ತು. ಜನರು ಚುನಾವಣೆಯ ಕೆಲಸದಲ್ಲಿ ಕಾರ್ಯತತ್ಪರರಾಗಿದ್ದರೆ ಅಂಥವರು ಪರಸ್ಥಳಗಳಿಂದ ಬರಲಾಗಿಲ್ಲ.
ಬಸ್‍ಗಳ ಕೊರತೆ ಇರುವುದರಿಂದ ಅನೇಕ ಜನರು ಬರಲಾಗುತ್ತಿಲ್ಲ. ಲಭ್ಯವಿರುವ ಬಸ್‍ಗಳಲ್ಲಿ ಅಥವಾ ರೈಲುಗಳಲ್ಲಿ ಪರಸ್ಥಳಗಳಿಂದ ಬಂದು -ಹೋಗಬೇಕಿದ್ದು, ವಾಹನಗಳಲ್ಲಿ ನೂಕುನುಗ್ಗಲು ಉಂಟಾದೀತೆಂದು ಜನರು ಮನೆಗಳಲ್ಲೇ ಉಳಿಯುವಂತಾಗಿದೆ. ಇವೆಲ್ಲ ಕಾರಣಗಳಿಂದ ವಿವಾಹಗಳಲ್ಲಿ ಜನಸಂದಣಿ ಕ್ಷೀಣವಾಗಿತ್ತು ಎಂದು ಹೇಳಲಾಗುತ್ತಿದೆ.
ಗುರುವಾರ ಅಂದರೆ ಮತದಾನದ ದಿನದಂದು ನಿಶ್ಚಯವಾಗಿರುವ ವಿವಾಹಗಳಲ್ಲಿನ ವಾತಾವರಣವೂ ಇದಕ್ಕಿಂತ ಭಿನ್ನವಾಗಿ ಇರಲಾರದು ಎನ್ನಲಾಗುತ್ತಿದೆ.ರೈಲು ಪ್ರಯಾಣದಲ್ಲಿ ಯಾವುದೇ ವ್ಯತ್ಯಯ ಆಗದಿರುವುದರಿಂದ ಹಾಗೂ ಬಸ್‍ಗಳ ಕೊರತೆ ಉಂಟಾಗಿರುವುದರಿಂದ ತುಮಕೂರು ನಗರದ ರೈಲು ನಿಲ್ದಾಣದಲ್ಲಿ ಹೆಚ್ಚಿನ ಜನಸಂಚಾರ ಇತ್ತು. ನಗರದ ಮೂಲಕ ಸಂಚರಿಸುವ ರೈಲುಗಳಲ್ಲಿ ಬುಧವಾರ ಜನದಟ್ಟಣಿ ಅಧಿಕವಾಗಿದ್ದುದು ಕಂಡುಬಂದಿತು.