ಬೆಳಗುಂಬ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ…!!!

ತುಮಕೂರು
       
          ಜಿಲ್ಲಾ ಕೇಂದ್ರ ತುಮಕೂರು ನಗರಕ್ಕೆ ಹೊಂದಿಕೊಂಡಿರುವ ಬೆಳಗುಂಬ ಗ್ರಾಮ ಪಂಚಾಯ್ತಿಯ ಎಲ್ಲಾ ಹಳ್ಳಿಗಳಲ್ಲೂ  ಕುಡಿಯುವ ನೀರಿಗೆ ಹಾಹಾಕಾರ. ಸುಮಾರು ನಾಲ್ಕು ತಿಂಗಳಿನಿಂದ ಗ್ರಾಮ ಪಂಚಾಯ್ತಿ ಗ್ರಾಮಸ್ಥರಿಗೆ ಸಮರ್ಪಕವಾಗಿ ನೀರು ವಿತರಿಸಿಲ್ಲ. ಇಲ್ಲಿ ಕೊಳವೆಬಾವಿ ಅವಲಂಬಿಸಿ ಕುಡಿಯುವ ನೀರು ಪೂರೈಸುವ ವ್ಯವಸ್ಥೆಯಿದೆ. ಆದರೆ, ಬೇಸಿಗೆಯಲ್ಲಿ ಕೊಳವೆ ಬಾವಿ ಬತ್ತಿಹೋಗಿ ನೀರಿಗೆ ಬರ ಬರುತ್ತದೆ. ಈಗ ಬೇಸಿಗೆ ಆರಂಭದಲ್ಲೇ ಬರದ ಅನುಭವವಾಗಿದೆ.  
         ತುಮಕೂರಿನ ಭಾಗವಾಗಿ ಬೆಳವಣಿಗೆಯಾಗುತ್ತಿರುವ ಬೆಳಗುಂಬ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ವರ್ಷ ವರ್ಷಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದೆ, ಜನ ಕೂಡಾ ನಗರ ಮಾದರಿಯ ಸೌಕರ್ಯ ಬಯಸುತ್ತಿದ್ದಾರೆ. ಈ ಸ್ಥಿತಿಯಲ್ಲಿ ಗ್ರಾಮಪಂಚಾಯ್ತಿ ಕುಡಿಯುವ ನೀರು ಪೂರೈಸಲೂ ಪರದಾಡುವ ಪರಿಸ್ಥಿತಿ ಇದೆ.
          ತುಮುಕೂರು ನಗರದ ಭಾಗವಾಗೇ ಇರುವ ಬೆಳಗುಂಬದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಹೇಮಾವತಿ ನೀರು ಪೂರೈಕೆಯೇ ಶಾಶ್ವತ ಪರಿಹಾರ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ. ತುಮಕೂರಿಗೆ ಬಂದಿರುವ ಹೇಮಾವತಿ ನೀರನ್ನು ಬೆಳಗುಂಬಕ್ಕೂ ವಿಸ್ತರಿಸಬೇಕು, ಇಂದಲ್ಲಾ ನಾಳೆ ಬೆಳಗುಂಬ ಕೂಡಾ ತುಮಕೂರು ನಗರ ವ್ಯಾಪ್ತಿಗೆ ಸೇರಲಿದೆ ಎಂಬ ಅಭಿಪ್ರಾಯಪಡುತ್ತಾರೆ ಸದ್ಯದ ಬೆಳಗುಂಬ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ನೀರಿಗೆ ತೀವ್ರ ಹಾಹಾಕಾರ ಶುರುವಾಗಿದೆ.
 
         ನೀರಿಗಾಗಿ ಜನ ಅದೆಷ್ಟೇ ಅರ್ಜಿ ಕೊಟ್ಟರೂ ಗ್ರಾಪಂ ಆಡಳಿತ ನೀರಿನ ಲಭ್ಯತೆ ಇಲ್ಲ ಎಂದು ಕೈ ಚೆಲ್ಲಿ ಕುಳಿತಿದೆ. ಹೀಗಾಗಿ ಜನ ನಿತ್ಯಾ ದುಬಾರಿ ಹಣ ನೀಡಿ ಟ್ಯಾಂಕರ್ ನೀರು ಖರೀದಿಸಿ ಬಳಸುವಂತಾಗಿದೆ.ಯಾವುದೇ ಗ್ರಾಮದಲ್ಲೂ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು, ನೀರಿನ ಸಮಸ್ಯೆಯನ್ನು 24 ಗಂಟೆಗಳೊಳಗೆ ಬಗೆಹರಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಲತಾ ರವಿಕುಮಾರ್, ಸಿಇಓ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಕಡಕ್ ಎಚ್ಚರಿಕೆ ನೀಡಿದ್ದರೂ ಬೆಳಗುಂಬ ಗ್ರಾಮ ಪಂಚಾಯ್ತಿಯಲ್ಲಿ ಈ ಆದೇಶ ಪಾಲನೆ ಆಗಿಲ್ಲ. ತಿಂಗಳುಗಳಾದರೂ ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸುಧಾರಣೆಯಾಗಿಲ್ಲ.
 
       ಪಂಚಾಯ್ತಿಯ ಆರು ಕೊಳವೆ ಬಾವಿಗಳ ಪೈಕಿ ಮೂರು ಸಂಪೂರ್ಣ ಬತ್ತಿಹೋಗಿವೆ, ಉಳಿದ ಮೂರರಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೊಸದಾಗಿ ಕೊರೆದ ಬಾವಿಗಳೂ ವಿಫಲವಾಗಿ ಪರಿಸ್ಥಿತಿ ಬಿಗಡಾಯಿಸಿದೆ. ಬೇಸಿಗೆ ಆರಂಭದಲ್ಲೇ ಹೀಗಾದರೆ, ಮುಂದಿನ ದಿನಗಳಲ್ಲಿ ನೀರಿನ ಸ್ಥಿತಿ ಇನ್ನೆಷ್ಟು ಹದಗೆಡಬಹುದು.  
   
         ಗ್ರಾಮಸ್ಥರಿಗೆ ಕುಡಿಯುವ ನೀರು ಕೊಡಬೇಕಾದ್ದು ಗ್ರಾಮಪಂಚಾಯ್ತಿ ಜವಾಬ್ದಾರಿ. ಬೋರ್‍ವೆಲ್ ಬತ್ತಿ ಹೋಗಿದೆ, ನೀರಿನ ಲಭ್ಯತೆ ಇಲ್ಲ ಎಂದು ನೆಪ ಹೇಳುವುದನ್ನು ಬಿಟ್ಟು ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕಾದ್ದು ಗ್ರಾಪಂ ಕರ್ತವ್ಯ.
ಇತ್ತೀಚೆಗೆ ಕೊರೆದ ನಾಲ್ಕೈದು ಕೊಳವೆ ಬಾವಿಗಳು ನೀರು ಸಿಗದೆ ವಿಫಲವಾಗಿವೆ.
         ಅಷ್ಟಕ್ಕೇ ಸುಮ್ಮನಾದ ಅಧಿಕಾರಿಗಳು ಪರ್ಯಾಯ ಮಾರ್ಗ ಹುಡುಕುವ ಪ್ರಯತ್ನ ಮಾಡಲಿಲ್ಲ ಎಂದು ಗ್ರಾಮಸ್ಥರು ಆಪಾದನೆ ಮಾಡಿದ್ದಾರೆ. ಒಂದೆರಡು ದಿನಗಳಲ್ಲಿ ಬೆಂಗಳೂರಿನಿಂದ ಜಿಯಾಲಜಿಸ್ಟ್ ಕರೆಸಿ ಪಾಯಿಂಟ್ ಮಾಡಿಸಿ ಬೋರ್ ಕೊರೆಸುತ್ತೇವೆ ಎನ್ನುವ ಅಧಿಕಾರಿಗಳು ಹೇಳಿಕೊಂಡು ದಿನದೂಡುತ್ತಿದ್ದಾರೆ.
          ಬೆಳಗುಂಬ ಸುತ್ತಮುತ್ತಲ ರೈತರ ತೋಟಗಳಲ್ಲಿ ಕೊರೆಯುವ ಬೋರ್‍ವೆಲ್‍ಗಳಲ್ಲಿ ನೀರು ಸಿಗುತ್ತದೆ ಆದರೆ ಗ್ರಾಮಪಂಚಯ್ತಿ ಕೊರೆಸುವ ಕೊಳವೆ ಬಾವಿಗಳ್ಲಿ ನೀರು ಸಿಗೊಲ್ಲ ಎಂದರೆ ಹೇಗೆ, ತಜ್ಞರಿಂದ ನೀರಿನ ಪಾಯಿಂಟ್ ಗುರುತಿಸಿ ಬೋರ್ ಕೊರೆದು ನೀರು ವಿತರಿಸಲಿ ಎಂಬುದು ಸ್ಥಳೀಯರ ಒತ್ತಾಯ. 
          ತುರ್ತು ಸಂದರ್ಭದಲ್ಲಿ ಖಾಸಗಿಯವರಿಂದ ನೀರು ಖರೀದಿಸಿ ಜನರಿಗೆ ವಿತರಿಸಲು ಸಿದ್ದ, ಆದರೆ ಇಲಾಖೆ ನಿಗಧಿಪಡಿಸುವ ದರಕ್ಕೆ ಯಾರೂ ನೀರು ಕೊಡಲು ಮುಂದೆ ಬರುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಒಂದು ದಿನಕ್ಕೆ 650 ರೂ ಪಡೆದು ನೀರು ಕೊಡಲು ಯಾವ ಖಾಸಗಿ ಬೋರ್‍ವೆಲ್‍ನವರು ಒಪ್ಪುತ್ತಿಲ್ಲ. ಹೀಗಾಗಿ, ನೀರು ಖರೀದಿಸಿ ಸರಬರಾಜು ಮಾಡುವ ಪ್ರಯತ್ನ ಬಿಟ್ಟು ಬೋರ್‍ವೆಲ್ ಕೊರೆದು ನೀರು ತೆಗೆದು ವಿತರಿಸುವ ಬಗ್ಗೆ ಗಮನ ಹರಿಸಲಾಗುತ್ತಿದೆ. ಹೊಸ ಬೋರ್‍ವೆಲ್ ಕೊರೆದ ನಂತರ ನೀರಿನ ಸಮಸ್ಯೆಯನ್ನು ತಕ್ಕಮಟ್ಟಿಗೆ ನಿವಾರಿಸಲಾಗುದು ಎಂದು ಅಧಿಕಾರಿಗಳು ಹೇಳುತ್ತಾರೆ.
          ಬೆಳಗುಂಬದಲ್ಲಿ ಹಾಲಿ ಇರುವ ಬೋರ್‍ವೆಲ್‍ಗಳಲ್ಲಿ ಹೆಚ್ಚಿನವು ಒಣಗಿವೆ, ಮೂರರಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದೆ. ಐಓಬಿ ಬ್ಯಾಂಕ್ ಬಳಿ ಬೋರ್ ಕೊರೆಯಲು ಪಾಯಿಂಟ್ ಮಾಡಲಾಗಿದೆ. ಎರಡು ಮೂರು ದಿನದಲ್ಲಿ ಕೊರೆಯಲಾಗುತ್ತದೆ. ಇಲ್ಲಿ 1200 ಅಡಿ ಆಳ ಕೊರೆದರೂ ನೀರು ಸಿಕ್ಕುತ್ತಿಲ್ಲ, ಅಂತರ್ಜಲ ಕುಸಿದಿದೆ. ಇಡೀ ಗ್ರಾಮಪಂಚಾಯ್ತಿಗೆ ಟ್ಯಾಂಕರ್ ಮೂಲಕ ನೀತ್ಯ ನೀರು ಸರಬರಾಜು ಮಾಡುವುದು ತೀರಾ ದುಬಾರಿಯಾಗುತ್ತದೆ. ಕೊಳವೆ ಬಾವಿ ಕೊರೆದು ಅಂತರ್ಜಲದ ನೀರನ್ನೇ ಪಡೆದು ಬಳಸಬೇಕಾದ ಅನಿವಾರ್ಯತೆ ಇದೆ.
-ಲಲಿತೇಶ್ವರ್, ಎಇಇ, ನೀರು ಸರಬರಾಜು ಇಲಾಖೆ
         ಎರಡು ತಿಂಗಳಿನಿಂದ ಬೆಳಗುಂಬ ಗ್ರಾಮಪಂಚಾಯ್ತಿಯ ಎಲ್ಲಾ ಗ್ರಾಮಗಳಲ್ಲೂ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ವಡ್ಡರಹಳ್ಳಿ, ಕುಂದೂರಿನಲ್ಲಿ ಕೊರೆದ ಬೋರ್‍ವೆಲ್‍ಗಲ್ಲಿ ನೀರು ಸಿಕ್ಕಿಲ್ಲ. ನೀರಿನ ಲಭ್ಯತೆ ಗುರುತಿಸಿ, ಹೊಸ ಕೊಳವೆ ಬಾವಿ ಕೊರೆದು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
          ಚಾಲ್ತಿಯಲ್ಲಿರುವ ಪಂಚಾಯ್ತಿಯ ಮೂರು ಬೋರ್‍ವೆಲ್‍ಗಳ್ಲಿ ನೀರಿನ ಲಭ್ಯತೆ ಕಮ್ಮಿಯಾಗಿದೆ. ಲಭ್ಯ ನೀರನ್ನು ಸಂಗ್ರಹಿಸಿ ಎಲ್ಲಾ ಗ್ರಾಮಗಳಿಗೆ ವಾರಕ್ಕೊಮ್ಮೆ ಸದ್ಯಕ್ಕೆ ವಿತರಿಸಲಾಗುತ್ತಿದೆ.
-ಮೋಹನ್‍ಕುಮಾರ್, ಪಿಡಿಓ, ಬೆಳಗುಂಬ ಗ್ರಾಪಂ
         -ಗ್ರಾಮ ಪಂಚಾಯ್ತಿಯಿಂದ ನೀರು ವಿತರಿಸಿ ನಾಲ್ಕು ತಿಂಗಳಾಯಿತು. ಆ ಭಗದಲ್ಲಿ ಕೊಟ್ಟಿದ್ದೇವೆ, ಈ ಭಾಗದಲ್ಲಿ ಕೊಡುತ್ತಿದ್ದೇವೆ ಎಂದು ಪಂಚಾಯ್ತಿ ಸಿಬ್ಬಂದಿ ಹೇಳುತ್ತಿದ್ದಾರಾದರೂ ಎಲ್ಲೂ ನೀರು ನೀಡಿಲ್ಲ. ಸಾಕಷ್ಟು ಬಾರಿ ಮನವಿ ಮಾಡಿದರೂ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ, ಇ ಬಗ್ಗೆ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಗಮನ ಹರಿಸಿ ಬೆಳಗುಂಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಬಗೆಹರಿಸಬೇಕು.
– ಸಂಜಯ್, ರಾಣಿಚೆನ್ನಮ್ಮ ಬಡಾವಣೆ, ಬೆಳಗುಂಬ
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap