ಆತಂಕದಲ್ಲಿ ಕಾಲೇಜುಗಳು-ಗೊಂದಲದಲ್ಲಿ ವಿದ್ಯಾರ್ಥಿಗಳು
ತುಮಕೂರು:
ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಆದರೆ ಕಾಲೇಜುಗಳಿಗೆ ತಲುಪುತ್ತಿಲ್ಲ. ವರ್ಷ ಮುಗಿದರೂ ವಿದ್ಯಾರ್ಥಿ ವೇತನ ಜಮೆಯಾಗದೆ ಖಾಸಗಿ ಕಾಲೇಜುಗಳು ಅತಂತ್ರ ಸ್ಥಿತಿಯಲ್ಲಿವೆ. ಇಲಾಖೆಯಿಂದ ವಿದ್ಯಾರ್ಥಿಗಳ ಖಾತೆಗೆ ಹಣ ಹೋಗದೆ, ಕಾಲೇಜುಗಳಿಗೂ ಸಂದಾಯವಾಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇದು ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಸಮಸ್ಯೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಕಾಲೇಜುಗಳಿಗೆ ದಾಖಲಾಗುವಾಗ ಸರ್ಕಾರದಿಂದ ಹೇಗೋ ಶುಲ್ಕ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಖಾಸಗಿ ಕಾಲೇಜುಗಳು ದಾಖಲಾತಿ ಮಾಡಿಕೊಂಡಿವೆ. ಹಿಂದೆಲ್ಲ ನಿಯಮಾನುಸಾರ ಆ ವಿದ್ಯಾರ್ಥಿಗಳ ಹಣ ಕಾಲೇಜುಗಳಿಗೆ ಸಂದಾಯವಾಗುತ್ತಿತ್ತು.
ಕೆ 1 ವ್ಯವಸ್ಥೆಯಡಿ ವಿದ್ಯಾರ್ಥಿ ವೇತನ ಸರಳ ರೀತಿಯಲ್ಲಿ ಸಂದಾಯವಾಗುವ ವ್ಯವಸ್ಥೆ ಇತ್ತು. ಇತ್ತೀಚೆಗೆ ಸರ್ಕಾರ ಕೆ 2 ವ್ಯವಸ್ಥೆಯಡಿಯಲ್ಲಿ ಪ್ರತಿ ವಿದ್ಯಾರ್ಥಿಯ ಹೆಸರಿನಲ್ಲಿ ಆನ್‍ಲೈನ್ ಐಡಿ ತೆರೆಯಬೇಕಿರುವುದರಿಂದ ಇದು ಬಹುದೊಡ್ಡ ಸಮಸ್ಯೆಯಾಗಿ ಕುಳಿತಿದೆ. ಇದು ಇತ್ಯರ್ಥವಾಗದ ಪರಿಣಾಮ ಸಮಾಜ ಕಲ್ಯಾಣ ಇಲಾಖೆಯಿಂದ ಕಾಲೇಜುಗಳಿಗೆ ವಿದ್ಯಾರ್ಥಿ ವೇತನ ಸಂದಾಯವಾಗಿಲ್ಲ.
ಕಳೆದ ವರ್ಷದ ವಿದ್ಯಾರ್ಥಿ ವೇತನವೇ ಇನ್ನೂ ಸಂದಾಯವಾಗದಿರುವಾಗ ಈ ವರ್ಷದ ಪ್ರಕ್ರಿಯೆ ಹೇಗೆ ಎಂಬ ಆತಂಕ ಕೆಲವು ಕಾಲೇಜುಗಳಲ್ಲಿವೆ. ವಿದ್ಯಾರ್ಥಿ ವೇತನವನ್ನು ಆನ್‍ಲೈನ್ ವ್ಯವಸ್ಥೆಯಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಸಂದಾಯವಾಗುವ ರೀತಿಯಲ್ಲಿ ವ್ಯವಸ್ಥೆ ಜಾರಿ ಮಾಡಲಾಗಿದೆ.
ಇದಕ್ಕಾಗಿ ಪ್ರತಿ ವಿದ್ಯಾರ್ಥಿಯ ಹೆಸರಲ್ಲಿ ಒಂದು ಖಾತೆ ತೆರೆಯಬೇಕು. ಆನ್‍ಲೈನ್ ವ್ಯವಸ್ಥೆಯಲ್ಲಿ ಇವೆಲ್ಲವೂ ಆಗಬೇಕಿರು ವುದರಿಂದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಇದಕ್ಕಾಗಿಯೇ ನುರಿತ ಕಂಪ್ಯೂಟರ್ ಆಪರೇಟರ್‍ಗಳು ಬೇಕು. ಇದನ್ನು ನಿರ್ವಹಣೆ ಮಾಡುವ ಅಧಿಕಾರಿಯೊಬ್ಬರು ಇರಬೇಕು. ಇದಕ್ಕಾಗಿ ತರಬೇತಿ ನೀಡಬೇಕು. ಆದರೆ ಇದಾವುದೂ ನಡೆಯದೆ ಸರ್ಕಾರದಿಂದ ಬಿಡುಗಡೆಯಾಗಿರುವ ಹಣ ಹಾಗೆಯೇ ಕೊಳೆಯುತ್ತಿದೆ.
ಒಬ್ಬ ವಿದ್ಯಾರ್ಥಿಯ ವಿದ್ಯಾರ್ಥಿ ವೇತನದ ಖಾತೆ ಆನ್‍ಲೈನ್‍ನಲ್ಲಿ ತೆರೆಯಬೇಕಾದರೆ ಆ ವಿದ್ಯಾರ್ಥಿಯ ಸಂಪೂರ್ಣ ವಿವರದ ದಾಖಲೆಗಳನ್ನು ಅಪ್‍ಲೋಡ್ ಮಾಡಬೇಕು. ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆಗಳ ಜೊತೆಗೆ ಜಾತಿ ಪ್ರಮಾಣ ಪತ್ರ, ಬ್ಯಾಂಕ್ ದಾಖಲೆ ಇತ್ಯಾದಿಗಳನ್ನು ನೀಡಬೇಕು.
ಈ ವ್ಯವಸ್ಥೆಯನ್ನು ಸಮಾಜ ಕಲ್ಯಾಣ ಇಲಾಖೆಯೇ ಮಾಡಬೇಕು. ಈ ಹಿಂದೆ ಶಿವಕುಮಾರ್ ಎನ್ನುವವರು ಈ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದರು. ಅವರು ಬೇರೊಂದು ಕಡೆ ವರ್ಗಾವಣೆಯಾದ ಕಾರಣ ಇಡೀ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಿ ವಿದ್ಯಾರ್ಥಿ ವೇತನ / ಶುಲ್ಕ ಹಂಚುವ ಪ್ರಕ್ರಿಯೆಗೆ ಚಾಲನೆ ನೀಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ