ಹೊನ್ನಾಳಿ:
ತಾಲೂಕಿನ ದಿಡಗೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕೊಠಡಿಯ ಮೇಲ್ಛಾವಣಿ ಕುಸಿದಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗಿದೆ. ಶಾಲಾ ತರಗತಿ ಕೊಠಡಿಯ ಮೇಲ್ಛಾವಣಿ ಶಿಥಿಲಗೊಂಡಿದ್ದು, ಹೆಂಚುಗಳು ಒಂದೊದಾಗಿ ಬೀಳುತ್ತಿವೆ. ಮೇಲ್ಛಾವಣಿಯ ರೀಪರ್‌ಗಳು ಕೂಡ ಗೆದ್ದಲು ಹುಳುಗಳ ದಾಳಿಯಿಂದ ಹಾಳಾಗಿದ್ದು, ಕೊಠಡಿಯ ಒಳಗೆ ಯಾರಾದರೂ ಹೋದರೆ ಯಾವಾಗ ಬೇಕಾದರೂ ತಲೆ ಮೇಲೆ ಹೆಂಚುಗಳು ಬೀಳುವ ಆತಂಕದ ಪರಿಸ್ಥಿತಿ ಇದೆ.
ಶಾಲಾ ಕೊಠಡಿ ತೀವ್ರ ಹಾಳಾಗಿರುವ ಕಾರಣ ವಿದ್ಯಾರ್ಥಿಗಳನ್ನು ಬೇರೊಂದು ಕೊಠಡಿಯಲ್ಲಿ ಕುಳ್ಳಿರಿಸಿ ಪಾಠ ಹೇಳಲಾಗುತ್ತಿದೆ. ಆದರೆ, ಶಿಥಿಲಗೊಂಡ ಕೊಠಡಿಯಲ್ಲಿರುವ ಶಾಲೆಯ ವಿವಿಧ ವಸ್ತುಗಳು ಹಾಳಾಗುವ ಹಂತ ತಲುಪಿವೆ.
ನೂತನ ಕೊಠಡಿ ನಿರ್ಮಿಸಲು ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆಯಾದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮದ ಮುಖಂಡರಾದ ದಿಡಗೂರು ಡಿ.ಎಂ. ಪ್ರಭಾಕರ್.ಶಾಲಾ ಕೊಠಡಿ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಮಕ್ಕಳ ಸುರಕ್ಷತೆಯೇ ನಮಗೆ ಸವಾಲಿನ ಕೆಲಸವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಸುಸಜ್ಜಿತ ನೂತನ ಕೊಠಡಿ ನಿರ್ಮಿಸಲು ಮುಂದಾಗಬೇಕು ಎನ್ನುತ್ತಾರೆ ಶಾಲಾ ಶಿಕ್ಷಕರಾದ ಡಿ. ಚಂದ್ರಪ್ಪ, ಎಸ್. ಶಾಂತಮ್ಮ, ಎಸ್. ಚಂದ್ರಪ್ಪ, ಸುಮಂಗಳಾ.ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಶೀಘ್ರವೇ ನೂತನ ಕೊಠಡಿ ನಿರ್ಮಾಣಕ್ಕೆ ಕ್ರಮ ಜರುಗಿಸಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ