ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ವರ್ಷಾರಂಭದ ಸಂಭ್ರಮ

ತುಮಕೂರು

    ಬುಧವಾರ ಸರ್ಕಾರಿ ಶಾಲೆಗಳಲ್ಲಿ ಆರಂಭೋತ್ಸವದ ಸಂಭ್ರಮ. ಶಾಲಾ ಕೊಠಡಿ, ಆವರಣ ಸ್ವಚ್ಚಗೊಳಿಸಿ, ಸಾರಿಸಿ, ರಂಗೋಲಿ ಹಾಕಿ, ಬಾಳೆ ಕಂಬ, ಮಾವಿನ ತೋರಣ ಕಟ್ಟಿ ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸಲು ಸಿದ್ಧಮಾಡಲಾಗಿತ್ತು. ಬೇಸಿಗೆ ರಜೆ ಮುಗಿಸಿ ಮೊದಲ ದಿನ ಶಾಲೆಗೆ ಬರುವ ಮಕ್ಕಳಿಗೆ ಆಹಗಲಾದಕರ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಎಲ್ಲಾ ಶಾಲೆಗಳಲ್ಲೂ ಸಡಗರದ ಸಮಾರಂಭ ಏರ್ಪಡಿಸಬೇಕೆಂಬುದು ಇಲಾಖೆ ಸೂಚನೆಯಾಗಿದೆ.

      ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು ಶಾಲೆಗೆ ಬಂದ ಮಕ್ಕಳು, ಅವರ ಪೋಷಕರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಮಕ್ಕಳಿಗೆ ಸಿಹಿ ವಿತರಿಸಿ ಶುಭ ಹಾರೈಸಿದರು. ಇಲಾಖೆವತಿಯಿಂದ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಿದರು.ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಮಕ್ಕಳಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಎಂದಿನ ಬಿಸಿಯೂಟದ ಜೊತೆಗೆ ಬುಧವಾರ ಪಾಯಸದ ಅಡುಗೆ ಮಾಡಿ ಬಡಿಸಲಾಯಿತು.

    ಕೆಲ ಶಾಲೆಗಳಲ್ಲಿ ಮಕ್ಕಳು ಗ್ರಾಮದಲ್ಲಿ ಜಾಥಾ ನಡೆಸಿ, ಶಿಕ್ಷಣದ ಮಹತ್ವ ಸಾರಿ ಹೇಳುತ್ತಾ ನಾವು ಶಾಲೆಗೆ ಬಂದಿದ್ದೇವೆ, ಎಲ್ಲಾ ಮಕ್ಕಳೂ ಬನ್ನಿ ಎಂದು ಜಾಗೃತಿ ಮೂಡಿಸಿದರು.

    ಇದರ ಅಂಗವಾಗಿ ಅನೇಕ ಶಾಲೆಗಳಲ್ಲಿ ನಡೆದ ಸಮಾರಂಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು, ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಪಾಲ್ಗೊಂಡಿದ್ದರು. ಮಕ್ಕಳ ಶಿಕ್ಷಣದ ಮಹತ್ವ, ಸರ್ಕಾರದ ಸೌಕರ್ಯಗಳ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು. ಜಿಲ್ಲೆಯ 1 ರಿಂದ 7ನೇ ತರಗತಿವರೆಗಿನ 2051 ಸರ್ಕಾರಿ ಪ್ರಾಥಮಿಕ ಶಾಲೆ, 133 ಸರ್ಕಾರಿ ಪ್ರೌಢಶಾಲೆಗಳು, 56 ಅನುದಾನಿತ ಪ್ರಾಥಮಿಕ ಹಾಗೂ 202 ಪ್ರೌಢಶಾಲೆಗಳು, 289 ಅನುದಾನರಹಿತ ಪ್ರಾಥಮಿಕ ಹಾಗೂ 131 ಪ್ರೌಢಶಾಲೆಗಳು ಬುಧವಾರ ಪ್ರಾರಂಭವಾದವು. ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ 11 ಮೊರಾರ್ಜಿ ದೇಸಾಯಿ, 5 ಕಿತ್ತೂರು ರಾಣಿ ಚೆನ್ನಮ್ಮ, 7 ಅಂಬೇಡ್ಕರ್ 4ಇಂದಿರಾ ವಸತಿ ಶಾಲೆ ಹಾಗೂ 6 ಮೌಲನಾ ಅಜಾದ್ ಶಾಲೆಗಳಲ್ಲಿಯೂ ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು.

    ಡಿಡಿಪಿಐ ಕಾಮಾಕ್ಷಿ ಅವರು ಜಿಲ್ಲೆಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದ ಆಚರಣೆ ಚಟುವಟಿಕೆ ಪರಿಶೀಲಿಸಿದರು. ಬಹಳಷ್ಟು ಶಾಲೆಗಳಲ್ಲಿ ಮೊದಲ ದಿನ ಮಕ್ಕಳ ಹಾಜರಾತಿ ಕಮ್ಮಿ ಇತ್ತು. ಶೇಕಡ 40ರಿಂದ 50ರಷ್ಟು ಮಕ್ಕಳು ಹಾಜರಿದ್ದರು. ಹಾಜರಿದ್ದ ಎಲ್ಲಾ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಲಾಯಿತು ಎಂದರು.ಗೈರು ಹಾಜರಾದ ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆಗೆ ಕರೆತರಲು ಮಕ್ಕಳ ಹಾಗೂ ಪೋಷಕರ ಮನವೊಲಿಸುವಂತೆ ಎಸ್‍ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಡಿಡಿಪಿಐ ಹೇಳಿದರು.

    ಮಕ್ಕಳು ಶಾಲೆ ಬಿಡುವ ಮುನ್ಸೂಚನೆ ಕಂಡು ಬಂದಲ್ಲಿ ತಕ್ಷಣವೇ ಪೋಷಕರೊಂದಿಗೆ ಸಮಾಲೋಚಿಸಿ, ಯಾವ ಕಾರಣದಿಂದಲೂ ಮಗು ಶಾಲೆ ತೊರೆಯದಂತೆ ಶಿಕ್ಷಕರು ನಿಗಾವಹಿಸಬೇಕು. ಶಿಕ್ಷಣ ಹೊಂದುವುದು ಮಕ್ಕಳ ಮೂಲಭೂತ ಹಕ್ಕು. ಈ ನಿಟ್ಟಿನಲ್ಲಿ ಶಾಲೆ ಪ್ರಾರಂಭವಾದ ನಂತರ ವಿವಿಧ ಕಾರಣಗಳಿಂದ ಗೈರು ಹಾಜರಾಗುವ ಮಕ್ಕಳನ್ನು ಶಾಲೆಗೆ ಬರುವಂತೆ ಶಿಕ್ಷಕರು ಅವರ ಮನವೊಲಿಸುವ ಕೆಲಸ ಮಾಡಬೇಕು. ಮಕ್ಕಳಿಗಾಗಿ ರಾಜ್ಯ ಸರ್ಕಾರವು ಉಚಿತವಾಗಿ ಪಠ್ಯ ಪುಸ್ತಕ, ಸಮವಸ್ತ್ರ, ಶೂ, ಮಧ್ಯಾಹ್ನದ ಊಟ, ಕ್ಷೀರಭಾಗ್ಯ, ಬೈಸಿಕಲ್ ವಿತರಣೆ, ಮತ್ತಿತರ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಇವುಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾವಂತರಾಗಬೇಕು ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap