ಅಮಾನಿಕೆರೆಯಲ್ಲಿ ಸೈನ್ಸ್ ಅಂಡ್ ಫಿಟ್ನೆಸ್ ಥೀಮ್ ಪಾರ್ಕ್ 

ಸೂಕ್ತ ರೀತಿಯಲ್ಲಿ ಬಳಕೆ ಸಾಧ್ಯವೇ..?
ತುಮಕೂರು
ವಿಶೇಷ ವರದಿ :ರಾಕೇಶ್.ವಿ.
      ತುಮಕೂರು ನಗರದಲ್ಲಿ ಕೆಲ ಉದ್ಯಾನವನಗಳನ್ನು ಫಿಟ್ನೆಸ್  ಥೀಮ್ ಪಾರ್ಕ್, ಸೈನ್ಸ್ ಥೀಮ್ ಪಾರ್ಕ್ ಸೇರಿದಂತೆ ಇನ್ನಿತರ ಮಾದರಿಗಳಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಅದರಲ್ಲಿ ಅಮಾನಿಕೆರೆ ಆವರಣದಲ್ಲಿ ಸಿದ್ಧಗೊಳ್ಳುತ್ತಿರುವ ಸೈನ್ಸ್ ಹಾಗೂ ಓಪನ್ ಜಿಮ್ ಪಾರ್ಕ್ ಒಂದಾಗಿದೆ. ಆದರೆ ಇದು ಸೂಕ್ತ ರೀತಿಯಲ್ಲಿ ಬಳಕೆಯಾಗುವುದೇ ಎಂಬ ಪ್ರಶ್ನೆ ಉದ್ಭವಗೊಂಡಿದೆ.
     ಸ್ಮಾರ್ಟ್ ಸಿಟಿ ವತಿಯಿಂದ 49,40,000 ರೂ ವೆಚ್ಚದಲ್ಲಿ ವಿಜ್ಞಾನ ಮಾಹಿತಿ ಆಧಾರಿತ ಉದ್ಯಾನವನ ಸಿದ್ಧಗೊಳ್ಳುತ್ತಿದೆ. ಈ ಉದ್ಯಾನವನದಲ್ಲಿ ವಿಜ್ಞಾನ ಸಂಬಂಧಿಸಿದ ಹಾಗೂ ಜಿಮ್‍ಗೆ  ಸಂಬಂಧಿಸಿದ ಉಪಕರಣಗಳನ್ನು ಅಳವಡಿಸಲಾಗಿದೆ. 
ಸೈನ್ಸ್ ಥೀಮ್ ಪಾರ್ಕ್
   ವಿಜ್ಞಾನ, ಭೌತಶಾಸ್ತ್ರ, ತಂತ್ರಜ್ಞಾನದ ಅರಿವು ಮತ್ತು ಲಾಭ ಎಲ್ಲರಿಗೂ ಸಿಗಬೇಕು ಎಂಬ ಉದ್ದೇಶದಿಂದ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಟ್ ವತಿಯಿಂದ ವಿಜ್ಞಾನ ಮತ್ತು ಭೌತಶಾಸ್ತ್ರವನ್ನು ಭೋಧಿಸುವ ಸೈನ್ಸ್ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲ ಮೆದುಳಿಗೆ ಮನರಂಜನೆ ಒದಗಿಸುವ ಅನೇಕ ವಿಜ್ಞಾನ ಮತ್ತು ಭೌತಶಾಸ್ತ್ರವನ್ನು ಬೋಧಿಸುವ ಆಟಗಳು, ಸಾಹಸ  ಇಲ್ಲಿ ಕಾಣಬಹುದಾಗಿದೆ. 
39 ಲಕ್ಷ ವೆಚ್ಚ ಖರ್ಚು
    ಅಮಾನಿಕೆರೆ ಆವರಣದಲ್ಲಿ ನಿರ್ಮಾಣ ಮಾಡಲಾದ ವಿಜ್ಞಾನ ವಿಷಯಾಧಾರಿಯ ಉದ್ಯಾನವನಕ್ಕೆ 39,02,780 ರೂಗಳ ಖರ್ಚನ್ನು ವೆಚ್ಚ ಮಾಡಲಾಗಿದೆ. ಈ ಕಾಮಗಾರಿಯನ್ನು ಮೈಕಾನ್ ಕನ್‍ಸ್ಟ್ರಕ್ಷನ್ಸ್ ಲಿಮಿಟೆಡ್ ನವರು ಮಾಡುತ್ತಿದ್ದು, ಮೂರು ತಿಂಗಳ ಅವಧಿಯನ್ನು ನೀಡಲಾಗಿದೆ. ಜುಲೈ 23ರಿಂದ ಮೂರು ತಿಂಗಳ ಕಾಲಾವದಿ ಎಂದರೆ ಅಕ್ಟೋಬರ್ 23ಕ್ಕೆ ಪೂರ್ಣವಾಗಬೇಕು. ಈಗಾಗಲೇ ನವೆಂಬರ್ ತಿಂಗಳು ಮುಗಿದರೂ ಇನ್ನೂ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಲೇ ಇದ್ದಾರೆ.
ಅಳವಡಿಸಲಾದ ಪರಿಕರಗಳು
     ಡಬಲ್ ಎಂಡ್ ಕೋನ್, ವೋರ್ಟೆಕ್ಸ್, ಲೂಪ್ ದಿ ಲೂಪ್, ಸುಂದಿಯಲ್, ನ್ಯೂಟನ್ ಕಲರ್ ಡಿಸ್ಕ್, ಶಕ್ತಿಯ ಸಂರಕ್ಷಣೆ, ಪೂಲ್ಲಿ  ಮತ್ತು  ಪೂಲ್ಲಿ ಬ್ಲಾಕ್, ಮ್ಯೂಸಿಕಲ್ ಟ್ಯೂಬ್‍ಗಳು, ಆರ್ಕಿಮಿಡಿಸ್ ಸ್ಕ್ರ್ಯೂ,  ಲಿಥೋಫೋನ್, ಸ್ವಿಂಗ್ ಪೆಂಡುಲಮ್  ಸೇರಿದಂತೆ 23 ವಿಧದ ವಿಜ್ಞಾನ ಪರಿಕರಗಳನ್ನು ಅಳವಡಿಸಲಾಗಿದೆ. ಭೌತಶಾಸ್ತ್ರದ ಪ್ರಯೋಗಗಳ ವಸ್ತುಗಳನ್ನು ಪ್ರದರ್ಶನ ಮಾಡುವುದು ಸೇರಿದಂತೆ ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಪರಿಕರಗಳನ್ನು ಆಂಕಿಡೈನ್ ಎಂಬ ಕಂಪನಿಯು ಒದಗಿಸಿದೆ. 
ಸುರಕ್ಷತೆ ಆದ್ಯತೆ ನೀಡಬೇಕಿದೆ
     ವಿಜ್ಞಾನ ವಿಷಯಾಧಾರಿತ ಉದ್ಯಾನವನದಲ್ಲಿ ಅಳವಡಿಸಲಾದ ವಸ್ತುಗಳ ಸುರಕ್ಷತೆಗೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ. ಕೇವಲ ಓರ್ವ ಸೆಕ್ಯುರಿಟಿ ಇರುವುದನ್ನು ಬಿಟ್ಟರೆ ಇತರೆ ಯಾವುದೇ ರೀತಿಯಲ್ಲಿ ಸುರಕ್ಷತೆಗೆ ಆದ್ಯತೆ ನೀಡದೇ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇನ್ನೂ ಉದ್ಯಾನವನದ ಉದ್ಘಾಟನೆಯಾಗಿಲ್ಲವಾದ್ದರಿಂದ ಅಲ್ಲಿಗೇ ಪ್ರವೇಶ ಇಲ್ಲ. ಒಮ್ಮೆ ಪ್ರವೇಶ ದೊರೆತಲ್ಲಿ ಅಲ್ಲಿಗೆ ಮಕ್ಕಳೂ ಬರುತ್ತಾರೆ. ದೊಡ್ಡವರು ಬರುತ್ತಾರೆ. ಆಗ ಅಲ್ಲಿ ನಡೆಯಬಹುದಾದ ತುಂಟ ಕೆಲಸಗಳಿಗೆ ಅಳವಡಿಕೆ ಮಾಡಲಾದ ವಿಜ್ಞಾನ ಉಪಕರಣಗಳಿಗೆ ಸುರಕ್ಷತೆ ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ.
ವಸ್ತುಗಳು ಹಾಳಾಗುವ ಸಾಧ್ಯತೆಗಳೇ ಹೆಚ್ಚು
     ಅಮಾನಿಕೆರೆಯ ಬಲಭಾಗದಲ್ಲಿ ಮಕ್ಕಳು ಆಟವಾಡಲೆಂದು ಟೂಡಾ ವತಿಯಿಂದ ಅಳವಡಿಕೆ ಮಾಡಲಾದ ಆಟದ ಸಲಕರಣೆಗಳೇ ಹಾಳಾಗಿವೆ. ಇದೀಗ ಅದರ ಪಕ್ಕದಲ್ಲೇ ಅಳವಡಿಕೆ ಮಾಡಲಾದ ವಿಜ್ಞಾನದ ಪರಿಕರಗಳನ್ನು ಬಳಕೆ ಮಾಡುವಾಗ ಹಾಳಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಉದಾಹರಣೆಗೆ ಲೂಪ್ ದ ಲೂಪ್ ಎಂಬ ಸಲಕರಣೆಯನ್ನು ಅಲ್ಲಿ ಅಳವಡಿಸಲಾಗಿದೆ. ಇಲ್ಲಿ ಮೇಲ್ಬಾಗದಲ್ಲಿ ಒಂದು ಚೆಂಡನ್ನು ಇಟ್ಟರೆ ಅದರ ವೇಗದೊಂದಿಗೆ ಹೇಗೆ ತನ್ನ ಗುರಿ ತಲುಪುತ್ತದೆ ಎಂಬುದನ್ನು ನೋಡಬಹುದಾಗಿದೆ. ಆದರೆ ಯಾರಾದರೂ ಇದರ ಮೇಲೆ ಹತ್ತಿದರೆ ಅದು ಒರಗಿಕೊಳ್ಳುತ್ತದೆ. ಆಗ ಚೆಂಡು ತನ್ನ ಗುರಿ ತಲುಪಲು ಸಾಧ್ಯವಾಗುವುದಿಲ್ಲ. ಹೀಗೆ ವಿವಿಧ ವಸ್ತುಗಳು ಹಾಳಾಗುವ ಸಾಧ್ಯತೆಗಳಿವೆ.
ಓಪನ್ ಜಿಮ್ ಪಾರ್ಕ್
      ಸೈನ್ ಥೀಮ್ ಪಾರ್ಕ್ ಜೊತೆಗೆ ಪಕ್ಕದಲ್ಲಿಯೇ ಓಪನ್ ಜಿಮ್ ಪಾರ್ಕ್‍ನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಉಚಿತವಾಗಿ ಜಿಮ್ ಮಾಡುವ ಉದ್ದೇಶದಿಂದ 8 ಪರಿಕರಗಳನ್ನು ಅಳವಡಿಸಲಾಗಿದೆ. ಹಣ ಖರ್ಚು ಮಾಡಿ ಜಿಮ್‍ಗೆ ಹೋಗೋದಕ್ಕೆ ಆಗುವುದಿಲ್ಲ. ಅವರು ಹೇಳಿದ ಸಮಯಕ್ಕೆ ಹೋಗಲು ಆಗುವುದಿಲ್ಲ. ಮನೆಯಲ್ಲಿ ಮಾಡಲು ಕೊಂಡುಕೊಳ್ಳುವಷ್ಟು ಹಣ ನಮ್ಮಲ್ಲಿಲ್ಲ ಎಂಬುವವರಿಗೆ ಉಚಿತವಾಗಿ ಜಿಮ್ ಮಾಡಲು ಅನುಕೂಲವಾಗುವಂತೆ ಓಪನ್ ಜಿಮ್‍ನ್ನು ನಿರ್ಮಾಣ ಮಾಡಲಾಗಿದೆ.
ಅಳವಡಿಸಲಾದ ಸಲಕರಣೆಗಳು
      ಅಮಾನಿಕರೆ ಕೆಇಬಿ ಜಂಕ್ಷನ್ ಬಳಿರುವ ಮಕ್ಕಳ ಆಟದ ಪ್ರದೇಶದಲ್ಲಿ ಇಂತಹ ಉಪಕರಣಗಳನ್ನು ಅಳವಡಿಸಲಾಗಿದ್ದು, ಗೃಹಿಣಿಯರು, ವಿದ್ಯಾರ್ಥಿಗಳು ತಮಗೆ ಅನುಕೂಲಕರವಾದ ವೇಳೆಯಲ್ಲಿ ಉದ್ಯಾನಕ್ಕೆ ಬಂದು ದೈಹಿಕ ಕಸರತ್ತು ನಡೆಸಬಹುದಾಗಿದೆ. ಆರ್ಮ್ ವೀಲ್, ಏರ್ ಸ್ವಿಂಗ್, ಲೆಗ್ ಎಕ್ಸೈಜ್, ಸ್ಟೆಪ್ಪರ್/ಟ್ವಿಸ್ಟರ್, ಫುಲ್ ಅಪ್, ರೋವಿಂಗ್, ಡಬಲ್ ಏರ್ ವಾಕರ್, ಲೆಗ್ ಪ್ರೆಸ್, ಕ್ರಾಸ್ ಟ್ರೈನರ್, ಚೆಸ್ಟ್ ಕಮ್ ಶೋಲ್ಡರ್ ಪ್ರೆಸ್ ಡಬಲ್, ಪುಲ್ ಅಂಡ್ ಪುಷ್ ಚೇರ್, ಪ್ಯಾರಲಲ್ ಬಾರ್ಸ್ ಹೀಗೆ ಹಲವು ವಿಧದ ಉಪಕರಣಗಳನ್ನು ಈ ಉದ್ಯಾನಗಳಲ್ಲಿ ಅಳವಡಿಸಲಾಗಿದೆ.
ಒಂದು ವರ್ಷ ಗುತ್ತಿಗೆದಾರರ ನಿರ್ವಹಣೆ
     ಸೈನ್ಸ್ ಥೀಮ್ ಪಾರ್ಕ್ ಹಾಗೂ ಓಪನ್ ಜಿಮ್‍ಅನ್ನು ಬೇರೆ ಬೇರೆ ಗುತ್ತಿಗೆದಾರರು ಟೆಂಡರ್ ಪಡೆದು ಕಾಮಗಾರಿ ಮಾಡಿದ್ದು, ಅವುಗಳು ಪೂರ್ಣಗೊಂಡ ನಂತರ ಒಂದು ವರ್ಷದ ತನಕ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅದಾದ ನಂತರ ಪಾಲಿಕೆ ವ್ಯಾಪ್ತಿಗೆ ಜವಾಬ್ದಾರಿ ನೀಡಲಾಗುತ್ತದೆಯೋ ಅಥವಾ ಟೂಡಾ ಇಲಾಖೆಗೆ ಜವಾಬ್ದಾರಿ ನೀಡಲಾಗುತ್ತದೆಯೋ ಎಂಬುದು ಚರ್ಚಾದಾಯಕವಾಗಿದೆ. 
ಜಿಮ್ ಸಲಕರಣೆಗೆ 32 ಲಕ್ಷ ರೂಗಳು
   ಜಿಮ್ ಸಲಕರಣೆಗಳ ಅಳವಡಿಕೆಯ ಗುತ್ತಿಗೆಯನ್ನು  ಎಂ/ಎಸ್ ವಿವೇಕ್ ಕನ್ಸ್‍ಟ್ರಕ್ಷನ್ಸ್ ಎಂಬ ಕಂಪನಿಯು ಪಡೆದಿದ್ದು, ಮೂರು ವಿವಿಧ ಸ್ಥಳಗಳಲ್ಲಿ ಜಿಮ್ ಸಲಕರಣೆಗಳ ಅಳವಡಿಕೆಗೆ 32,23,320 ರೂಗಳನ್ನು ಖರ್ಚು ಮಾಡಲಾಗಿದೆ. ಅಮಾನಿಕೆರೆಯ ಉದ್ಯಾನವನದಲ್ಲಿ 8 ಸಲಕರಣೆಗಳು, ಸಿದ್ದರಾಮೇಶ್ವರ ಬಡಾವಣೆ ಉದ್ಯಾನವನದಲ್ಲಿ 8 ಸಲಕರಣೆಗಳು ಹಾಗೂ ಬಾಲಭವನದಲ್ಲಿ ಮಕ್ಕಳಿಗೆ ಆಟವಾಡಲು 6 ಬಗೆಯ ಸಲಕರಣೆಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಎಂಟು ಸಲಕರಣೆಗಳಿಗೆ ಕನಿಷ್ಠ 10 ಲಕ್ಷಗಳವರೆಗೆ ಖರ್ಚು ಮಾಡಿರಬಹುದು. ಕೇವಲ 8 ಸಲಕರಣೆಗಳು ಅಷ್ಟು ಬೆಲೆ ಬಾಳುತ್ತವೆಯೇ ಎಂಬುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap