ಪರಿಶಿಷ್ಟ ಜಾತಿ-ಪಂಗಡದ ಉಪವಿಭಾಗ ಮಟ್ಟದ ಸಭೆ ಡಿ.27 ಕ್ಕೆ ಮುಂದೂಡಿಕೆ

ದೊಡ್ಡೇರಿ

      ಮಧುಗಿರಿ ಉಪವಿಭಾಗಕ್ಕೆ ಸೇರಿದ ನಾಲ್ಕು ತಾಲ್ಲೂಕುಗಳಲ್ಲಿ, ಮೊದಲು ಎರಡು ತಾಲ್ಲೂಕುಗಳ ನಂತರ ಉಳಿದ ಎರಡು ತಾಲ್ಲೂಕುಗಳ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳ ಕುಂದುಕೊರತೆ ಸಭೆ ನಡೆಸಲಾಗುವುದು ಎಂಬ ಉಪವಿಭಾಗಾಧಿಕಾರಿಗಳ ಹೇಳಿಕೆಯನ್ನು ವಿರೋಧಿಸಿ ಸಂಘಟನೆಗಳ ಮುಖಂಡರು ದಿಢೀರ್ ಪ್ರತಿಭಟನೆ ನಡೆಸಿದರು.

      ಪಟ್ಟಣದ ತಾಪಂ ಕಚೇರಿಯ ಆವರಣದಲ್ಲಿ ಗುರುವಾರ ಉಪವಿಭಾಗ ಮಟ್ಟದ ಪ.ಜಾತಿ ಮತ್ತು ಪ.ಪಂಗಡಗಳ ಸಭೆಯನ್ನು ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯನವರ ಅಧ್ಯಕ್ಷತೆಯಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಮೊದಲು ಸಿರಾ ಮತ್ತು ಪಾವಗಡ, ನಂತರ ಮಧ್ಯಾಹ್ನ ಕೊರಟಗೆರೆ ಹಾಗೂ ಮಧುಗಿರಿ ತಾಲ್ಲೂಕುಗಳ ಪ.ಜಾ., ಪ.ಪಂಗಡ ಸಮುದಾಯಗಳ ಸಭೆ ನಡೆಸಲಾಗುವುದು ಎಂದರು.

      ಇದನ್ನು ವಿರೋಧಿಸಿದ ಮುಖಂಡ ದೊಡ್ಡೇರಿ ಕಣಿಮಯ್ಯ, ಉಪವಿಭಾಗದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಈ ರೀತಿಯಾದಂತಹ ಎರಡು ಹಂತಗಳ ಸಭೆಯನ್ನು ನಡೆಸಲು ಉದ್ದೇಶಿಸಿರುವುದು. ಜಿಲ್ಲಾಧಿಕಾರಿಗಳೆ 11 ತಾಲ್ಲೂಕುಗಳ ಮುಖಂಡರ ಸಭೆ ನಡೆಸುತ್ತಾರೆ. ಆದರೆ ನೀವು ಹಾಜರಾತಿ ಕಡಿಮೆ ಇರುವ ಮುಖಂಡರು ಹಾಗೂ ಅಧಿಕಾರಿಗಳ ಜೊತೆ ಸಭೆ ಪ್ರಾರಂಭಿಸಿ ಎನ್ನುವುದು ಸರಿಯೇ? ನಮ್ಮ ಸಮಸ್ಯೆಗಳು ಬಗೆಹರಿಯುವುದಾದರೂ ಹೇಗೆ ಎಂದು ಪ್ರತಿಭಟಿಸಿ ಸಭೆಯಿಂದ ಹೊರ ನೆಡೆದರು.

       ನಂತರ ಸಂಘಟನೆಗಳ ಮುಖಂಡರು ಉಪವಿಭಾಗಾಧಿಕಾರಿ ವಿರುದ್ಧ ಧಿಕ್ಕಾರ ಕೂಗುತ್ತಾ, ಪ್ರತಿಭಟನೆ ನಡೆಸಲು ಮುಂದಾದರು. ಆಗ ಸಿಪಿಐ ಅಂಬರೀಶ್ ಹಾಗೂ ಸಮಾಜ ಕಲ್ಯಾಣಾಧಿಕಾರಿ ಮಹಾದೇವಸ್ವಾಮಿ ಪ್ರತಿಭಟನಾ ನಿರತರ ಮನವೊಲಿಸಿದರು. ನಂತರ ಉಪವಿಭಾಗಾಧಿಕಾರಿಗಳ ಸೂಚನೆಯ ಮೇರೆಗೆ ಡಿ.27ಕ್ಕೆ ಸಭೆಯನ್ನು ಮುಂದೂಡಿದರು. ತಾಲ್ಲೂಕು ಮಟ್ಟದಲ್ಲಿಯೇ ಸಮಸ್ಯೆಗಳನ್ನು ಬಗೆ ಹರಿಸಿಕೊಂಡು, ನಂತರ ಉಪವಿಭಾಗ ಮಟ್ಟದಲ್ಲಿ ಆಗಬೇಕಾಗಿರುವ ಕೆಲಸ ಕಾರ್ಯಗಳನ್ನು ಚರ್ಚಿಸಲು ಅವಕಾಶ ನೀಡಲಾಗುವುದು ಎಂಬ ಭರವಸೆಯ ಮೇಲೆ ಪ್ರತಿಭಟನೆಯನ್ನು ಕೈ ಬಿಡಲಾಯಿತು.

       ತೊಂಡೋಟಿ ರಾಮಾಂಜಿ, ಎಂ.ವೈ.ಶಿವಕುಮಾರ್, ನರಸಿಂಹಮೂರ್ತಿ, ಸಂಜೀವಯ್ಯ, ಕೆ.ಶಿವಣ್ಣ, ಪಾವಗಡದ ಸಿ.ಕೆ.ತಿಪ್ಪೇಸ್ವಾಮಿ, ಪೆದ್ದನ್ನ, ಶಿರಾ ಯೋಗಾನಂದ್, ಭೀಮಯ್ಯ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link